ಬುಧವಾರ, ಏಪ್ರಿಲ್ 14, 2021
24 °C
ಕೊನೆಯ ದಿನ ಆರು ಮಂದಿ ನಾಮಪತ್ರ, ಪ್ರೊ.ಮಲೆಯೂರು ಗುರುಸ್ವಾಮಿ ಕಣದಿಂದ ಹಿಂದಕ್ಕೆ?

ಕಸಾಪ: ಕುತೂಹಲ ಕೆರಳಿಸಿದ ಆಖಾಡ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮೇ 9ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ (ಏ.7) ಆರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 

ಈಗಾಗಲೇ ಮೂವರು (ಪ್ರೊ.ಮಲೆಯೂರು ಗುರುಸ್ವಾಮಿ, ಬಿ.ಎಸ್.ವಿನಯ್‌ ಮತ್ತು ಸಿ.ಎಂ.ನರಸಿಂಹಮೂರ್ತಿ) ನಾಮಪತ್ರ ಸಲ್ಲಿಸಿದ್ದರು. ಇದರೊಂದಿಗೆ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

ಇದರ ನಡುವೆಯೇ, ಅಧ್ಯಕ್ಷ ಸ್ಥಾನ ಬಯಸಿ, ಮೊದಲಿಗರಾಗಿ ನಾಮಪತ್ರ ಸಲ್ಲಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದ ಕಸಾಪ ಹಿರಿಯ ಸದಸ್ಯ ಪ್ರೊ.ಮಲೆಯೂರು ಗುರುಸ್ವಾಮಿ ಅವರು ನಾಮಪತ್ರ ವಾಪಸ್‌ ಪಡೆಯಲಿದ್ದಾರೆ ಎಂಬ ಮಾತು ಸಾಹಿತ್ಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.

ಆದರೆ, ಇದನ್ನು ಗುರುಸ್ವಾಮಿ ಅವರು ಖಚಿತ ಪಡಿಸಿಲ್ಲ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಯೋಚಿಸುತ್ತಿದ್ದೇನೆ. ಮುಂದೆ ನೋಡೋಣ ಏನಾಗುತ್ತದೆ’ ಎಂದಷ್ಟೇ ಹೇಳಿದರು.

ಅವರು ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. 

ಗುರುಗಳಾದ ಗುರುಸ್ವಾಮಿ ಅವರು ಸ್ಪರ್ಧಿಸಿದರೆ ತಾವು ಕಣಕ್ಕಿಳಿಯುವುದು ಸರಿಯಾಗುವುದಿಲ್ಲ ಎಂದು ಹೇಳಿದ್ದ ಪತ್ರಕರ್ತ ನಾಗೇಶ್‌ ಸೋಸ್ಲೆ ಅವರು ಕೊನೆಯ ದಿನ ನಾಮಪತ್ರ ಸಲ್ಲಿಸಿರುವುದು ಊಹಾ ಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಕಣದಲ್ಲಿ ಮುಂದುವರಿಯಲಿದ್ದಾರೆಯೇ ವಿನಯ್‌?: ಹಿಂದೆ ಅಧ್ಯಕ್ಷರಾಗಿದ್ದವರು ಸ್ಪರ್ಧಿಸಿದರೆ ತಾವು ಸ್ಪರ್ಧಿಸುವುದಾಗಿ ಬಿ.ಎಸ್‌.ವಿನಯ್‌ ಹೇಳಿದ್ದರು. ಒಂದು ವೇಳೆ, ಪ್ರೊ.ಗುರುಸ್ವಾಮಿ ಅವರು ನಾಮಪತ್ರ ವಾಪಸ್‌ ಪಡೆದರೆ ವಿನಯ್‌ ಅವರು ಕೂಡ ವಾಪಸ್‌ ಪಡೆಯುತ್ತಾರೋ ಎಂಬ ಕುತೂಹಲವೂ ಮೂಡಿದೆ.   

ಆರು ಮಂದಿ ನಾಮಪತ್ರ: ಈ ನಡುವೆ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಗುಂಡ್ಲುಪೇಟೆಯ ಶೈಲೇಶ್‌ ಕುಮಾರ್‌, ಕಸಾಪ ಹಾಲಿ ಕೋಶಾಧ್ಯಕ್ಷ ನಿರಂಜನ್‌ಕುಮಾರ್‌, ನಾಗೇಶ ಸೋಸ್ಲೆ, ಪತ್ರಕರ್ತೆ ಸ್ನೇಹಾ, ಯಳಂದೂರಿನ ಶಿವಾಲಂಕಾರಯ್ಯ ಮತ್ತು ರವಿಕುಮಾರ್‌ ಮಾದಾಪುರ ಅವರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 

ಆರು ಮಂದಿಯ ಪೈಕಿ ನಿರಂಜನ್‌ ಕುಮಾರ್‌ ಹಾಗೂ ನಾಗೇಶ ಸೋಸ್ಲೆ ಅವರನ್ನು ಬಿಟ್ಟು ಉಳಿದವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬಂದಿಲ್ಲ. ಕೊನೆಯ ದಿನ ಇಷ್ಟು ಪ್ರಮಾಣದಲ್ಲಿ ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. 

ಪರಿಶೀಲನಾ ಕಾರ್ಯ: ಗುರುವಾರ (ಏ.8) ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. 12ರಂದು ನಾಮಪ‍ತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ

ಜಿಲ್ಲೆಯಲ್ಲಿ ಕಸಾಪ ಸ್ಥಾಪನೆಯಾಗಿ ‌20 ವರ್ಷಗಳಾಗಿವೆ. ಆರು ಅವಧಿ ಪೂರ್ಣಗೊಂಡಿದೆ. ಇದೇ ಮೊದಲು ಮಹಿಳೆಯೊಬ್ಬರು (ಸ್ನೇಹ) ಅಧ್ಯಕ್ಷ ಸ್ಥಾನ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. 

ಪ್ರೊ.ಮಲೆಯೂರು ಗುರುಸ್ವಾಮಿ ಅವರು ಮೊದಲ ಮೂರು ಅವಧಿಗೆ (ಒಂಬತ್ತು ವರ್ಷ), ನಾಗಮಲ್ಲಪ್ಪ (3 ವರ್ಷ), ಸೋಮಶೇಖರ ಬಿಸಲ್ವಾಡಿ (3 ವರ್ಷ) ಹಾಗೂ ಬಿ.ಎಸ್‌.ವಿನಯ್‌ (ಐದು ವರ್ಷ) ತಲಾ ಒಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಅವಧಿಯಲ್ಲಿ ಯಾವೊಬ್ಬ ಮಹಿಳೆಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿಲ್ಲ. ಬುಧವಾರ ನಾಮಪತ್ರ ಸಲ್ಲಿಸಿರುವ ಸ್ನೇಹ ಅವರು ಅಧ್ಯಕ್ಷ ಸ್ಥಾನ ಬಯಸಿರುವ ಮೊದಲ ಮಹಿಳೆ. 

‘ಆರಂಭದಿಂದಲೂ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಯಸಿದ್ದೆ. ಆದರೆ, ಹಿರಿಯರೆಲ್ಲ ಸ್ಪರ್ಧಿಸುವಾಗ ಬೇಡ ಎಂದು ಸುಮ್ಮನಾದೆ. ಈಗೀಗ ಏನೇನೋ ಬದಲಾವಣೆಗಳಾಗುತ್ತಿವೆ. ಹಾಗಾಗಿ ಕೊನೆಕ್ಷಣದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಸ್ನೇಹ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಸಾಪದಲ್ಲಿ ಮಹಿಳೆಯರಿಗೂ ಆದ್ಯತೆ ಸಿಗಲಿ, ಅವರು ಕೂಡ ಮುಂದೆ ಬರಲಿ ಎಂಬ ಉದ್ದೇಶ ನನ್ನದು’ ಎಂದು ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು