ಶನಿವಾರ, ಜೂನ್ 25, 2022
24 °C
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ; ಸಹಕಾರ ಕೊಡಿ– ಮನವಿ

ರವಿಶಂಕರ್‌ ಪರ ಸಚಿವ ನಾಗೇಶ್‌ ಮತಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಬಿಜೆಪಿ ಸರ್ಕಾರ ಪ್ರತಿ ಬಾರಿ ಗೆದ್ದಾಗಲೂ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಪ್ರಯತ್ನ ಪಟ್ಟಿದೆ. ಹೊಸದಾಗಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಬುಧವಾರ ಹೇಳಿದರು. 

ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ನಗರದ ಜೆಎಸ್ಎಸ್‌ ಮಹಿಳಾ ಕಾಲೇಜಿನಲ್ಲಿ ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಪರ ಪ್ರಚಾರ ನಡೆಸಿದ ಅವರು, ‘ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದೆ. ರಾಜ್ಯ ಸರ್ಕಾರ ಅದನ್ನು ಜಾರಿಗೆ ತಂದಿದೆ. ಇದರಿಂದ ಯುವಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ’ ಎಂದರು. 

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇಲ್ಮನೆ ಹಾಗೂ ಕೆಳಮನೆಗಳ ಸಂಖ್ಯೆ ಅತ್ಯಂತ ಮುಖ್ಯ. ಈ ಬಾರಿಯ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಾವು ಮೈ.ವಿ.ರವಿಶಂಕರ್‌ ಅವರನ್ನು ನಿಲ್ಲಿಸಿದ್ದೇವೆ. ಅವರು 30 ವರ್ಷಗಳಿಂದ ಒಂದೇ ವಿಚಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ಬಾರಿ ಕಡಿಮೆ ಮತಗಳಿಂದ ಸೋತಿದ್ದರು. ಈ ಬಾರಿ ಎಲ್ಲರ ಸಹಕಾರದಿಂದ ಅವರು ಗೆಲ್ಲಬೇಕು’ ಎಂದು ನಾಗೇಶ್‌ ಅವರು ಹೇಳಿದರು. 

‘ಎಲ್ಲರೂ ಜೊತೆ ನಿಂತು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದು, ಮಕ್ಕಳಲ್ಲಿ ಮತ್ತೊಮ್ಮೆ ಸ್ವಾಭಿಮಾನ, ಸ್ವಾವಲಂಬನೆಯನ್ನು ಬೆಳೆಸಿ ಈ ದೇಶವು ಪ್ರ‍ಪಂಚದ ಗುರುವಾಗುವ ರೀತಿ ಮಾಡೋಣ’ ಎಂದರು. 

ಶಾಸಕ ಎನ್‌.ಮಹೇಶ್‌ ಮಾತನಾಡಿ, ‘ರವಿಶಂಕರ್‌ ಅವರು ನಮ್ಮ ರೀತಿ ರಾಜಕಾರಣಿ ಅಲ್ಲ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ಕಳೆದ ಬಾರಿ 186 ಮತಗಳಿಂದ ಸೋತಿದ್ದರು. ಯುವಕರ ಸಮಸ್ಯೆಗಳು ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಮಾಡಿದ್ದಾರೆ. ಪದವೀಧರರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರು ಸದನದಲ್ಲಿ ಮಾತನಾಡಿ, ಅವುಗಳನ್ನು ಬಗೆಹರಿಸಲು ಪ್ರಯತ್ನಿಸಲಿದ್ದಾರೆ. ಅದಕ್ಕಾಗಿ ಶಿಕ್ಷಕರು, ಪದವೀಧರರು ಅವರನ್ನು ಬೆಂಬಲಿಸಬೇಕು’ ಎಂದರು. 

ನಂತರ ನಗರದ ಸಂತ ಜೋಸೆಫ್‌, ಸಂತ ಫ್ರಾನ್ಸಿಸ್‌ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ ಸಚಿವರು, ರವಿಶಂಕರ್‌ ಪರವಾಗಿ ಮತಯಾಚನೆ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ದತ್ತೇಶ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಸೇರಿದಂತೆ ಹಲವರು ಇದ್ದರು.

ಯಳಂದೂರು, ಕೊಳ್ಳೇಗಾಲದಲ್ಲೂ ಪ್ರಚಾರ

ಚಾಮರಾಜನಗರದಿಂದ ಯಳಂದೂರು ಹಾಗೂ ಕೊಳ್ಳೇಗಾಲಕ್ಕೆ ತೆರಳಿದ ಸಚಿವ ನಾಗೇಶ್‌ ಅವರು ಅಲ್ಲೂ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ರವಿಶಂಕರ್‌ ಪರವಾಗಿ ಪ್ರಚಾರ ನಡೆಸಿದರು. 

ಯಳಂದೂರಿನ ಜೆಎಸ್‌ಎಸ್‌ ಹಾಗೂ ಎಸ್‌ಡಿವಿಎಸ್‌ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಪದವೀಧರರನ್ನು ಉದ್ದೇಶಿಸಿ ಮಾತನಾಡಿದರು. 

‘ಉದ್ಯೋಗ ಮತ್ತು ವೃತ್ತಿ ತರಬೇತಿ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲು ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು. ಹಣದ ಆಸೆ ಮತ್ತು ಭರವಸೆಯ ಆಮಿಷವೊಡ್ಡುವ ಅಭ್ಯರ್ಥಿಗಳಿಗೆ ಬುದ್ಧಿ ಕಲಿಸಲು ಇದು ಅವಕಾಶ’ ಎಂದು ಅವರು ವಿವರಿಸಿದರು.

ಕೊಳ್ಳೇಗಾಲದಲ್ಲೂ ಸಚಿವರು ಮಾನಸ ಶಿಕ್ಷಣ ಸಂಸ್ಥೆ, ವಾಸವಿ ವಿದ್ಯಾ ಕೇಂದ್ರ, ಲಯನ್ಸ್‌ ಶಾಲೆ, ಅಗಸ್ತ್ಯ ಗುರುಕುಲ, ಜೆಎಸ್‌ಎಸ್‌ ಹಾಗೂ ಸಾಲೂರು ಮಠದ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರೊಂದಿಗೆ ಮಾತನಾಡಿ, ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು. 

ಶಾಸಕ ಎನ್.ಮಹೇಶ್, ಬಿಜೆಪಿ ನಾಯಕಿ ಪರಿಮಳ ನಾಗಪ್ಪ, ರಾಜ್ಯ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ಮುಖಂಡ ಡಾ.ಪ್ರೀತಂ ನಾಗಪ್ಪ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.