ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ |13,778 ಹೆಕ್ಟೇರ್ ಬೆಳೆ ಹಾನಿ, ₹79.65 ಕೋಟಿ ನಷ್ಟ

ಚಾಮರಾಜನಗರ, ಯಳಂದೂರು ತಾಲ್ಲೂಕುಗಳೂ ಬರಪೀಡಿತ; ಘೋಷಣೆ
Published 15 ಅಕ್ಟೋಬರ್ 2023, 7:05 IST
Last Updated 15 ಅಕ್ಟೋಬರ್ 2023, 7:05 IST
ಅಕ್ಷರ ಗಾತ್ರ

ಸೂರ್ಯನಾರಾಯಣ ವಿ/ನಾ.ಮಂಜುನಾಥಸ್ವಾಮಿ

ಚಾಮರಾಜನಗರ/ಯಳಂದೂರು: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಎದುರಿಸಿದ್ದ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳನ್ನೂ ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಇದರೊಂದಿಗೆ ಇಡೀ ಜಿಲ್ಲೆ ಬರಪೀಡಿತ ಎಂದು ಘೋಷಿಸಿದಂತಾಗಿದೆ. 

ಮೊದಲ ಹಂತದಲ್ಲಿ ಸರ್ಕಾರ ಗುಂಡ್ಲುಪೇಟೆ, ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಿಸಿತ್ತು. ಚಾಮರಾಜನಗರ ತಾಲ್ಲೂಕಿನಲ್ಲೂ ಬೆಳೆಹಾನಿಯಾಗಿತ್ತು. ಯಳಂದೂರು ತಾಲ್ಲೂಕಿನಲ್ಲೂ ಮಳೆ ಕೊರತೆ ಉಂಟಾಗಿ, ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹಾಗಾಗಿ, ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿದ್ದವು. ಜಿಲ್ಲಾಡಳಿತ ಕೂಡ ಮತ್ತೆ ಜಂಟಿ ಸಮೀಕ್ಷೆ ನಡೆಸಿ, ಆಗಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ನಡೆಸಿರುವ ಜಂಟಿ ಸಮೀಕ್ಷೆಯ ಪ್ರಕಾರ, ಚಾಮರಾಜನಗರ ತಾಲ್ಲೂಕಿನಲ್ಲಿ 13,103 ಹೆಕ್ಟೇರ್‌ ಬೆಳೆ ಹಾಗೂ ಯಳಂದೂರು ತಾಲ್ಲೂಕಿನಲ್ಲಿ 675 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬೆಳೆದಿದ್ದ ಫಸಲು ಹಾನಿಗೀಡಾಗಿವೆ. 

ಚಾಮರಾಜನಗರ ತಾಲ್ಲೂಕಿನಲ್ಲಿ ಸೂರ್ಯಕಾಂತಿ, ಜೋಳ, ಮೆಕ್ಕೆ ಜೋಳ, ಅಲಸಂದೆ, ಉದ್ದು, ಹತ್ತಿ, ನೆಲಗಡಲೆ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಯಳಂದೂರು ತಾಲ್ಲೂಕಿನಲ್ಲಿ ಮೆಕ್ಕೆ ಜೋಳ ಬೆಳೆ ಮಾತ್ರ ನಷ್ಟವಾಗಿದೆ. 

ಬೆಳೆ ನಷ್ಟದ ವೆಚ್ಚ ₹79.65 ಕೋಟಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮದಂತೆ ಶೇ 33ಕ್ಕಿಂತ ಹೆಚ್ಚು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಾತ್ರ ಇನ್‌ಪುಟ್‌ ಸಬ್ಸಿಡಿ ಸಿಗಲಿದೆ. 

ನೀರಾವರಿ ಬೆಳೆಗೆ ಹೆಕ್ಟೇರ್‌ಗೆ ₹17 ಸಾವಿರ ಹಾಗೂ ಮಳೆಯಾಶ್ರಿತ ಬೆಳೆಗೆ ₹8,500ರಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ (ಐದು ಎಕರೆಗೆ) ಬರ ಪರಿಹಾರ ಸಿಗಲಿದೆ. ಈ ಉದ್ದೇಶಕ್ಕೆ ಎರಡೂ ತಾಲ್ಲೂಕುಗಳಿಗೆ ₹11.34 ಕೋಟಿ ಅನುದಾನದ ಅಗತ್ಯವಿದೆ.

ಮೊದಲ ಹಂತದಲ್ಲಿ ಸಾಧಾರಣ ಬರ ಎಂದು ಘೋಷಿಸಲಾಗಿದ್ದ ಮೂರು ತಾಲ್ಲೂಕುಗಳಲ್ಲಿ ಅಂದಾಜು 29,026.5 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾಗಿದೆ ಎಂದು ಜಂಟಿ ಸಮೀಕ್ಷೆ ಹೇಳಿತ್ತು. ₹164.54 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ವರದಿ ಹೇಳಿತ್ತು. ಮೂರು ತಾಲ್ಲೂಕುಗಳ ರೈತರಿಗೆ ಬರ ಪರಿಹಾರ ನೀಡಲು ₹26.99 ಕೋಟಿ ಅನುದಾನ ಬೇಕು ಎಂದು ವರದಿ ಉಲ್ಲೇಖಿಸಿತ್ತು. ‌

ಜಿಲ್ಲೆಯ ಚಿತ್ರಣ: ಈಗ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಿರುವುದರಿಂದ, ಜಿಲ್ಲೆಯಲ್ಲಿ ಒಟ್ಟಾರೆ 42,804.5 ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ. ₹244.19 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ಬರ ಪರಿಹಾರ ನೀಡಲು ಒಟ್ಟು ₹38.33 ಕೋಟಿ ಅನುದಾನ ಬೇಕು.

ಆಬಿದ್‌ ಎಸ್‌.ಎಸ್‌
ಆಬಿದ್‌ ಎಸ್‌.ಎಸ್‌
ಜಂಟಿ ಸಮೀಕ್ಷೆ ನಡೆಸಿ ಸರ್ಕಾರ ವರದಿ ಸಲ್ಲಿಸಿದ್ದು ತಾಲ್ಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಬೆಳೆನಷ್ಟ ಆದ ರೈತರಿಗೆ ಪರಿಹಾರ ಸಿಗಲಿದೆ
ಆಬಿದ್‌ ಎಸ್‌.ಎಸ್‌ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಶೇ 33ರಿಂದ 50ರಷ್ಟು ಬೆಳೆ ನಷ್ಟ ‘ಯಳಂದೂರು ತಾಲ್ಲೂಕಿನಲ್ಲಿ ಬಿತ್ತನೆಗಾಗಿ ವಿತರಿಸಿದ್ದ ರಾಗಿಯನ್ನು ಕೃಷಿಕರು ಬಳಸಿಲ್ಲ. ಸೆ.9ರಂದು ಮಳೆ ಸುರಿದಿದೆ. ಅ.7ರ ತನಕ ಮಳೆ ಬಿದ್ದಿಲ್ಲ. ಹೀಗಾಗಿ ಉಷ್ಣಾಂಶ ಏರಿಕೆಯಿಂದ ಭೂಮಿ ಒಣಗಿದ್ದು ಬೆಳೆ ಒಣಗಿದೆ. ಈ ಬಗ್ಗೆ ತಹಶೀಲ್ದಾರ್ ತಂಡದ ನೇತೃತ್ವದ ತಂಡ ಕೃಷಿ ಇಲಾಖೆ ಶೇ33 ರಿಂದ50 ಪ್ರದೇಶದಲ್ಲಿ ಬೆಳೆ ವಿಫಲವಾಗಿದೆ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ತಿಳಿಸಿದರು. ‘ಈ ಸಲ ಬೆಳೆ ಕಳೆದುಕೊಂಡಿದ್ದೇವೆ. ಹಾಕಿದ ಬಂಡವಾಳ ಕೈಬಿಟ್ಟಿದೆ. ಬರದ ಬೇಗೆಯಿಂದ ಜಾನುವಾರು ಮೇವು ಸಹ ಸಿಗದ ಸೂಚನೆ ಸಿಕ್ಕಿದೆ. ಹಾಗಾಗಿ ಸರ್ಕಾರ ರೈತರಿಗೆ ನೆರವು ನೀಡಬೇಕು’ ಎಂದು ಕಾಡಂಚಿನ ಕೃಷಿಕ ಮಾದೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT