ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ತಾನು ನೇಮಿಸಿರುವ ತನಿಖಾ ತಂಡ ರದ್ದುಪಡಿಸಲಿ: ಆರ್.ಧ್ರುವನಾರಾಯಣ ಆಗ್ರಹ

ಫಾಲೋ ಮಾಡಿ
Comments

ಚಾಮರಾಜನಗರ: ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟ ಘಟನೆ ಕುರಿತು ಹೈಕೋರ್ಟ್‌ ರಚಿಸಿರುವ ನ್ಯಾಯಮೂರ್ತಿಗಳ ಸಮಿತಿ ತನಿಖೆ ನಡೆಸುವುದು ಸೂಕ್ತ. ಕೂಡಲೇ ಸರ್ಕಾರ ತಾನು ನೇಮಕ ಮಾಡಿರುವ ಎಲ್ಲ ಸಮಿತಿಗಳನ್ನು ರದ್ದುಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇಲ್ಲಿ ಒತ್ತಾಯಿಸಿದರು.

ಕಾರ್ಯಾಂಗದ ಮೇಲೆ ನಂಬಿಕೆ ಇಲ್ಲ ಎಂಬ ಕಾರಣಕ್ಕೆ ಈ ವಿಚಾರದಲ್ಲಿ ನ್ಯಾಯಾಂಗ ಮಧ್ಯ ಪ್ರವೇಶಿಸಿದೆ. ಒಂದು ವೇಳೆ ಸರ್ಕಾರ ಅಥವಾ ಕಾರ್ಯಾಂಗ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ನ್ಯಾಯಾಂಗ ಮಧ್ಯಪ್ರವೇಶಿಸುತ್ತಿರಲಿಲ್ಲ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಆಮ್ಲಜನಕದ ಪೂರೈಕೆಯ ವಿಚಾರವಾಗಿಯೂ ನ್ಯಾಯಾಂಗ ಮಧ್ಯ ಪ್ರವೇಶಿಸಿತು. ರಾಜ್ಯದ 25 ಮಂದಿ ಸಂಸದರು ದನಿ ಇಲ್ಲದ ಸಂಸದರಾಗಿದ್ದಾರೆ. ಇವರು ರಾಜ್ಯಕ್ಕೆ ಬೇಕಾದ ಆಮ್ಲಜನಕವನ್ನು ಕೇಂದ್ರದಿಂದ ದೊರಕಿಸಿಕೊಡುವಲ್ಲಿ, ಜಿಎಸ್‌ಟಿ ಪಾಲು ಪಡೆಯುವಲ್ಲಿ, ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ದನಿ ಎತ್ತಿಲ್ಲ ಎಂದು ಹರಿಯಾಯ್ದರು.

ಚಾಮರಾಜನಗರದಲ್ಲಿ ಇಂತಹದ್ದೊಂದು ದುರಂತ ನಡೆದ ಮೇಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಲಿಲ್ಲ. ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ ಪರಿಹಾರವನ್ನೂ ಘೋಷಿಸಿಲ್ಲ ಎಂದು ಕಿಡಿಕಾರಿದರು.

ಸಚಿವ ಈಶ್ವರಪ್ಪ ಅವರು ಹಣ ಮುದ್ರಿಸುವ ಯಂತ್ರ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಹಣ ಎಣಿಸುವ ಯಂತ್ರ ಸಿಕ್ಕಿದ್ದು ಯಾರ ಮನೆಯಲ್ಲಿ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಉಮೇಶ್‌ ಕತ್ತಿ ಸಹ ಬಡವರನ್ನು ಸಾಯಿ ಎಂದು ಹೇಳುತ್ತಾರೆ. ಬಿಜೆಪಿಯವರಿಗೆ ಬಡವರ ಬಗ್ಗೆ ಅನುಕಂಪವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಈಗ ಕ್ರಿಯಾಶೀಲರಾಗಿದ್ದಾರೆ. ಈ ಬಗೆಯಲ್ಲೇ ಮುಂಚೆಯೇ ಪೂರ್ವಯೋಜಿತ ತೀರ್ಮಾನಗಳನ್ನು ಕೈಗೊಂಡಿದ್ದರೆ ಹಲವರ ಜೀವಗಳನ್ನು ಉಳಿಸಬಹುದಿತ್ತು. ಇನ್ನಾದರೂ ಜಿಲ್ಲೆಯಲ್ಲಿ ಹೋಂಐಸೋಲೇಷನ್ ಪದ್ಧತಿ ಕೈಬಿಟ್ಟು, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಕೊರೊನಾ ಸೋಂಕಿತರನ್ನು ಇರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮತ್ತು ದೇಶ ಹಣಕಾಸಿನ ಮುಗ್ಗಟ್ಟಿನ ಸಂದರ್ಭದಲ್ಲಿ ಇರುವಾಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿಕೊಂಡಿರುವುದು ಹಣದ ದುರ್ಬಳಕೆಯಾಗಿದೆ. ಅವರು ಸಾರ್ವಜನಿಕ ಈಜುಕೊಳವನ್ನು ಬಳಸಬಹುದಿತ್ತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT