ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಮಾರುಕಟ್ಟೆ ವಿಶ್ಲೇಷಣೆ: ಹೂವು, ಬಾಳೆಹಣ್ಣು, ಈರುಳ್ಳಿ ತುಟ್ಟಿ

Published 22 ಆಗಸ್ಟ್ 2023, 7:05 IST
Last Updated 22 ಆಗಸ್ಟ್ 2023, 7:05 IST
ಅಕ್ಷರ ಗಾತ್ರ

ಚಾಮರಾಜನಗರ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ವರಮಹಾಲಕ್ಷ್ಮಿ ಹಬ್ಬ ಹತ್ತಿರದಲ್ಲಿರುವಂತೆಯೇ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಹೆಚ್ಚಾಗಿದೆ.

ಆಷಾಢ ಮಾಸ ಕಳೆದು, ಅಧಿಕ ಶ್ರಾವಣ ಮಾಸ ಬಂದಿದ್ದರಿಂದ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಹೀಗಾಗಿ, ಎರಡು ತಿಂಗಳುಗಳಿಂದ ಹೂವುಗಳ ಬೆಲೆ ಕಡಿಮೆ ತುಂಬಾ ಇತ್ತು. ಎರಡು ದಿನಗಳಿಂದ ಬೇಡಿಕೆ, ಬೆಲೆ ಎರಡೂ ಚೇತರಿಸಿಕೊಂಡಿದೆ. ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ ಇರುವುದರಿಂದ ಇನ್ನೆರಡು ದಿನಗಳ ಹೂವುಗಳ ಧಾರಣೆ ದುಪ್ಪಟ್ಟಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ನಗರದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹800, ಮಲ್ಲಿಗೆಗೆ ₹400, ಮರ್ಲೆ ಹೂವಿಗೆ ₹240 ಇತ್ತು. ಸೇವಂತಿಗೆಗೂ ಬೇಡಿಕೆ ಇದ್ದು ಕೆಜಿಗೆ ₹200ರಂತೆ ಮಾರಾಟವಾಗುತ್ತಿದೆ. ಸುಗಂಧರಾಜ ಹೂವಿಗೆ ₹120ರಿಂದ ₹200ರವರೆಗೂ ಹೇಳುತ್ತಿದ್ದಾರೆ. ಬಟನ್‌ಗುಲಾಬಿಗೆ ಕೆಜಿಗೆ ₹120 ಇದೆ.

‘ಶ್ರಾವಣ ಆರಂಭವಾಗುತ್ತಿದ್ದಂತೆಯೇ ಹೂವುಗಳ ಬೆಲೆ ಹೆಚ್ಚಾಗಿದೆ. ಇನ್ನೆರಡು ದಿವಸ ಕಳೆದರೆ ಧಾರಣೆ ಹೆಚ್ಚಲಿದೆ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇದ್ದು, ಬೇಡಿಕೆ ಈಗಿನದ್ದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಲಿದೆ. ಹಾಗಾಗಿ, ಬೆಲೆಯೂ ಜಾಸ್ತಿಯಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ  ರವಿ ಹೇಳಿದರು.

ಟೊಮೆಟೊ ಇಳಿಕೆ, ಈರುಳ್ಳಿ ಏರಿಕೆ: ತರಕಾರಿ ಮಾರುಕಟ್ಟೆಯಲ್ಲಿ ಹಲವು ತರಕಾರಿಗಳ ಬೆಲೆಯಲ್ಲಿ ಏರಿಳಿಕೆಯಾಗಿದೆ.

ಟೊಮೆಟೊ ಧಾರಣೆ ಈ ವಾರ ಇನ್ನಷ್ಟು ಕುಸಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹30 ಇದೆ. ಕಳೆದ ವಾರ ₹50 ಇತ್ತು.

‘ಟೊಮೆಟೊ ಈಗ ಹೆಚ್ಚಿನ ಪ್ರಮಾಣದಲ್ಲಿ ಎಪಿಎಂಸಿಗೆ ಬರುತ್ತಿದೆ. ಹಾಗಾಗಿ, ಬೆಲೆ ಇಳಿಮುಖವಾಗಿದೆ’ ಎಂದು ಹೇಳುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು.

ಕಳೆದ ವಾರ ಕೆಜಿಗೆ ₹20 ಇದ್ದ ಬೆಲೆ ಈ ವಾರ ₹30ಕ್ಕೆ ಏರಿದೆ. ₹30ಕ್ಕೆ ಸಿಗುತ್ತಿದ್ದ ಕ್ಯಾರೆಟ್‌ ಧಾರಣೆ ₹40 ಆಗಿದೆ.

ಹಸಿಮೆಣಸಿನಕಾಯಿ ಮತ್ತು ದಪ್ಪಮೆಣಸಿನಕಾಯಿ ಧಾರಣೆಯೂ ಹೆಚ್ಚಾಗಿದ್ದು, ಕ್ರಮವಾಗಿ ₹100 ಮತ್ತು ₹120 ಆಗಿದೆ.

ಹಲವು ತಿಂಗಳುಗಳಿಂದ ₹20–₹25ರ ಆಸುಪಾಸಿನಲ್ಲಿದ್ದ ಈರುಳ್ಳಿ ಧಾರಣೆ ಈ ವಾರ ಹೆಚ್ಚಾಗಿದೆ. ಕೆಜಿಗೆ ₹30ರಿಂದ ₹40ರವರೆಗೆ ಇದೆ. ಹಾಪ್‌ಕಾಮ್ಸ್‌ನಲ್ಲಿ ₹35 ಇದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ಏಲಕ್ಕಿ ಬಾಳೆಹಣ್ಣಿಗೆ ₹80

ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹80 ಇದೆ. ಹೊರಗಡೆ ₹70ರಿಂದ ₹100ರವರೆಗೂ ಮಾರಾಟ ಮಾಡುತ್ತಿದ್ದಾರೆ.  ಹಲವು ತಿಂಗಳುಗಳಿಂದ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಸ್ಥಿರವಾಗಿತ್ತು (₹70). ಹಬ್ಬ ಹತ್ತಿರದಲ್ಲಿರುವುದರಿಂದ ಬಾಳೆಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಬೆಲೆ ಹೆಚ್ಚಾಗಿದ್ದು ರೈತರಿಗೂ ಉತ್ತಮ ದರ ಸಿಗುತ್ತಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಪಚ್ಚೆ ಬಾಳೆ ಹಣ್ಣು ಕೆಜಿ ₹40ಕ್ಕೆ ಸಿಗುತ್ತಿದೆ.   ಸೇಬು ದ್ರಾಕ್ಷಿ ಕಿತ್ತಳೆ ದಾಳಿಂಬೆ ಪಪ್ಪಾಯಿ ಸೇರಿದಂತೆ ಉಳಿದ ಹಣ್ಣುಗಳ ಧಾರಣೆಯಲ್ಲಿ ಬದಲಾವಣೆಯಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT