ಗುರುವಾರ , ಅಕ್ಟೋಬರ್ 21, 2021
29 °C
ಆನೆಗಳನ್ನು ಸಾಕಲು ಸೂಕ್ತ ವಾತಾವರಣ-ತಜ್ಞರ ಸಮಿತಿ ಅಭಿಪ್ರಾಯ

ಚಾಮರಾಜನಗರ: ಕೆ.ಗುಡಿಯಲ್ಲೇ ಆನೆ ಶಿಬಿರ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಈ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದ್ದ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಬೂದಿಪಡಗ ವ್ಯಾಪ್ತಿಯಲ್ಲಿ ಆನೆ ಶಿಬಿರ ಸ್ಥಾಪನೆ ಯೋಜನೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯವನ್ನು ತಜ್ಞರ ಸಮಿತಿ ವ್ಯಕ್ತಪಡಿಸಿದ್ದು, ಕೆ.ಗುಡಿಯಲ್ಲೇ ಇರುವ ಶಿಬಿರವನ್ನು ಇನ್ನಷ್ಟು ವಿಸ್ತರಿಸಿ ಅಲ್ಲೇ ಮುಂದುವರಿಸುವ ಪ್ರಸ್ತಾವವನ್ನು ಅರಣ್ಯ ಇಲಾಖೆಯ ಮುಂದಿಟ್ಟಿದೆ. 

ಅರಣ್ಯ ಇಲಾಖೆ ಕೂಡ ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದು, ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಶಿಬಿರ ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ‌ತಯಾರಿಸಲು ಸಿದ್ಧತೆ ನಡೆಸಿದೆ. 

ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಸಾಲಿನ ಬಜೆಟ್‌ನಲ್ಲಿ ತಾಲ್ಲೂಕಿನ ಬೂದಿಪಡಗದಲ್ಲಿ ಆನೆ ಶಿಬಿರ ಸ್ಥಾಪನೆಗೆ ₹1 ಕೋಟಿ ಘೋಷಿಸಿದ್ದರು. 

ಬೂದಿ‌ಪಡಗದಲ್ಲಿ ಆನೆ ಶಿಬಿರ ಸ್ಥಾಪನೆಯ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು ಸ್ಥಳೀಯವಾಗಿ ತಜ್ಞರ ಸಮಿತಿ ರಚಿಸಲಾಗಿತ್ತು. ಇದರಲ್ಲಿ ನಿವೃತ್ತ ಅರಣ್ಯ ಅಧಿಕಾರಿಗಳು, ಕಾವಾಡಿಗಳು, ಸಿಸಿಎಫ್‌, ಡಿಸಿಎಫ್‌ ಸೇರಿದಂತೆ ಹಲವರು ಇದ್ದರು. 

ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ: ತಜ್ಞರ ಸಮಿತಿಯು ಬೂದಿಪಡಗ ಮಾತ್ರವಲ್ಲದೆ, ಸುವರ್ಣಾವತಿ ಹಿನ್ನೀರು, ಬೆಲ್ಲವತ್ತ ಡ್ಯಾಂ ಸುತ್ತಮುತ್ತಲಿನ ಪ್ರದೇಶ, ಕೆ.ಗುಡಿಯಲ್ಲೂ ಅಧ್ಯಯನ ನಡೆಸಿದೆ. 

ಬೂದಿಪಡಗದಲ್ಲಿ ಆನೆಗಳಿಗೆ ಸಾಕಾಗುವಷ್ಟು ಆಹಾರ ಮತ್ತು ನೀರಿನ ಕೊರತೆ ಉಂಟಾಗಬಹುದು ಎಂದು ತಜ್ಞರ ಸಮಿತಿ ಅಭಿಪ್ರಾಯ ಪಟ್ಟಿದೆ.

ಕೆ.ಗುಡಿಯಲ್ಲಿ ಈಗಾಗಲೇ ಆನೆ ಶಿಬಿರ ಇದೆ. ಗಜೇಂದ್ರ ಎಂಬ ಆನೆಯನ್ನು ಇಲ್ಲಿ ಸಾಕಲಾಗುತ್ತಿದೆ. ಅಲ್ಲದೇ ಇದು ಸಫಾರಿ ಕೇಂದ್ರವಾಗಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆಯೂ ಇದೆ. ಆನೆ ಶಿಬಿರವನ್ನು ಇಲ್ಲೇ ಮುಂದುವರೆಸುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಾಧ್ಯ. ಇದಲ್ಲದೇ ಈಗಾಗಲೇ ಕಾವಾಡಿಗಳ ವಸತಿಗೃಹ, ಆನೆಗಳ ಅಡುಗೆ ಮನೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳಿವೆ. ಹೆಚ್ಚು ಆನೆಗಳನ್ನು ಇರಿಸಲು ಮೂಲಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸಿದರೆ ಸಾಕು. ಎಲ್ಲಕ್ಕಿಂತ ಹೆಚ್ಚಾಗಿ ಶಿಬಿರ ನಡೆಸಲು ಬೇಕಾದ ಎಲ್ಲ ವಾತಾವರಣವೂ ಇಲ್ಲಿದೆ ಎಂಬ ಅಭಿಪ್ರಾಯವನ್ನು ತಜ್ಞರ ಸಮಿತಿ ಮುಂದಿಟ್ಟಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಜಿ.ಸಂತೋಷ್‌ಕುಮಾರ್‌ ಅವರು, ‘ತಜ್ಞರ ಸಮಿತಿ ಕೆ.ಗುಡಿಯಲ್ಲೇ ಶಿಬಿರ ಮುಂದುವರೆಸಲು ಒಲವು ತೋರಿದೆ. ಈಗಾಗಲೇ ಇಲ್ಲಿ ಆನೆ ಶಿಬಿರ ಇರುವುದರಿಂದ ಎಲ್ಲ ಪೂರಕ ವ್ಯವಸ್ಥೆಗಳಿವೆ. ಇನ್ನಷ್ಟು ಮೂಲಸೌಕರ್ಯಗಳು ಆಗಬೇಕಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕಾಗಿದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು