ಬುಧವಾರ, ಆಗಸ್ಟ್ 10, 2022
26 °C
ದೊಡ್ಡಾಣೆ: ಸಂಪರ್ಕ ಸಮಸ್ಯೆ ನೆರವಿಗೆ ಸಿಗದ ‘ಜನ ವನ ಸೇತುವೆ’ ವಾಹನ,

ತುರ್ತುವಾಹನ ಸಿಗದೆ ಡೋಲಿಯಲ್ಲಿ ಗರ್ಭಣಿಯನ್ನು 8 ಕಿ.ಮೀ ಸಾಗಿಸಿದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು (ಚಾಮರಾಜನಗರ): ತಾಲ್ಲೂಕಿನ ಮಹದೇಶ್ವರ ವನ್ಯಧಾಮದ ಒಳಗಿರುವ ದೊಡ್ಡಾಣೆ ಗ್ರಾಮದ ಗರ್ಭಿಣಿಯೊಬ್ಬರಿಗೆ ಬುಧವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಕರೆತರಲು ತುರ್ತುವಾಹನ ಸಿಗದೇ ಇದ್ದುದರಿಂದ ಸಂಬಂಧಿಕರು ರಾತ್ರೋ ರಾತ್ರಿ ಡೋಲಿಯಲ್ಲಿ ಆಕೆಯನ್ನು ಎಂಟು ಕಿ.ಮೀ ದೂರದಲ್ಲಿರುವ ಸುಳ್ವಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಭಾಗದ ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ‘ಜನ ವನ ಸೇತುವೆ’ ಎಂಬ ಸಾರಿಗೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಬುಧವಾರ ರಾತ್ರಿ ಈ ವ್ಯವಸ್ಥೆಯ ನೆರವು ಗ್ರಾಮಸ್ಥರಿಗೆ ಸಿಕ್ಕಿಲ್ಲ.

ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಸಂಬಂಧಿಕರು ಜನ ವನ ಸೇತುವೆ ವಾಹನದ ಚಾಲಕನಿಗೆ ಕರೆ ಮಾಡಿದ್ದರೂ ಸಂಪರ್ಕ ಸಾಧ್ಯವಾಗಿಲ್ಲ. ಇದರಿಂದಾಗಿ ರಾತ್ರಿ ದಟ್ಟಾರಣ್ಯದಲ್ಲಿ ಡೋಲಿಯಲ್ಲಿ ಗರ್ಭಿಣಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಬೇಕಾಯಿತು.

‘ಗುರುವಾರ ಮುಂಜಾನೆ 5 ಗಂಟೆಗೆ ಗರ್ಭಿಣಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರು. ಸಹಜ ಹೆರಿಗೆಯಾಗಿದ್ದು,  ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ’ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್‌ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ತಾಯಿ ಮಗು ಆರೋಗ್ಯದಿಂದ ಇದ್ದರೂ, ಮಗುವಿನ ತೂಕ ಕಡಿಮೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ‘ಬುಧವಾರ ಮಹದೇಶ್ವರ ಬೆಟ್ಟದಲ್ಲಿ ವಿದ್ಯುತ್ ಇಲ್ಲದಿದ್ದರಿಂದ ಜನ-ವನ ಸೇತುವೆ ಸಾರಿಗೆ ಚಾಲಕನ ದೂರವಾಣಿ ಸ್ವಿಚ್ ಆಫ್ ಆಗಿತ್ತು. ವಿದ್ಯುತ್ ಬಂದ ಬಳಿಕ ವಾಪಸ್‌ ಕರೆ ಮಾಡಿದಾಗ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸಂಪರ್ಕದ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಕೆಲವು ದಿನಗಳ ಹಿಂದೆ ನಮ್ಮ ಸಾರಿಗೆಯಲ್ಲಿ ಗರ್ಭಿಣಿಯೊಬ್ಬರನ್ನು ಕರೆ ತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂದೆ ಇಂಥ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು