ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಗೆ ರೈತರ ರಥಯಾತ್ರೆಗೆ ಚಾಲನೆ

ಗಣರಾಜ್ಯೋತ್ಸವದಂದು ರಾಜಧಾನಿ ತಲುಪಲಿರುವ ರೈತರು, ಹೋರಾಟಕ್ಕೆ ಬೆಂಬಲ
Last Updated 20 ಜನವರಿ 2021, 12:01 IST
ಅಕ್ಷರ ಗಾತ್ರ

ಚಾಮರಾಜನಗರ:ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದಕ್ಕಾಗಿ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿರುವ ದೆಹಲಿ ರಥಯಾತ್ರೆಗೆ ತಾಲ್ಲೂಕಿನ ಹೊಂಡರಬಾಳು ಅಮೃತಭೂಮಿಯಲ್ಲಿರುವ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಸಮಾಧಿ ಬಳಿ ಬುಧವಾರ ಚಾಲನೆ ನೀಡಲಾಯಿತು.

ಎರಡು ವಾಹನಗಳಲ್ಲಿ 100 ರೈತರು ದೆಹಲಿಗೆ ತೆರಳಲಿದ್ದು, ಗಣರಾಜ್ಯೋತ್ಸವದ ದಿನ ರೈತರು ನಡೆಸುವ ಪೆರೇಡ್‌ನಲ್ಲಿ ಭಾಗವಹಿಸಿದ್ದಾರೆ. ರಥಯಾತ್ರೆ ಸಮಯದಲ್ಲಿ ರೈತರು, ಜನರು ನೀಡುವ ದವಸ ಧಾನ್ಯ ದೇಣಿಗೆಯನ್ನು ಹೋರಾಟದಲ್ಲಿರುವ ರೈತರಿಗೆ ತಲುಪಿಸಲಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಅವರು, ‘ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಕೊಡುವ ಉದ್ದೇಶದಿಂದ ನಾವು ಕೂಡ ರಥಯಾತ್ರೆಯ ಮೂಲಕ ಅಲ್ಲಿಗೆ ಹೋಗುತ್ತಿದ್ದೇವೆ. ರೈತ, ದಲಿತ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ. ಮೈಸೂರು, ಚೆನ್ನಪಟ್ಟಣ, ಅರಸೀಕೆರೆ, ಶಿವಮೊಗ್ಗ ಮಾರ್ಗವಾಗಿ ರಥಯಾತ್ರೆ ನಡೆಯಲಿದೆ. 23ರಂದು ಇನ್ನೂ 300 ಜನ ರೈತರು ರೈಲಿನ ಮೂಲಕ ದೆಹಲಿಗೆ ಹೋಗಲಿದ್ದಾರೆ’ ಎಂದರು.

‘ರೈತ ಹೋರಾಟದದ ಯಾರೂ ರಾಜಕೀಯ ಮಾಡಬಾರದು. ನಮ್ಮ ಹೋರಾಟಕ್ಕೆ ಬೆಂಬಲ ಕೊಡುವ ಪಕ್ಷಗಳನ್ನು ಬೆಂಬಲಿಸುತ್ತೇವೆ. ಯಾರೂ ಬೆಂಬಲಿಸುವುದಿಲ್ಲವೋ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ’ ಎಂದು ಅವರು ಹೇಳಿದರು.

ರಥಯಾತ್ರೆಯನ್ನು ನಗರದಲ್ಲಿ ಸ್ವಾಗತಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೆ.ವೆಂಕಟರಾಜು ಅವರು, ‘ರೈತರು ನಡೆಸುತ್ತಿರುವ ಚಳವಳಿಯನ್ನು ನೂರಾರು ನೆಪಗಳು, ಕಥೆಗಳ ಮೂಲಕ ದಿಕ್ಕುತಪ್ಪಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಕೃಷಿ ಮಸೂದೆಗಳ ಬಗ್ಗೆ ಅಧ್ಯಯನ ನಡೆಸುವ ಸಮಿತಿಗೆ ಅವುಗಳನ್ನು ಬೆಂಬಲಿಸುವ ತಜ್ಞರನ್ನು ನೇಮಿಸಿದೆ. ರೈತರ ಸಮಸ್ಯೆಯನ್ನು ಬಗೆಹರಿಸುವುದು ಸರ್ಕಾರಕ್ಕೆ ಬೇಕಾಗಿಲ್ಲ. ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸುವುದು ಅದರ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗಿದೆ’ ಎಂದರು.

‘ಇದು ಪಂಜಾಬ್‌, ಹರಿಯಾಣದ ರೈತರ ಹೋರಾಟ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿದೆ. ಇದು ಇಡೀ ದೇಶದ ರೈತರ ಹೋರಾಟ. ಅಷ್ಟೇ ಅಲ್ಲ ಗ್ರಾಹಕರ ಹೋರಾಟ. ಈ ಮಸೂದೆಗಳು ಮೊದಲು ರೈತರನ್ನು, ನಂತರ ಗ್ರಾಹಕರ ಶೋಷಣೆ ಮಾಡಲಿದೆ. ಇವುಗಳು ರೈತರನ್ನು ಹಾಗೂ ಗ್ರಾಹಕರನ್ನು ಗುಲಾಮಗಿರಿಗೆ ತಳ್ಳಲಿವೆ’ ಎಂದು ಅವರು ಹೇಳಿದರು.

‘ಈಗ ನಡೆಯುತ್ತಿರುವ ಹೋರಾಟ ಕ್ವಿಟ್‌ ಇಂಡಿಯಾ ಚಳವಳಿಗೆ ಸಮನಾಗಿದೆ. ಸುಭಾಷ್‌ ಚಂದ್ರ ಬೋಸ್‌ ಅವರು ಸಂಘಟಿಸಿದ್ದ ಆಜಾದಿ ಹೋರಾಟಕ್ಕೆ ಸಮನಾದದ್ದು. ಹೋರಾಟವನ್ನು ಬೆಂಬಲಿಸಿ ದೆಹಲಿಗೆ ತೆರಳುವವರಿಗೆಲ್ಲ ನಮ್ಮ ಬೆಂಬಲ ಇದ್ದೇ ಇದೆ’ ಎಂದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT