ನಾ.ಮಂಜುನಾಥಸ್ವಾಮಿ
ಯಳಂದೂರು: ‘ಮಳೆ ಕೊರತೆ ಕೆಲವು ತರಕಾರಿ ಬೆಳೆಗಳಿಗೆ ವರದಾನ. ಹವಾಮಾನದ ಮುನ್ಸೂಚನೆ ಅರಿತು ನಾಟಿ ಮಾಡಬೇಕು’ – ಇದು ವೈಜ್ಞಾನಿಕ ಬೇಸಾಯ ನಂಬಿದವರ ಮಾತು. ವಿಶೇಷವಾಗಿ ಸಣ್ಣ ಹಿಡುವಳಿ ನಂಬಿದವರು ಈ ಬೆಳೆ ವಿಧಾನ ಅನುಸರಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಗೌಡಹಳ್ಳಿ ಹೊರ ವಲಯದಲ್ಲಿ ರೈತ ಕಾವುದವಾಡಿ ಪ್ರಶಾಂತ್ ಸಿಹಿ ಕುಂಬಳ ಸಾಗುವಳಿಯಲ್ಲಿ ಹೆಚ್ಚಿನ ಇಳುವರಿ, ಆದಾಯ ಪಡೆಯುತ್ತಿದ್ದಾರೆ. ಸೈನಿಕರಾಗಿ ನಿವೃತಿಯಾದ ನಂತರ ಯಶಸ್ವಿ ರೈತರಾಗಿ ಅವರು ಗುರುತಿಸಿಕೊಂಡಿದ್ದಾರೆ. ಎರಡೂವರೆ ಎಕರೆ ಗುತ್ತಿಗೆ ಭೂಮಿಯಲ್ಲಿ ಹಲವು ವರ್ಷಗಳಿಂದ ಕುಂಬಳ ಬೆಳೆಯುತ್ತಿದ್ದಾರೆ.
ಇದು 90 ದಿನಗಳ ಬೆಳೆ. ಉತ್ತಮವಾಗಿ ಪೋಷಿಸಿದರೆ ಮತ್ತೆರಡು ತಿಂಗಳ ಫಲ ಹೆಚ್ಚುವರಿಯಾಗಿ ಸಿಗಲಿದೆ. ಸಿಹಿ ಕುಂಬಳಕ್ಕೆ ವರ್ಷಪೂರ್ತಿ ಬೇಡಿಕೆ ಉಂಟು. ಸಾರು, ಗೊಜ್ಜು, ತೊವ್ವೆ, ಹುಳಿ ಬಲು ರುಚಿ. ತಿಪ್ಪೆ ಕಂಡಲ್ಲಿ ಬೆಳೆಯುವ ಕುಂಬಳವನ್ನು ಗ್ರಾಮೀಣರು ಹೆಚ್ಚಿನ ಆರೈಕೆ ಇಲ್ಲದೆ ಬೆಳೆಸಿ, ಬಳಸುತ್ತಾರೆ. ಈಗ ಸಿಹಿಕುಂಬಳ ವಾಣಿಜ್ಯ ಉದ್ದೇಶದಿಂದ ನಗರ ಮತ್ತು ಹೊರ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ.
ಬೇಸಾಯ ಹೇಗೆ?
ಹೆಕ್ಟೇರ್‌ಗೆ 4,000 ಬಿತ್ತನೆ ಬೀಜ ಸಾಕಾಗುತ್ತದೆ. ₹620 ಬೆಲೆಯ ಬಾಕ್ಸ್‌ನಲ್ಲಿ 350-400 ಬೀಜ ಇರುತ್ತದೆ. ಬಳ್ಳಿಯಿಂದ ಬಳ್ಳಿಗೆ, ಸಾಲಿನಿಂದ ಸಾಲಿಗೆ 15 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಸಸಿ ಬುಡಕ್ಕೆ ಕಾಲು ಬುಟ್ಟಿ ಸೆಗಣಿ, ಜತೆಗೆ, ಗಿಡ ಚಿಗುರಿ ಬಳ್ಳಿಯಾಗಿ ಹಬ್ಬುವಾಗ ಅಗತ್ಯ ಬಿದ್ದರೆ ಗೊಬ್ಬರ ನೀಡಬಹುದು. 40 ದಿನಗಳ ನಂತರ ಸಸಿಗಳಲ್ಲಿ ಹೂ ಅರಳಿ ಮಿಡಿಯಾಗುತ್ತದೆ. 80 ರಿಂದ 90 ದಿನಗಳಲ್ಲಿ ಕಾಯಿ ಕಟಾವಿಗೆ ಸಿದ್ಧವಾಗುತ್ತದೆ.
‘ಈ ಬಾರಿ ಏಪ್ರಿಲ್ ಮೊದಲ ವಾರ ಹೊಲ ಹದಗೊಳಿಸಿ, ನಾಟಿ ಮಾಡಿದ್ದೆವು. ಜೂನ್ ತಿಂಗಳಲ್ಲಿ ಮೊದಲ ಕೊಯಿಲು ಆರಂಭವಾಗಿದೆ. 1 ಕಾಯಿ 2 ರಿಂದ ಎರಡೂವರೆ ಕೆ.ಜಿ.ವರೆಗೂ ತೂಕ ಇದೆ. ಮೈಸೂರು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹12 ಬೆಲೆ ಇದೆ. ತಮಿಳುನಾಡು ಮತ್ತು ಕೇರಳದ ವ್ಯಾಪಾರಿಗಳು ಕೆ.ಜಿ.ಗೆ ₹10 ದರದಲ್ಲಿ ಹೊಲದಲ್ಲಿ ಕೊಳ್ಳುವುದರಿಂದ ಸಾಗಣೆ ಖರ್ಚು ಉಳಿಯುತ್ತದೆ’ ಎಂದು ಹಿಡುವಳಿದಾರ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಾರುಕಟ್ಟೆ ಲೆಕ್ಕಚಾರ
‘ನೀರಿನ ಆಸರೆಗಾಗಿ ಕೊಳವೆಬಾವಿ ಕೊರೆಸಿದ್ದೇನೆ. ಹನಿ ನೀರಾವರಿ ಮೂಲಕ ನೀರುಣಿಸುತ್ತೇನೆ. ವಾರಕ್ಕೆ ಒಮ್ಮೆ ನೀರು ಹರಿಸಿದರೆ ಸಾಕು. ಹೂಜಿ ನೊಣದ ಬಾಧೆ ಬಿಟ್ಟರೆ, ಹೆಚ್ಚಿನ ರೋಗದ ಹಾವಳಿ ಕಾಡದು. ನಾಟಿ, ಗೊಬ್ಬರ, ಕಾರ್ಮಿಕರ ನಿರ್ವಹಣೆಗೆ ₹80 ಸಾವಿರ ಖರ್ಚಾಗಿದೆ. ಮೊದಲ ಕಂತಿನಲ್ಲಿ 30 ಟನ್ ಕುಂಬಳ ಮಾರಾಟವಾಗಿದೆ. ಕೊನೆಯ 2 ತಿಂಗಳು ಬೆಳೆ ಉಳಿಸಿಕೊಂಡರೆ 2 ಟನ್ ಹೆಚ್ಚು ಸಿಗಲಿದೆ. 6 ತಿಂಗಳ ಅವಧಿಯಲ್ಲಿ ₹4 ಲಕ್ಷ ವರಮಾನ ಸಿಗುವ ನಿರೀಕ್ಷೆ ಇದೆ’ ಎಂದು ಅವರು ವಿವರಿಸಿದರು.
ಹವಾಮಾನ ಅರಿತು ಕೃಷಿ ಮಾಡಿ
ನಮ್ಮ ಭಾಗದಲ್ಲಿ ಸಿಹಿ ಕುಂಬಳ ಬೆಳೆಯಬಾರದು ಎಂಬ ಮೂಢನಂಬಿಕೆ ರೈತರ ಮನದಲ್ಲಿ ಬೇರೂರಿದೆ. ಹೀಗಾಗಿ ಈ ಬೆಳೆ ಬಗ್ಗೆ ಹೆಚ್ಚಿನ ಕೃಷಿಕರಿಗೆ ಇನ್ನೂ ಅರಿವಿಲ್ಲ. ಕೆಲವು ತರಕಾರಿ ಬೆಳೆಗಳಿಗೆ ಹೆಚ್ಚಿನ ನೀರು ಬೇಕಿಲ್ಲ. ಈ ಬಾರಿ ಮುಂಗಾರಿನ ಅಬ್ಬರ ಕಂಡುಬಂದಿಲ್ಲ. ಇದರಿಂದ ಭೂಮಿಯಲ್ಲಿ ತೇವಾಂಶ ಇಲ್ಲ. ಇಂತಹ ಹವಾಮಾನ ಪರಿಸ್ಥಿತಿ ಕುಂಬಳ ಬೆಳೆಗೆ ಸೂಕ್ತ. ಉಷ್ಣಾಂಶ ಹೆಚ್ಚಾದರೆ ಹೂ ಚಿಗುರು ಹೆಚ್ಚು. ಅತಿ ಮಳೆಯಾದರೆ ಬೆಳವಣಿಗೆ ಕುಗ್ಗುತ್ತದೆ. ಹಾಗಾಗಿ ಹವಾಮಾನ ಅರಿತು ಬೆಳೆ ಕೈಗೊಂಡಲ್ಲಿ ಬೆಳೆಗಾರರು ನಷ್ಟದಿಂದ ಪರಿತಪಿಸುವುದು ತಪ್ಪುತ್ತದೆ’ ಎನ್ನುವ ಸಲಹೆಯನ್ನು ಪ್ರಶಾಂತ್ ನೀಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.