ಮಂಗಳವಾರ, ಮಾರ್ಚ್ 28, 2023
31 °C
ಮಲೆಮಹದೇಶ್ವರ, ಕಾವೇರಿ ವನ್ಯಧಾಮಗಳ ವ್ಯಾಪ್ತಿಯಲ್ಲಿ ಅವಧಿಪೂರ್ವ ಮಳೆ

ಹನೂರು: ಬಹು ಬೇಗ ಹಸಿರಾದ ಒಣಕಾಡು!

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಈ ಬಾರಿ ತಾಲ್ಲೂಕು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಮೊದಲೇ ಉತ್ತಮ ಮಳೆಯಾಗಿರುವುದರಿಂದ ಬೇಸಿಗೆ ಅವಧಿಯಲ್ಲಿ ಒಣಕಾಡಿನಂತೆ ಭಾಸವಾಗುವ ಮಲೆಮಹದೇಶ್ವರ ವನ್ಯಧಾಮದ ಹಾಗೂ ಕಾವೇರಿ ವನ್ಯಧಾಮಗಳು ಬೇಗ ಹಸಿರಾಗಿವೆ.

ಮಲೆ ಮಹದೇಶ್ವರ ವನ್ಯಧಾಮಕ್ಕಿಂತಲೂ ಕಾವೇರಿ ವನ್ಯಧಾಮ ಹೆಚ್ಚು ಒಣಗಿರುವಂತೆ ಭಾಸವಾಗುತ್ತದೆ. ಜಿಲ್ಲೆಯ ಇತರ ಭಾಗಗಳಿಗೆ ಹೋಲಿಸಿದರೆ ಹನೂರು ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಕಡಿಮೆ. ಮೇ ಮಧ್ಯಭಾಗದ ನಂತರ ಹೆಚ್ಚು ಮಳೆಯಾಗುತ್ತದೆ. ಹಾಗಾಗಿ, ಜೂನ್‌ ಜುಲೈ ಸಮಯದಲ್ಲಿ ಕಾಡು ಹಸಿರಾಗಿ, ಕೆರೆ ಕಟ್ಟೆಗಳಿಗೆ ನೀರು ಹರಿಯಲು ಆರಂಭಿಸುತ್ತದೆ. 

ಕಳೆದ ವರ್ಷ ನವೆಂಬರ್‌ ಅಂತ್ಯದವರೆಗೂ ಮಳೆಯಾಗಿದ್ದರಿಂದ ಅರಣ್ಯ ಪ್ರದೇಶದಲ್ಲಿ ಕೆರೆಗಳು ಪೂರ್ಣವಾಗಿ ಬತ್ತಿರಲಿಲ್ಲ. ಈ ಕಾರಣದಿಂದ ಮಾರ್ಚ್‌ ಕೊನೆಗೆ, ಏಪ್ರಿಲ್‌ ಆರಂಭದಲ್ಲಿ ಸುರಿದ ಮಳೆಗೆ ಕಾಡಿನೊಳಗಿರುವ ಹಳ್ಳಕೊಳ್ಳಗಳು ಹರಿಯತೊಡಗಿವೆ. ಕೆರೆಗಳು ಕೂಡ ನೀರಿನಿಂದ ನಳನಳಿಸುತ್ತಿವೆ.

ಸಾಮಾನ್ಯವಾಗಿ ಕಾವೇರಿ ವನ್ಯಧಾಮದಲ್ಲಿ ಮಾರ್ಚ್‌ ಏಪ್ರಿಲ್‌ ಅವಧಿಯಲ್ಲಿ ಒಂದಿಲ್ಲೊಂದು ಕಡೆ ಬೆಂಕಿ ಬೀಳುತ್ತದೆ. ಹುಲ್ಲುಗಾವಲನ್ನು ಹೊಂದಿರುವ ಬೆಟ್ಟ ಬೋಳಾಗುತ್ತದೆ. ಈ ಬಾರಿ ಎಲ್ಲೂ ಬೆಂಕಿ ಬಿದ್ದಿಲ್ಲ. ಏಪ್ರಿಲ್‌ನಿಂದಲೇ ಹಸಿರು ಚಿಗುರೊಡೆಯಲು ಶುರುವಾಗಿರುವುದರಿಂದ ಕಾಳ್ಗಿಚ್ಚಿನ ಆತಂಕ ದೂರವಾಗಿದೆ. ಒಣಗಿ ಹೋಗಿದ್ದ ಹುಲ್ಲುಗಾವಲು ಪ್ರದೇಶದಲ್ಲಿ ಹೊಸ ಚಿಗುರು ಮೂಡುತ್ತಿದೆ.

‘ಪ್ರತಿ ವರ್ಷ ಮಾರ್ಚ್, ಏಪ್ರಿಲ್ ಬಂದರೆ ಕಾಡಿಗೆ ಬೆಂಕಿ ಬೀಳುವ ಭಯ ಒಂದೆಡೆಯಾದರೆ, ವನ್ಯಪ್ರಾಣಿಗಳು ನೀರು ಆಹಾರ ಅರಸಿ ಗ್ರಾಮಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುವ ಭೀತಿ ಮತ್ತೊಂದೆಡೆ. ಈಗ ಬಿದ್ದಿರುವ ಮಳೆಯಿಂದಾಗಿ ಎಲ್ಲ ಆತಂಕ ನಿವಾರಣೆಯಾಗಿದೆ. ನೀರು ಬತ್ತುವ ಮುನ್ನವೇ ಕೆರೆಗಳು ಭರ್ತಿಯಾಗುತ್ತಿರುವುದು ಸಮಾಧಾನ ತಂದಿದೆ’ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ತಪ್ಪಿದ ವನ್ಯಪ್ರಾಣಿಗಳ ಹಾವಳಿ

ಪ್ರತಿ ಬಾರಿ ಬೇಸಿಗೆಯಲ್ಲಿ ನೀರು ಹಾಗೂ ಆಹಾರಕ್ಕಾಗಿ ಗ್ರಾಮಗಳತ್ತ ಬರುತ್ತಿದ್ದ ವನ್ಯಪ್ರಾಣಿಗಳ ಸಂಖ್ಯೆ ಈ ಬಾರಿ ಕ್ಷೀಣಿಸಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಂತಿರುವುದರಿಂದ ಮೇಲಿಂದ ಮೇಲೆ ವನ್ಯಪ್ರಾಣಿಗಳು ಗ್ರಾಮಗಳತ್ತ ಬರುವುದು ಸಾಮಾನ್ಯ. ಬೇಸಿಗೆಯಲ್ಲಿ ಇದರ ಪ್ರಮಾಣ ಜಾಸ್ತಿ. ಈ ಬಾರಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. 

‘ಕೆರೆಕಟ್ಟೆ ತುಂಬಿ ಕಾಡೆಲ್ಲಾ ಹಸಿರಾಗಿರುವುದರಿಂದ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿವೆ’ ಎನ್ನುತ್ತಾರೆ ಅಧಿಕಾರಿಗಳು.  

‘ಜಿಂಕೆಗಳು, ಕಡವೆ, ಕಾಡಮ್ಮೆಗಳು  ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರಾಣಿಗಳ ಸಂಖ್ಯೆ ಅಧಿಕಗೊಂಡಿರುವುದಕ್ಕೆ ಸಾಕ್ಷಿ. ಸಸ್ಯಹಾರಿ ಪ್ರಾಣಿಗಳ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾಂಸಹಾರಿ ಪ್ರಾಣಿಗಳು ಕೂಡ ಕಾಣಿಸಿಕೊಳ್ಳತೊಡಗಿವೆ’ ಎಂಬುದು ಅರಣ್ಯ ಇಲಾಖೆ ಸಿಬ್ಬಂದಿ ಮಾತು. 

ಅವಧಿಗೂ ಮುನ್ನ ಮಳೆಯಾಗಿರುವುದು ಸಂತಸದ ವಿಷಯ. ಕೆರೆಗಳಲ್ಲಿ ನೀರು ತುಂಬಿದ್ದು, ಪ್ರಾಣಿಗಳು ನಾಡಿನತ್ತ ಬರದಂತೆ ಕ್ರಮವಹಿಸಲಾಗುವುದು.
- ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು