ಸೋಮವಾರ, ಜೂಲೈ 6, 2020
27 °C
ಸಾಲ ವಸೂಲಾತಿಗೆ ಹಣಕಾಸು ಸಂಸ್ಥೆಗಳು ಮುಂದು, ದೂರು ನೀಡಲು ಗ್ರಾಹಕರಿಗೆ ಸಲಹೆ

ಸಾಲ ವಸೂಲು ಮಾಡುವಂತಿಲ್ಲ ಎಂಬ ಜಿಲ್ಲಾಧಿಕಾರಿ ಸೂಚನೆ, ಆದೇಶ ಲೆಕ್ಕಕ್ಕಿಲ್ಲ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆಗಸ್ಟ್‌ 30ರವರೆಗೆ ಮೈಕ್ರೊ ಫೈನಾನ್ಸ್‌ ಸಂಸ್ಥೆಗಳು, ಸಹಕಾರ ಸಂಘಗಳು, ಬ್ಯಾಂಕುಗಳು ಸೇರಿದಂತೆ ಇತರೆ ಹಣಕಾಸು ಸಂಸ್ಥೆಗಳು ಸಾಲಗಾರರಿಂದ ಬಡ್ಡಿ ಹಾಗೂ ಸಾಲ ವಸೂಲು ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರೂ, ಕೆಲವು ಸಂಸ್ಥೆಗಳು ಗ್ರಾಮಗಳಿಗೆ ತೆರಳಿ ಸಾಲದ ಕಂತಿನ ಪಾವತಿಗೆ ಗ್ರಾಹಕರನ್ನು ಒತ್ತಾಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 

ಇತ್ತೀಚೆಗೆ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಲಾಕ್‌ಡೌನ್‌ನಿಂದ ಜನರು ಸಂಕಷ್ಟದಲ್ಲಿರುವುದರಿಂದ ಜೂನ್‌ 30ರವರೆಗೆ ಯಾವುದೇ ಕಾರಣಕ್ಕೂ ಬಡ್ಡಿಯಾಗಲಿ, ಸಾಲ ವಸೂಲು ಮಾಡುವಂತಿಲ್ಲ. ಈ ಬಗ್ಗೆ ದೂರುಗಳು ಬಂದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಸಾಲ ಕಂತಿನ ಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳಕಾಲ ಮುಂದೂಡಿದ್ದು, ಆಗಸ್ಟ್‌ 30ರವರೆಗೆ ಬಲವಂತವಾಗಿ ವಸೂಲು ಮಾಡುವಂತಿಲ್ಲ ಎಂದು ಹೇಳಿದೆ. ಇದನ್ನು ಗಾಳಿಗೆ ತೂರಿರುವ ಜಿಲ್ಲೆಯ ವಿವಿಧ ಮೈಕ್ರೊ ಫೈನಾನ್ಸ್‌, ಸಹಕಾರ ಸಂಘಗಳು ತಮ್ಮ ಪ್ರತಿನಿಧಿಗಳನ್ನು ಗ್ರಾಮಗಳಿಗೆ ಕಳುಹಿಸಿ, ಗ್ರಾಹಕರಿಂದ ಸಾಲದ ಕಂತನ್ನು ಕಟ್ಟಿಸಿಕೊಳ್ಳಲು ಮುಂದಾಗುತ್ತಿವೆ. 

ಚಾಮರಾಜನಗರ ತಾಲ್ಲೂಕಿನ ಕೆಲ್ಲಂಬಳ್ಳಿ, ಕೋಡಿಮೋಳೆ, ಚಂದಕವಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿನಿಧಿಗಳು ಗ್ರಾಹಕರ ಬಳಿ ಸಾಲದ ಬಡ್ಡಿ, ಕಂತು, ಉಳಿತಾಯ ಖಾತೆಗೆ ಹಣ ‍ಪಾವತಿಸುವಂತೆ ಕೇಳುತ್ತಿದ್ದಾರೆ. 

ಈ ಕುರಿತಾಗಿ ‘ಪ್ರಜಾವಾಣಿ’ಗೆ ಕರೆ ಮಾಡಿರುವ ಕೆಲ್ಲಂಬಳ್ಳಿಯ ಓದುಗರೊಬ್ಬರು, ‘ಸಾಲ ನೀಡಿದ್ದ ಸಹಕಾರ ಸಂಘ, ಮೈಕ್ರೊ ಫೈನಾನ್ಸ್‌ನವರು ಗ್ರಾಮಕ್ಕೆ ಬಂದು ಬಡ್ಡಿ, ಸಾಲದ ಕಂತು ಪಾವತಿಸುವಂತೆ ಕೇಳುತ್ತಿದ್ದಾರೆ’ ಎಂದು ದೂರಿದರು. 

‘ಆಗಸ್ಟ್‌ 30ರವರೆಗೆ ವಸೂಲು ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರಲ್ಲ ಎಂದು ಜನರು ಕೇಳಿದ್ದಕ್ಕೆ, ಈಗ ಕಟ್ಟದೇ ಇದ್ದರೆ, ಮುಂದೆ ಹಣಕಟ್ಟಲು ನಿಮಗೆ ಕಷ್ಟವಾಗಬಹುದು ಎಂದು ಹೇಳುತ್ತಿದ್ದಾರೆ’ ಎಂದು ಅವರು ಹೇಳಿದರು. 

‘ಎರಡು ತಿಂಗಳುಗಳಿಂದ ಲಾಕ್‌ಡೌನ್‌ನಿಂದಾಗಿ ಬಡ ಜನರ ಬಳಿ ದುಡ್ಡು ಇಲ್ಲ. ಜಮೀನು ಇದ್ದು, ಕೃಷಿ ಮಾಡುತ್ತಿರುವವರ ಬಳಿ ಹಣ ಇರಬಹುದು. ಅವರ ಬಳಿ ಕಟ್ಟಿಸಿಕೊಳ್ಳಲಿ, ಕೂಲಿ ನಾಲಿ ಮಾಡಿ ಬದುಕುತ್ತಿರುವವರಿಂದ ಈ ಸಂದರ್ಭದಲ್ಲಿ ವಸೂಲು ಮಾಡುವುದು ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

‘ದೂರು ನೀಡಿದರೆ ಕ್ರಮ’

‘ಆಗಸ್ಟ್‌ 30ರವರೆಗೆ ಯಾರೂ ಸಾಲ, ಬಡ್ಡಿ ನೀಡುವಂತೆ ಜನರನ್ನು ಒತ್ತಾಯಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮೈಕ್ರೊ ಫೈನಾನ್ಸ್‌ ಹಾಗೂ ಸಹಕಾರ ಸಂಘಗಳ ಪ್ರತಿನಿಧಿಗಳು ಕೆಲವು ಗ್ರಾಮಗಳಿಗೆ ಭೇಟಿ ನೀಡಿರುವ ಬಗ್ಗೆ ನಮಗೆ ಮೌಖಿಕ ದೂರುಗಳು ಬಂದಿವೆ. ಇಂತಹದ್ದು ನಡೆದಿದ್ದಲ್ಲಿ ಗ್ರಾಹಕರು ನೇರವಾಗಿ ನನಗೆ ಲಿಖಿತ ದೂರು ನೀಡಬೇಕು. ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಚಾಮರಾಜನಗರ ತಹಶೀಲ್ದಾರ್‌ ಜೆ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆಗಸ್ಟ್‌ 30ರವರೆಗೆ ಸಾಲದ ಕಂತು, ಬಡ್ಡಿ ವಸೂಲು ಮಾಡುವಂತಿಲ್ಲ. ಜಿಲ್ಲಾಧಿಕಾರಿ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಜನರು ಯಾವ ಸಂಸ್ಥೆ, ಸಹಕಾರ ಸಂಘ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿದರೆ ಕ್ರಮ ಕೈಗೊಳ್ಳಬಹುದು’ ಎಂದು ಲೀಡ್ ಬ್ಯಾಂಕ್‌ ಅಧಿಕಾರಿಗಳು ಹೇಳಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು