ಭಾನುವಾರ, ಜನವರಿ 24, 2021
24 °C

ಶಾಲಾ ಕಾಲೇಜುಗಳಿಗೆ ಶಿಕ್ಷಣ ಸಚಿವರ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಮಂಗಳವಾರ ತಾಲ್ಲೂಕಿನ ಏಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. 

ಶಾಲಾ ಕಾಲೇಜುಗಳ ಆರಂಭ, ಪರೀಕ್ಷೆ, ವಿದ್ಯಾಗಮ, ಕೋವಿಡ್‌ ನಿಯಮ ಪಾಲನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಉಪನ್ಯಾಸಕರಿಂದ ಮಾಹಿತಿ ಸಂಗ್ರಹಿಸಿದರು.  

ತಾಲ್ಲೂಕಿನ ನಲ್ಲೂರು, ನಾಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಂದಕವಾಡಿಯ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಕೆಪಿಎಸ್ ಶಾಲೆ, ರಾಮಸಮುದ್ರದ ಸಿಆರ್ ಬಿಪಿ ಅನುದಾನಿತ ಪ್ರೌಢಶಾಲೆ, ಚಾಮರಾಜನಗರದ ಜೆಎಸ್ ಎಸ್ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜುಗಳಿಗೆ ಡಿಡಿಪಿಐ, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಭೇಟಿ ನೀಡಿದರು.  

ಪರೀಕ್ಷೆ ಬೇಕಾ? ಇಲ್ಲದೆಯೇ ‍ಪಾಸ್‌ ಮಾಡಬೇಕಾ: ಮೊದಲಿಗೆ ನಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವರನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೂವು ನೀಡಿ ಸ್ವಾಗತಿಸಿದರು.

ಕೊಠಡಿಗಳಿಗೆ ತೆರಳಿ ವಿದ್ಯಾಗಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಮಾತನಾಡಿಸಿದರು. ಮಕ್ಕಳಿಗೆ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದರು. ಕೆಲವರಿಂದ ಮಗ್ಗಿಯನ್ನೂ ಹೇಳಿಸಿದರು. ವಿದ್ಯಾಗಮ ಕಾರ್ಯಕ್ರಮ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.

‘ಪರೀಕ್ಷೆಯ ಬಗ್ಗೆ ಯಾರೂ ಯೋಚನೆ ಮಾಡಬೇಕಾಗಿ ಇಲ್ಲ. ಎಲ್ಲರೂ ಚೆನ್ನಾಗಿ ಓದಬೇಕು. ಕೋವಿಡ್‌ ಬಗ್ಗೆ ಹೆದರಬೇಡಿ. ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ ಬಳಸಿ ಸುರಕ್ಷಿತವಾಗಿರಿ’ ಎಂದರು. 

ಚಂದಕವಾಡಿ ಕರ್ನಾಟಕ ಪಬ್ಲಿಕ್‌ ಶಾಲೆಗೆ ಭೇಟಿ ನೀಡಿ, ಅಲ್ಲಿ ಪಿಯು ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. 

ಕೋವಿಡ್ ಕಾರಣದಿಂದ ಈ ವರ್ಷವೂ ಪರೀಕ್ಷೆ ಮಾಡಬೇಕೇ? ಅಥವಾ ಬೇಡವೇ ಎಂದು ಪ್ರಶ್ನಿಸಿದರು. ಅದಕ್ಕೆ ವಿದ್ಯಾರ್ಥಿಗಳು, ‘ಪರೀಕ್ಷೆ ಬೇಕು’ ಎಂದರು. ‘ಮಾರ್ಚ್ ಅಥವಾ ಮೇ ತಿಂಗಳಲ್ಲಿ ಮಾಡಬೇಕೇ’ ಎಂದು ಸಚಿವರು ಪ್ರಶ್ನಿಸಿದ್ದಕ್ಕೆ, ‘ಮಾರ್ಚ್ ತಿಂಗಳಲ್ಲಿ ಮಾಡಿದರೆ ಅನುಕೂಲ’ ಎಂದರು. 

ಶಿಕ್ಷಕರೊಂದಿಗೆ ಸಮಾಲೋಚನೆ: ಸುರೇಶ್‌ ಕುಮಾರ್‌ ಅವರು ಶಿಕ್ಷಕರೊಂದಿಗೂ ಸಮಾಲೋಚನೆ ನಡೆಸಿದರು. ವಿದ್ಯಾಗಮ, ಎಸ್ಸೆಸ್ಸೆಲ್ಸಿ ತರಗತಿಗಳು, ಕೋವಿಡ್‌ ನಿಯಮ ಪಾಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು