ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತು ಶಿಕ್ಷೆ: ಬಲಿಪಶು ಆದರೇ ಡಿಆರ್‌ಎಫ್‌ಒ?

ಜಿಂಕೆ ಸಾವಿನ ಪ್ರಕರಣ: ರಾಮಲಿಂಗಪ್ಪ ವಿರುದ್ಧ ಕರ್ತವ್ಯ ನಿರ್ಲಕ್ಷ್ಯ ಆರೋಪ
Published 27 ಫೆಬ್ರುವರಿ 2024, 5:50 IST
Last Updated 27 ಫೆಬ್ರುವರಿ 2024, 5:50 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯ ವ್ಯಾಪ್ತಿಯ ತೆರಕಣಾಂಬಿ ಗ್ರಾಮದಲ್ಲಿ ಬಳಿ ಇತ್ತೀಚೆಗೆ ಜಿಂಕೆ ಮೃತಪಟ್ಟ ಪ್ರಕರಣದಲ್ಲಿ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಎಸ್‌.ರಾಮಲಿಂಗಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್‌ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನೀಡಿರುವ ವರದಿ ಆಧಾರದಲ್ಲಿ ಅಮಾನತು ಮಾಡಲಾಗಿದೆ. 

ಅಮಾನತು ಆದೇಶಕ್ಕೆ ಕೆಲವು ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ಜಿಂಕೆ ಸತ್ತಿರುವ ಬಗ್ಗೆ ಆರ್‌ಎಫ್‌ಒ ಅವರ ಗಮನಕ್ಕೆ ತಂದಿದ್ದರೂ, ಡಿಆರ್‌ಎಫ್‌ಒ ಅವರನ್ನು ಬಲಿಪಶು ಮಾಡಲಾಗಿದೆ ಎಂದು ದೂರಿದ್ದಾರೆ.

ಏನಿದು ಘಟನೆ?: ಜ.29 ರಂದು ತೆರಕಣಾಂಬಿ ಬಳಿಯ ಚರಂಡಿಯಲ್ಲಿ ಜಿಂಕೆಯೊಂದರ ಮೃತದೇಹ ಪತ್ತೆಯಾಗಿತ್ತು.

‘ಜಿಂಕೆ ಸತ್ತಿರುವ ವಿಚಾರವನ್ನು ಡಿಆರ್‌ಎಫ್‌ಒ ರಾಮಲಿಂಗಪ್ಪ ಮೇಲಿನ ಅಧಿಕಾರಿಗಳಿಗೆ ತಿಳಿಸದೆ ವಿಲೇವಾರಿ ಮಾಡಲಾಗಿದೆ. ಜಿಂಕೆ ದೇಹದಲ್ಲಿ ಗುಂಡು ಹೊಕ್ಕಿರುವ ಗುರುತು ಇದ್ದು, ಬೇಟೆಯಾಡಿರುವ ಸಾಧ್ಯತೆ ಇದೆ’ ಎಂದು ಆರೋಪಿಸಲಾಗಿತ್ತು. 

ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಮೇಶ್‌ಕುಮಾರ್‌ ಅವರು ಎಸಿಎಫ್‌ ರವೀಂದ್ರ ಅವರಿಗೆ ಸೂಚಿಸಿದ್ದರು. ಅದರಂತೆ ಅವರು ವರದಿ ನೀಡಿದ್ದು, ರಾಮಲಿಂಗಪ್ಪ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು, ಪ್ರಕರಣದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದ್ದಾರೆ. 

ಮರು ತನಿಖೆಗೆ ಒತ್ತಾಯ: ಈ ನಡುವೆ, ರಾಮಲಿಂಗಪ್ಪ ಅವರನ್ನು ಅಮಾನತು ಮಾಡಿರುವುದಕ್ಕೆ ಕೆಳ ಹಂತದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಆರ್‌ಎಫ್‌ಒ ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದ್ದು, ಹುಲಿ ಯೋಜನೆ ನಿರ್ದೇಶಕರು ಪ್ರಕರಣದ ಮರುತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. 

‘ಜಿಂಕೆ ಸತ್ತಿರುವ ಮಾಹಿತಿ ಸಿಕ್ಕ ತಕ್ಷಣ ರಾಮಲಿಂಗಪ್ಪ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನೈಸರ್ಗಿಕವಾಗಿ ಜಿಂಕೆ ಸತ್ತಿದೆ ಎಂಬುದನ್ನು ಆರ್‌ಎಫ್‌ಒ ಮಂಜುನಾಥ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳ ಪರಿಶೀಲನೆಗೆ ಬಾರದ ಆರ್‌ಎಫ್‌ಒ, ಮೃತದೇಹವನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದರು’ ಎಂದು ಗೊತ್ತಾಗಿದೆ.  

‘ಮೃತ ಜಿಂಕೆಯನ್ನು ಇಲಾಖೆಯ ಜೀಪಿನಲ್ಲಿ ಹಾಕಿಕೊಂಡು ಸ್ವಲ್ಪ ದೂರದಲ್ಲಿ ಸುಟ್ಟು ಚಿತ್ರೀಕರಣ ಮಾಡಿ ಮೇಲಾಧಿಕಾರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಲಾಗಿತ್ತು. ಈ ಭಾಗದಲ್ಲಿ ಹಿಂದೆ ಹುಲಿ, ಚಿರತೆಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದರಿಂದ ಸುಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ. 

ಆರ್‌ಎಫ್‌ಒ ಮಂಜುನಾಥ ಅವರಿಗೆ ಕಳುಹಿಸಿರುವ ಸಂದೇಶದ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.  

‘ಜಿಂಕೆ ಸತ್ತಿರುವ ವಿಚಾರ ಮೊದಲು ಬೀಟ್ ಗಾರ್ಡ್ ವ್ಯಾಪ್ತಿಗೆ ಬರುತ್ತದೆ. ಮಾಹಿತಿ ನೀಡುವ ಜವಾಬ್ದಾರಿ ಅವರಿಗೂ ಇರುತ್ತದೆ. ಆರ್‌ಎಫ್‌ಒ ಅವರಿಗೆ ಮಾಹಿತಿ ನೀಡಿರುವ ಬಗ್ಗೆ ದಾಖಲೆಗಳಿವೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು. ಅವರು ಬಂದಿಲ್ಲ. ಡಿಆರ್‌ಎಫ್‌ಒ ಅವರನ್ನು ಅಮಾನತು ಮಾಡಿರುವುದರ ಹಿಂದೆ ದುರುದ್ದೇಶ ಎದ್ದು ಕಾಣುತ್ತದೆ’ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ತನಿಖೆ ನಡೆಸಿದ ಬಳಿಕವೇ ಡಿಆರ್‌ಎಫ್‌ಒ ಅವರನ್ನು ಅಮಾನತು ಮಾಡಲಾಗಿದೆ. ಈ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸುತ್ತೇನೆ.
- ಪಿ.ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT