ಭಾನುವಾರ, ಆಗಸ್ಟ್ 7, 2022
21 °C
ಬಿಳಿಗಿರಿ ರಂಗನಬೆಟ್ಟದಲ್ಲಿ ಕೋವಿಡ್‌ ಟಾಸ್ಕ್‌ ಫೋರ್ಸ್‌ ಸಭೆ ನಡೆಸಿದ ಸಚಿವ ಸುರೇಶ್‌ ಕುಮಾರ್‌

ಹಿಂಜರಿಕೆ ಇಲ್ಲದೆ ಲಸಿಕೆ ಪಡೆಯಿರಿ: ಗಿರಿಜನರಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು/ಚಾಮರಾಜನಗರ: ‘ಕೋವಿಡ್‌ ಮುಕ್ತ ಗ್ರಾಮ ಪಂಚಾಯಿತಿ ಎಂಬ ಕೀರ್ತಿಗೆ ಪಾತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿಯು, ಶೇ 100ರಷ್ಟು ಲಸಿಕೆ ಪಡೆದ ಗ್ರಾಮ ಪಂಚಾಯಿತಿ ಎಂಬ ಸಾಧನೆಯನ್ನೂ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ಆಶಿಸಿದರು. 

ಬೆಟ್ಟದ ಪುರಾಣಿ ಪೋಡಿನಲ್ಲಿ ಸೋಲಿಗರ ಜನತೆ, ಅರಣ್ಯ ವಾಸಿಗಳಿಗೆ ಆಯೋಜಿಸಲಾಗಿದ್ದ ಲಸಿಕೆ ಕಾರ್ಯದಲ್ಲಿ ಪಾಲ್ಗೊಂಡ ಬಳಿಕ ಬಿಳಿಗಿರಿರಂಗನ ಬೆಟ್ಟದ ವಿಜಿಕೆಕೆ ಆವರಣದಲ್ಲಿ ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ನಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯುವುದು ಅತ್ಯಂತ ಮುಖ್ಯ. ಹೀಗಾಗಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸೋಲಿಗ ಸಮುದಾಯ, ಅರಣ್ಯ ವಾಸಿಗಳ ಮುಖಂಡರು ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಅವರು ಸಲಹೆ ನೀಡಿದರು. 

‘ಪಂಚಾಯಿತಿ ಪ್ರತಿನಿಧಿಗಳು ಮೊದಲು ಕೋವಿಡ್ ಲಸಿಕೆ ಪಡೆಯಬೇಕು. ನಂತರ ವಿವಿಧ ಪೋಡುಗಳಿಗೆ ತೆರಳಿ ಜಾಗೃತಿ ಮೂಡಿಸಬೇಕು. ಇದರಿಂದ ಅನಕ್ಷರಸ್ಥರಿಗೂ ಲಸಿಕೆ ಪಡೆಯುವ ಬಗ್ಗೆ ಆತ್ಮವಿಶ್ವಾಸ ಬರಲಿದೆ. ಸ್ತ್ರೀಯರು ಮತ್ತು ಯುವ ಜನತೆ ಲಸಿಕೆ ಪಡೆದರೆ, ಮಕ್ಕಲೂ ಸೋಂಕಿನಿಂದ ಪಾರಾಗುತ್ತಾರೆ. ರೋಗ ನಿರೋಧಕ ಶಕ್ತಿ ಹೆಚ್ಚು ಇದ್ದರೂ ಕೋವಿಡ್ ಲಸಿಕೆ ಆರೋಗ್ಯ ರಕ್ಷಣೆಗೆ ಅತ್ಯವಶ್ಯ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ’ ಎಂದರು.   

ಶಾಸಕ ಎನ್‌.ಮಹೇಶ್ ಅವರು ಮಾತನಾಡಿ, 'ಚುಚ್ಚುಮದ್ದು ಪಡೆಯಲು ಇತರರ ಸಲಹೆ ಕೇಳಬಾರದು. ಲಸಿಕೆಯಿಂದ
ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಲಸಿಕೆ ಪಡೆದು ಸಂಕಷ್ಟಕ್ಕೆ ಸಿಲುಕಿರುವ ಒಂದು ಉದಾಹರಣೆ ದೇಶದಲ್ಲಿ ಇಲ್ಲ. ಹಾಗಾಗಿ ಮುಖಂಡರು ಲಸಿಕೆ ಪಡೆಯಲು ನೆರೆಹೊರೆಯವರಲ್ಲಿ ಆತ್ಮ ವಿಶ್ವಾಸ ತುಂಬಬೇಕು' ಎಂದು ತಿಳಿಸಿದರು.

 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ  ರಂಗಮ್ಮ, ಉಪಾಧ್ಯಕ್ಷ ಬೇದೆಗೌಡ, ತಹಶೀಲ್ದಾರ್ ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಎಸ್.ಜವರೇಗೌಡ, ಸರ್ಕಲ್ ಇನ್ಸ್ಪೆಕ್ಟರ್ ಶಿವಮಾದಯ್ಯ, ಯಜಮಾನ ದೊಡ್ಡನಂಜನ ಜಡೇಗೌಡ, ಮುಖಂಡರಾದ ಸಿ. ಮಾದೇಗೌಡ, ಬೊಮ್ಮಯ್ಯ ಇತರರು ಇದ್ದರು. 

ಕನ್ನೇರಿ ಕಾಲೊನಿಗೂ ಭೇಟಿ: ಸಚಿವರು ನಂತರ, ಬೆಟ್ಟದ ವ್ಯಾಪ್ತಿಗೆ ಬರುವ ಚಾಮರಾಜನಗರ ತಾಲ್ಲೂಕಿನ ಕೆ.ಗುಡಿ ಬಳಿಯ ಕನ್ನೇರಿ ಕಾಲೊನಿಯಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಆಮ್ಲಜನಕ ಘಟಕ ಕಾಮಗಾರಿ ಪರಿಶೀಲನೆ

ಸಚಿವ ಎಸ್.ಸುರೇಶ್ ಕುಮಾರ್ ಅವರು ಜಿಲ್ಲಾ ಆಸ್ಪತ್ರೆ ಹಾಗೂ ಯಡಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹಾಗೂ ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೋಂಕಿತರ ಚಿಕಿತ್ಸೆ, ಆರೈಕೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಬಳಿಕ ಯಡಪುರದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಭೇಟಿ ಕೊಟ್ಟು ವಿವರ ಪಡೆದರು. ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 1,500 ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಜನರೇಟರ್ ಮತ್ತು 20 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕದ ಕಾಮಗಾರಿ ವೀಕ್ಷಿಸಿದರು. ಆಮ್ಲಜನಕ ಮ್ಯಾನಿಪೋಲ್ಡರ್ ಅಳವಡಿಕೆ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲಿಸಿದರು.

ತ್ವರಿತ ಹಾಗೂ ಸಮರ್ಪಕವಾಗಿ ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚಿಸಿದರು. 

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಸಂಜೀವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು