ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮರಳು ನೀತಿ-ಪರಿಸರಕ್ಕೆ ಧಕ್ಕೆ ಆತಂಕ

ಕೆರೆ, ಕಟ್ಟೆ, ನದಿ ಒಡಲು ಬರಿದಾಗುವ ಸಾಧ್ಯತೆ–ಕಳವಳ, ದುರ್ಬಳಕೆ ತಡೆಯಲು ಆಗ್ರಹ
Last Updated 15 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿಯಿಂದ ಜಿಲ್ಲೆಯಲ್ಲಿರುವ ನದಿ, ತೊರೆ, ಕೆರೆ ಕಟ್ಟೆಗಳು ಬರಿದಾಗುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ. ಹೊಸ ಮರಳು ನೀತಿಯು ದುರ್ಬಳಕೆಯಾಗದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮರಳು ಸಮಿತಿಗಳು ನೋಡಿಕೊಳ್ಳಬೇಕು ಎಂದು ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಅಗ್ಗದ ದರದಲ್ಲಿ ಮರಳು ಸಿಗುವಂತೆ ಮಾಡುವ, ಗ್ರಾಮೀಣ ‌ಪ್ರದೇಶಗಳಲ್ಲಿ ಸ್ಥಳೀಯ ಬಳಕೆಗೆ ಮರಳು ಹಂಚಿಕೆಗೆ ಅವಕಾಶ ಕೊಡುವ ಹೊಸ ನೀತಿಗೆ ರಾಜ್ಯ ಸಚಿವ ಸಂಪುಟ ಸಭೆ ಇತ್ತೀಚೆಗೆ ಅನುಮೋದನೆ ನೀಡಿತ್ತು.

ಜಿಲ್ಲೆಯಲ್ಲಿ ಸದ್ಯ ಕೊಳ್ಳೇಗಾಲದ ಮುಳ್ಳೂರಿನಲ್ಲಿ ಅಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಚಾಮರಾಜ
ನಗರ ತಾಲ್ಲೂಕಿನ ಹೆಬ್ಬಸೂರು, ಚಂದಕವಾಡಿ, ಸುವರ್ಣಾವತಿ, ಚಿಕ್ಕಹೊಳೆ ನದಿ ತೀರಗಳಲ್ಲಿ, ಯಳಂದೂರು ತಾಲ್ಲೂಕಿನಲ್ಲಿ ಹರಿಯುವ ಸುವವರ್ಣಾವತಿ ನದಿಯಲ್ಲಿ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ತೀರದಲ್ಲಿ ಮರಳು ಗಣಿಗಾರಿಕೆ ಕದ್ದು ಮುಚ್ಚಿ ನಡೆಯುತ್ತಿರುತ್ತದೆ. ಪೊಲೀಸರು, ಅರಣ್ಯ ಇಲಾಖೆಯವರು, ಗಣಿ ಇಲಾಖೆ ಸಿಬ್ಬಂದಿ ಅಪರೂಪಕ್ಕೆ ದಾಳಿ ನಡೆಸಿ ಪ್ರಕರಣ ದಾಖಲಿಸುತ್ತಿರುತ್ತಾರೆ.

ನೀತಿಯಲ್ಲೇನಿದೆ?: ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ಮರಳಿನಲ್ಲಿ ಒಂದು ಭಾಗವನ್ನು ಸ್ಥಳೀಯ ಬಳಕೆಗೆ ಮೀಸಲಿಡಲು ಹೊಸ ನೀತಿ ಅವಕಾಶ ಕಲ್ಪಿಸಿದೆ.ಹಳ್ಳ, ತೊರೆ ಮತ್ತು ಕೆರೆಗಳಲ್ಲಿನ ಮರಳಿನ ಹಂಚಿಕೆಯನ್ನು ಆಯಾ ಗ್ರಾಮ ಪಂಚಾಯಿತಿಗಳೇ ಮಾಡಲಿವೆ.ಸರ್ಕಾರಕ್ಕೆ ಬರುವ ಶೇ 50ರಷ್ಟು ರಾಯಧನದಲ್ಲಿಶೇ 25ರಷ್ಟು ಆಯಾ ಪಂಚಾಯಿತಿ
ಗಳಿಗೆ ಸಿಗಲಿದೆ.ಗ್ರಾಮ ಪಂಚಾಯಿತಿಗಳು ವಿತರಿಸುವ ಮರಳಿನ ದರ ಪ್ರತಿ ಟನ್‌ಗೆ ₹300 ಮತ್ತು ನಿಗಮಗಳು ವಿತರಿಸುವ ಮರಳಿನ ದರ ಪ್ರತೀ ಟನ್‌ಗೆ ₹700 ನಿಗದಿ ಮಾಡಲಾಗಿದೆ.

ದ್ವಿಚಕ್ರ ವಾಹನ, ಎತ್ತಿನಗಾಡಿ, ಟ್ರ್ಯಾಕ್ಟರ್‌, ಕತ್ತೆ ಮೇಲೆ ಮರಳು ಕೊಂಡೊಯ್ಯವ ರೈತರು ಮತ್ತು ಬಡವರಿಗೆ ರಾಯಧನದ ವಿನಾಯಿತಿ ನೀಡಲಾಗಿದೆ.ಪಟ್ಟಾ ಭೂಮಿಯಲ್ಲಿ ಮರಳು ಗಣಿಗಾರಿಕೆ ನಿಷೇಧವಿದೆ. ಆದರೆ, ಜಿಲ್ಲಾ ಮತ್ತು ತಾಲ್ಲೂಕು ಮರಳು ಸಮಿತಿಗಳಿಂದ ಅನುಮತಿ ಪಡೆದರೆ ಗಣಿಗಾರಿಕೆ ನಡೆಸಬಹುದು ಎಂದು ಹೊಸ ನೀತಿ ಹೇಳುತ್ತದೆ.

ಅವೈಜ್ಞಾನಿಕ ನೀತಿ: ‘ಸರ್ಕಾರದ ಹೊಸ ಮರಳು ನೀತಿ ಅವೈಜ್ಞಾನಿಕವಾಗಿದೆ. ಇದುವರೆಗೆ ಬಿಗಿ ನಿಯಮ ಇದ್ದರೂ, ಗ್ರಾಮೀಣ ಭಾಗಗಳಲ್ಲಿ ಹಳ್ಳ ಕೊಳ್ಳಗಳಿಂದ, ನದಿ ತೀರಗಳಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಹೊರ ಜಿಲ್ಲೆಗಳಿಗೆ ಸಾಗಣೆ ಮಾಡಲಾಗುತ್ತಿತ್ತು. ಈಗ ಸ್ಥಳೀಯವಾಗಿ ಮರಳು ಬಳಕೆಗೆ ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ರಾಯಲ್ಟಿ ಆಸೆಗೆ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪಂಚಾಯಿತಿ ಅಧಿ
ಕಾರಿಗಳು ಬೇಕಾಬಿಟ್ಟಿಯಾಗಿ ಮರಳು ಸಂಗ್ರಹಿಸಲು ಅನುಮತಿ ನೀಡಿದರೆ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ಬರಿದಾಗಿ ಹೋಗಬಹುದು’ ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ನೀತಿಯಲ್ಲಿ ಸರ್ಕಾರವೇ ಮರಳು ಗಣಿಗಾರಿಕೆಗೆ ರಹದಾರಿ ನೀಡಿದೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕಂಡು ಬರುವ ಬಹುತೇಕ ಹಳ್ಳ, ನದಿ, ತೊರೆಗಳು, ಕೆರೆ ಕಟ್ಟೆಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತವೆ. ಇಲ್ಲಿ ಮರಳು ತೆಗೆಯುವುದಕ್ಕೆ ಅವಕಾಶವೇ ನೀಡುವಂತಿಲ್ಲ. ಮಿತಿ ಮೀರಿ ಮರಳು ತೆಗೆದರೆ ಭೂ ಸವಕಳಿ ಆಗುತ್ತದೆ. ಪರಿಸರಕ್ಕೆ ಇದರಿಂದ ತೊಂದರೆಯಾಗುತ್ತದೆ’ ಎಂದು ಅವರು ಹೇಳಿದರು.

‘ಅಂತರ ಜಿಲ್ಲೆ ಸಾಗಣೆ ತಡೆಯಬೇಕು’

‘ಸ್ಥಳೀಯ ಬಳಕೆಗೆ ಮರಳು ಸಂಗ್ರಹಕ್ಕೆ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ. ಆದರೆ, ಅದು ಸ್ಥಳೀಯರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈಗ ಏನಾಗುತ್ತಿದೆ ಅಂದರೆ, ಸ್ಥಳೀಯವಾಗಿ ಸಂಗ್ರಹಿಸಿದ ಮರಳನ್ನು ಹೊರ ಜಿಲ್ಲೆಗಳಿಗೆ ಸಾಗಿಸಲಾಗುತ್ತಿದೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ್ರಭು ಅವರು ಹೇಳಿದರು.

ಈ ಹಿಂದೆ ನಡೆದಿದ್ದ ಕಾವೇರಿ ಉಳಿಸಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅಣಗಳ್ಳಿ ಬಸವರಾಜು ಅವರು ಪ್ರತಿಕ್ರಿಯಿಸಿ, ‘ಪ್ರತಿ ಬಾರಿ ಒಳ್ಳೆಯ ಉದ್ದೇಶದಿಂದಲೇ ಮರಳು ನೀತಿ ಜಾರಿಗೆ ತರಲಾಗುತ್ತದೆ. ಆದರೆ, ಅದರಿಂದ ಜನಸಾಮಾನ್ಯರಿಗೆ, ಬಡವರಿಗೆ ಅನುಕೂಲವಾಗುತ್ತಿಲ್ಲ. ಈಗಿನ ಮರಳು ನೀತಿಯಲ್ಲಿ ಸ್ಥಳೀಯ ಬಳಕೆಗೆ ಅನುಮತಿ ನೀಡಬಹುದು ಎಂದು ಹೇಳಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದರು.

ಪರಿಸರಕ್ಕೆ ಹಾನಿಯಾಗಬಾರದು: ‘ಜನರಿಗೆ ಅನುಕೂಲವಾಗುವ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದ ನೀತಿಯನ್ನು ನಾವು ಸ್ವಾಗತಿಸುತ್ತೇವೆ. ಸ್ಥಳೀಯ ಕೆಲಸಗಳಿಗೆ ಅಗತ್ಯವಾದ ಮರಳು ಪಡೆಯಲು ಗ್ರಾಮೀಣ ಜನ ಕಷ್ಟಪಡಬಾರದು. ಮರಳು ಗಣಿಗಾರಿಕೆಗೆ ಅವಕಾಶ ನೀಡಿದರೂ, ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿ’

ಹೊಸ ಮರಳು ನೀತಿ ಅನುಷ್ಠಾನದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ನಾಗಭೂಷಣ ಅವರು, ‘ಮರಳು ನೀತಿಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಲಾಗಿದೆ. ಮರಳು ಇರುವ ಪ್ರದೇಶಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT