ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು-ಚಾಮರಾಜನಗರ ರೈಲು ಮಾರ್ಗ ವಿದ್ಯುದೀಕರಣ: ವಾರದಲ್ಲಿ ಕಾಮಗಾರಿ ಆರಂಭ

2022ರ ಜನವರಿ ವೇಳೆಗೆ ಪೂರ್ಣ
Last Updated 18 ಮಾರ್ಚ್ 2021, 13:21 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು–ಚಾಮರಾಜನಗರ ರೈಲು ಮಾರ್ಗದ ವಿದ್ಯುದೀಕರಣ ಯೋಜನೆ ಕಾಮಗಾರಿ ವಾರದಲ್ಲಿ ಆರಂಭವಾಗಲಿದೆ.

ಈ ಸಂಬಂಧ, ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ ವಿದ್ಯುದೀಕರಣ ಸಂಸ್ಥೆಯು ನೈರುತ್ವ ರೈಲ್ವೆಯ ಮೈಸೂರು ವಿಭಾಗಕ್ಕೆ ಮಾಹಿತಿ ನೀಡಿದೆ.

2024ರ ವೇಳೆಗೆ ದೇಶದಲ್ಲಿರುವ ಎಲ್ಲ ರೈಲು ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯು‌ದೀಕರಣಗೊಳಿಸುವ ಗುರಿಯನ್ನು ರೈಲ್ವೆ ಸಚಿವಾಲಯ ಹೊಂದಿದ್ದು, ಅದರಂತೆ ದೇಶದಾದ್ಯಂತ ರೈಲು ಮಾರ್ಗಗಳ ವಿದ್ಯುದೀಕರಣ ಪ್ರಕ್ರಿಯೆ ನಡೆಯುತ್ತಿದೆ.

ಮೈಸೂರು ನಂಜನಗೂಡು ಮಾರ್ಗವಾಗಿ ಚಾಮರಾಜನಗರ ತಲುಪುವ ಮಾರ್ಗದ ಉದ್ದ 61 ಕಿ.ಮೀ ಇದ್ದು, ₹20 ಕೋಟಿ ವೆಚ್ಚದಲ್ಲಿ ವಿದ್ಯುದೀಕರಣ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ಬರಲಿದೆ. ಈ ವರ್ಷದ ಆರಂಭದಲ್ಲಿ ಟೆಂಡರ್‌ ನೀಡಲಾಗಿದ್ದು,ಪವರ್ ಗುರು ಇನ್‌ಫ್ರಾಟೆಕ್ ಪ್ರೈ.ಲಿ. ಸಂಸ್ಥೆಯು ವಿದ್ಯುತ್‌ ಮಾರ್ಗದ ನಿರ್ಮಾಣ ಹೊಣೆ ಹೊತ್ತುಕೊಂಡಿದೆ.ಕಾಮಗಾರಿ ಮುಕ್ತಾಯಕ್ಕೆ 12 ತಿಂಗಳ ಅವಕಾಶ ನೀಡಲಾಗಿದೆ.

‘ಮೈಸೂರು- ಚಾಮರಾಜನಗರ ಮಾರ್ಗ 61 ಕಿ.ಮೀ ಉದ್ದವಿದೆ. ₹20 ಕೋಟಿ‌ ವೆಚ್ಚದಲ್ಲಿ ವಿದ್ಯುದೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, 2022ರ ಜನವರಿ ವೇಳೆಗೆ ಕಾಮಗಾರಿ ಮುಕ್ತಾಯವಾಗಲಿದೆ. ಒಂದು ವಾರದಲ್ಲಿ ಮೈಸೂರಿನಿಂದ ಕಾಮಗಾರಿ ಆರಂಭವಾಗಲಿದೆ’ ಎಂದು ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕಾಮಗಾರಿ ಮುಕ್ತಾಯಕ್ಕೆ ಒಂದು ವರ್ಷದ ಅವಧಿ ನೀಡಲಾಗಿದೆ. ವಾಸ್ತವವಾಗಿ 61 ಕಿ.ಮೀ ಮಾರ್ಗದ ವಿದ್ಯುದೀಕರಣಕ್ಕೆ ಅಷ್ಟು ಸಮಯ ಬೇಡ. ಆದರೆ, ಮಳೆಗಾಲದ ಅವಧಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ, ಹೆಚ್ಚುವರಿ ಕಾಲಾವಕಾಶ ಬೇಕಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಂಜನಗೂಡಿನಲ್ಲಿ ಕಪಿಲಾ ನದಿಗೆ ನಿರ್ಮಿಸಿರುವ ಸೇತುವೆಯಲ್ಲಿ ವಿದ್ಯುತ್‌ ಮಾರ್ಗದ ಕಾಮಗಾರಿ ಸವಾಲಿನ ಕೆಲಸ. ವಿದ್ಯುತ್‌ಗಾಗಿ ಪ್ರತ್ಯೇಕ ಕಂಬಗಳನ್ನು ಅಳವಡಿಸಬೇಕಾಗುತ್ತದೆ. ಈಗಿರುವ ಸೇತುವೆಯ ಸ್ತಂಭಕ್ಕೆ ಅಳವಡಿಸಬಹುದೇ ಅಥವಾ ನದಿಯ ತಳದಿಂದ ಹೊಸದಾಗಿ ಕಂಬ ಅಳವಡಿಸಬೇಕೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ವಿದ್ಯುದೀಕರಣ ಕಾಮಗಾರಿಯಲ್ಲಿ ನಂಜನಗೂಡಿನವರೆಗಿನ ಕೆಲಸ ಸ್ವಲ್ಪ ಕಷ್ಟಕರವಾಗಿದೆ. ಅಲ್ಲಿಂದ ಚಾಮರಾಜನಗರದವರೆಗೂ ಯಾವುದೇ ಸಮಸ್ಯೆ ಇಲ್ಲ’ ಎಂದು ಮೂಲಗಳು ತಿಳಿಸಿವೆ.

ರೈಲು ಹಳಿಗಳಿಂದ ಮೂರ್ನಾಲ್ಕು ಮೀಟರ್‌ ದೂರದಲ್ಲಿ ವಿದ್ಯುತ್‌ ಕಂಬಗಳನ್ನು ಅಳವಡಿಸುವುದರಿಂದ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ರೈಲು ಸಂಚಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಅವು ಹೇಳಿವೆ.

2024ರ ಒಳಗಾಗಿ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದೀಕರಣ ಮಾಡುವ ಉದ್ದೇಶವನ್ನು ರೈಲ್ವೆ ಸಚಿವಾಲಯ ಹೊಂದಿದ್ದು, ಇದರಿಂದ ಇಂಧನದ (ಡೀಸೆಲ್‌) ಮೇಲಿನ ಅವಲಂಬನೆ ತಗ್ಗಲಿದೆ. ಜೊತೆಗೆ ಪರಿಸರ ಮಾಲಿನ್ಯವನ್ನೂ ತಡೆಯಬಹುದು ಎಂಬುದು ಅದರ ಲೆಕ್ಕಾಚಾರ.

‌ಮೈಸೂರು ಮತ್ತು ಚಾಮರಾಜನಗರದ ನಡುವಿನ ಮಾರ್ಗ ವಿದ್ಯುದೀಕರಣವಾದರೆ, ಮೆಮು ರೈಲುಗಳ ಓಡಾಟಕ್ಕೆ ಅನುಕೂಲವಾಗಲಿದೆ. ರೈಲುಗಳ ವೇಗ ಹೆಚ್ಚಿಸುವುದಕ್ಕೂ ಅವಕಾಶ ಇದೆ. ಇದರಿಂದಾಗಿ ಮೈಸೂರು, ನಂಜನಗೂಡು ಹಾಗೂ ಚಾಮರಾಜನಗರದ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ.

ಮೈಸೂರು–ಮಂಗಳೂರು ಮಾರ್ಗ: ಟೆಂಡರ್ ಪ್ರಗತಿಯಲ್ಲಿ

ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಬರುವಮೈಸೂರು–ಹಾಸನ–ಸಕಲೇಶ‍ಪುರ–ಮಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಯೋಜನೆ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

ರೈಲ್ವೆ ವಿದ್ಯುದೀಕರಣ ಕೇಂದ್ರ ಸಂಸ್ಥೆಯು ಈ ಯೋಜನೆಗಾಗಿ ಈಗಾಗಲೇ ಟೆಂಡರ್‌ ಕರೆದಿದೆ. ಕಂಪನಿಗಳಿಂದ ಬಿಡ್ಡಿಂಗ್‌ ಆಹ್ವಾನಿಸಲಾಗಿದೆ. ಶೀಘ್ರವಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT