ಚಾಮರಾಜನಗರ| ಜಾನುವಾರು ಮೇವಿಗಿಲ್ಲ ಕೊರತೆ; ಆದರೆ ದುಬಾರಿ

ಚಾಮರಾಜನಗರ: ಶಿವರಾತ್ರಿ ಹಬ್ಬದ ನಂತರ ಜಿಲ್ಲೆಯಲ್ಲಿ ಸುಡು ಬಿಸಿಲು ರಾಚುತ್ತಿದೆ. ವಾರದಿಂದೀಚೆಗೆ ಮೋಡ ಕವಿದ ವಾತಾವರಣ ಇರುವುದರಿಂದ ಬಿಸಿಲಿನ ಧಗೆ ಇನ್ನಷ್ಟು ಹೆಚ್ಚಾಗಿದೆ. ಹಸಿರು ಮೇವು ಒಣಗಿದೆ. ರೈತರು ಜಾನುವಾರುಗಳ ಆಹಾರಕ್ಕಾಗಿ ಒಣ ಮೇವನ್ನೇ ಅವಲಂಬಿಸಬೇಕಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ಬಾರಿ ಮೇವಿನ ಕೊರತೆ ಉಂಟಾಗಿಲ್ಲ. ಹಸಿರು ಮೇವು ಇಲ್ಲದಿದ್ದರೂ, ಒಣ ಮೇವು ಲಭ್ಯವಿದೆ. ಆದರೆ, ಒಣ ಮೇವಿನ ಬೆಲೆ ಹೆಚ್ಚಾಗಿದೆ.
ಜಮೀನು ಇಲ್ಲದ ಮತ್ತು ಕೃಷಿಕರಾಗಿದ್ದುಕೊಂಡು ಮೇವು ಸಂಗ್ರಹಿಸಿ ಇಟ್ಟಿರದ ಹೈನುಗಾರರು ಹೆಚ್ಚು ಬೆಲೆ ನೀಡಿ ಒಣಹುಲ್ಲು ಖರೀದಿಸಬೇಕಾಗಿದೆ. ಟ್ರ್ಯಾಕ್ಟರ್ ಒಣಹುಲ್ಲಿಗೆ ₹ 12,500ರಿಂದ ₹ 15 ಸಾವಿರದವರೆಗೂ ಬೆಲೆ ಇದೆ. ಕೆಲವು ಕಡೆಗಳಲ್ಲಿ ಇನ್ನೂ ಜಾಸ್ತಿ ಹೇಳುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲೋಡು ಒಣ ಹುಲ್ಲಿನ ಬೆಲೆ ₹ 1,000–₹ 2,000 ಹೆಚ್ಚಾಗಿದೆ.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ವರ್ಷ ಜಿಲ್ಲೆಯಲ್ಲಿ ಎಲ್ಲೂ ಮೇವಿನ ಕೊರತೆ ಉಂಟಾಗುವುದಿಲ್ಲ. ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಮೇವು ಲಭ್ಯವಿದೆ. ಮೇವು ಬ್ಯಾಂಕ್ ಸ್ಥಾಪಿಸುವ ಅಥವಾ ತಾತ್ಕಾಲಿಕ ಗೋಶಾಲೆ ಆರಂಭಿಸಬೇಕಾದ ಸಂದರ್ಭ ಬರುವುದಿಲ್ಲ.
ಮುಂಗಾರು ಪೂರ್ವ ಮಳೆ ಶೀಘ್ರದಲ್ಲೇ ಆರಂಭವಾಗುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿರುವುದರಿಂದ ಮತ್ತು ಈಗಾಗಲೇ ಮಳೆ ಬರಲು ಆರಂಭವಾಗಿರುವುದರಿಂದ ಹಸಿರು ಮೇವು ಲಭ್ಯವಾಗುವ ಆಶಾವಾದವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೇವು ಸಂಗ್ರಹ ಎಷ್ಟಿದೆ?: ಜಿಲ್ಲೆಯಲ್ಲಿ2.59 ಲಕ್ಷ ಜಾನುವಾರುಗಳು, 2.79 ಲಕ್ಷ ಕುರಿ–ಮೇಕೆಗಳಿವೆ. ಇವುಗಳಿಗೆ ವಾರಕ್ಕೆ 11,870 ಟನ್‌ಗಳಷ್ಟು ಮೇವು ಬೇಕು. 3.68 ಲಕ್ಷ ಟನ್ ಮೇವು ಲಭ್ಯವಿದೆ. ಪ್ರತಿ ವಾರ ಅಗತ್ಯವಿರುವ ಮೇವು ಲೆಕ್ಕ ಹಾಕಿದರೆ 31 ವಾರಗಳಿಗೆ ಬೇಕಾಗುವಷ್ಟು ಮೇವು ಇದೆ.
ತಾಲ್ಲೂಕುವಾರು ಅಂಕಿ–ಅಂಶಗಳ ಪ್ರಕಾರ, ಚಾಮರಾಜನಗರದಲ್ಲಿ 1.07 ಲಕ್ಷ ಟನ್ (31 ವಾರಕ್ಕೆ ಸಾಕಾಗುವಷ್ಟು), ಗುಂಡ್ಲುಪೇಟೆಯಲ್ಲಿ 1.28 ಲಕ್ಷ ಟನ್ (39 ವಾರ) ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ 1.08 ಲಕ್ಷ ಟನ್ (23 ವಾರ) ಹಾಗೂ ಯಳಂದೂರು ತಾಲ್ಲೂಕಿನಲ್ಲಿ 24,266 ಟನ್ ಮೇವು (47 ವಾರ) ಲಭ್ಯವಿದೆ.
ಅನಿವಾರ್ಯ
ಈ ಬಾರಿ ನಿರೀಕ್ಷೆಗಿಂತ ಮೊದಲೇ ತಾಪಮಾನ ಹೆಚ್ಚಾಗಿದ್ದು, ಹಸಿ ಮೇವಿನ ಕೊರತೆ ಎದುರಾಗಿದೆ. ಹಾಲು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರು ಸಾಕುವವರು ತಮ್ಮ ಜಮೀನುಗಳಲ್ಲಿ ಹಸಿ ಮೇವು ಬೆಳೆಯುತ್ತಾರೆ. ಅಂತಹವರ ಪ್ರಮಾಣ ಕಡಿಮೆ ಇದೆ. ಭತ್ತ, ಜೋಳ ಮುಂತಾದ ಬೆಳೆ ಬೆಳೆಯುವ ರೈತರು ಹಸಿ ಮೇವಿಗೆ ಆದ್ಯತೆ ನೀಡುವುದಿಲ್ಲ. ಕಟಾವಿನ ನಂತರ ಒಣಹುಲ್ಲು, ಜೋಳದ ಕಡ್ಡಿಗಳನ್ನು ಸಂಗ್ರಹಿಸಿಡುತ್ತಾರೆ. ಇನ್ನೂ ಕೆಲವರು ಕಟಾವಿನ ನಂತರ ಮಾರಾಟ ಮಾಡುತ್ತಾರೆ.
ಚಾಮರಾಜನಗರ, ಯಳಂದೂರು ತಾಲ್ಲೂಕುಗಳಲ್ಲಿ ಕಳೆದ ವರ್ಷ ಕಾಡಿದ ನೆರೆಯಿಂದ ಹಲವು ರೈತರಿಗೆ ಮೇವಿನ ಸಂಗ್ರಹ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಭತ್ತದ ಒಣಹುಲ್ಲಿಗೆ ಹೆಚ್ಚು ದರ ನಿಗದಿಪಡಿಸಿರುವುದರಿಂದ, ಜಾನುವಾರು ಸಾಕಣೆದಾರರು ಹೆಚ್ಚು ಹಣ ವ್ಯಯಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಬ್ಬಿನ ಸೋಗೆಗಾಗಿ ಹಲವು ಕಡೆ ಅಲೆಯಬೇಕಾದ ತುರ್ತು ಎದುರಾಗಿದೆ.
ಹನೂರಿನಲ್ಲಿ ಸಮಸ್ಯೆ
ಜಿಲ್ಲೆಯ ಬೇರೆ ಭಾಗಗಳಿಗೆ ಹೋಲಿಸಿದರೆ ಒಣ ಪ್ರದೇಶವಾಗಿರುವ ಹನೂರಿನಲ್ಲಿ ಪ್ರತಿ ವರ್ಷ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಕಾಡುತ್ತದೆ. ಇಲಾಖೆಯ ಮಾಹಿತಿ ಪ್ರಕಾರವೇ ಈ ಬಾರಿ ಅಲ್ಲಿ 23 ವಾರಗಳಿಗೆ ಬೇಕಾಗುವಷ್ಟು ಮೇವು ಮಾತ್ರ ಇದೆ.
ಕೃಷಿ ಜತೆಗೆ ಇಲ್ಲಿನ ಬಹುತೇಕ ಗ್ರಾಮಗಳ ಜನರು ಜಾನುವಾರು ಸಾಕಣೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಕುರಟ್ಟಿ ಹೊಸೂರು, ಚೆನ್ನೂರು, ಅರಬಗೆರೆ, ಶೆಟ್ಟಳ್ಳಿ, ವಡಕೆಹಳ್ಳ, ಬಿದರಳ್ಳಿ, ಸುಳ್ವಾಡಿ, ನಾಲ್ ರೋಡ್, ಹಂಚಿಪಾಳ್ಯ, ನೆಲ್ಲೂರು, ಕೂಸ್ಲೂರು, ಹೂಗ್ಯಂ, ಮೀಣ್ಯಂ ಹಾಗೂ ದಿನ್ನಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಬೇಸಿಗೆ ಆರಂಭವಾಗುತ್ತಿದ್ದಂತೆ ಆತಂಕ ಎದುರಾಗುತ್ತದೆ.
ಕಾಡಂಚಿನ ಪ್ರದೇಶದ ಈ ಗ್ರಾಮಗಳ ಜನರು ಮೊದಲು ಅರಣ್ಯದೊಳಗೆ ದೊಡ್ಡಿ ನಿರ್ಮಿಸಿಕೊಂಡು ಜಾನುವಾರುಗಳನ್ನು ಸಾಕುತ್ತಿದ್ದರು. ಈಚೆಗೆ ಅರಣ್ಯಾಧಿಕಾರಿಗಳು ಕಾಡಿನೊಳಗೆ ದೊಡ್ಡಿ ನಿರ್ಮಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ. ಇದರಿಂದ ಬೇಸತ್ತು ಕೆಲವು ರೈತರು ದನ–ಕರುಗಳನ್ನು ಮಾರಿದ್ದಾರೆ. ಆದರೆ, ಅವುಗಳನ್ನೇ ನಂಬಿ ಬದುಕುವ ರೈತರು ಜಾನುವಾರು ಸಾಕಲು ಬೇಸಿಗೆಯಲ್ಲಿ ಪ್ರಯಾಸ ಪಡುತ್ತಾರೆ. ಒಣ ಹುಲ್ಲು ದುಬಾರಿಯಾಗಿರುವುದರಿಂದ ಅದನ್ನು ಖರೀದಿಸುವ ಸಾಮರ್ಥ್ಯವೂ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಹೊರ ರಾಜ್ಯಕ್ಕೆ...
ಜಿಲ್ಲೆಯಿಂದ ಭತ್ತದ ಒಣಹುಲ್ಲು ನೆರೆಯ ತಮಿಳುನಾಡು, ಕೇರಳಕ್ಕೆ ಹೋಗುತ್ತದೆ. ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ ಭಾಗದಲ್ಲಿ ಭತ್ತ ಬೆಳೆಯಲಾಗುತ್ತದೆ. ಕಟಾವಿನ ನಂತರ ಕೆಲವು ರೈತರು ತಮಗೆ ಬೇಕಾದಷ್ಟು ಒಣಹುಲ್ಲು ಸಂಗ್ರಹಿಸಿದರೆ ಉಳಿದವರು ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಅವರು ಅದನ್ನು ಹೊರ ರಾಜ್ಯಕ್ಕೆ ಸಾಗಿಸುತ್ತಾರೆ. ಬಿಲ್ಲೆ ಹಾಗೂ ಕಂತೆ ರೂಪದಲ್ಲಿ ಒಣಹುಲ್ಲು ಲೋಡುಗಟ್ಟಲೆ ಹೋಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು. ಆಗ ಸ್ಥಳೀಯರಿಗೆ ಅಗತ್ಯಬಿದ್ದಾಗ ಒಣಹುಲ್ಲು ಸಿಗುತ್ತದೆ ಎನ್ನುತ್ತಾರೆ ರೈತ ಮುಖಂಡರು.
‘ಆತಂಕ ಬೇಡ, ಮೇವು ಲಭ್ಯ’
ಮೇವಿನ ಲಭ್ಯತೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶುಪಾಲನೆ ಮತ್ತು ಪಶುವೈದ್ಯ ಕೀಯ ಇಲಾಖೆ ಉಪ ನಿರ್ದೇಶಕ ಡಾ.ಶಿವಣ್ಣ ‘ಈ ವರ್ಷ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೇವಿನ ಸಮಸ್ಯೆಯಾಗದು. ನಮ್ಮಲ್ಲಿ ಸಾಕಷ್ಟು ಮೇವು ಲಭ್ಯವಿದೆ. ಬಹುತೇಕ ರೈತರು ತಮಗೆ ಬೇಕಾದಷ್ಟು ಮೇವನ್ನು ಸಂಗ್ರಹಿಸಿಟ್ಟಿದ್ದಾರೆ. ಈಗ ಮಳೆಯೂ ಆರಂಭವಾಗಿದೆ. ಎರಡು ಮೂರು ಮಳೆ ಚೆನ್ನಾಗಿ ಬಿದ್ದರೆ, ಹಸಿರು ಹುಲ್ಲು ಚಿಗುರಲು ಆರಂಭವಾಗುತ್ತದೆ. ಬರದ ಸಂದರ್ಭದಲ್ಲಿ ಮೇವು ಬ್ಯಾಂಕ್, ತಾತ್ಕಾಲಿಕ ಗೋಶಾಲೆಯಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ. ನಮ್ಮಲ್ಲಿ ಬರದ ಸ್ಥಿತಿ ಇಲ್ಲ’ ಎಂದರು.
––
ಒಣಹುಲ್ಲು ದುಬಾರಿ
ಹಸಿರು ಹುಲ್ಲು ಈಗ ಸಿಗುವುದಿಲ್ಲ. ಒಣ ಮೇವು ಲಭ್ಯವಿದೆ. ಆದರೆ ದುಬಾರಿ. ಟಾಟಾ ಏಸ್‌ನಲ್ಲಿ ತಂದರೆ ₹ 10 ಸಾವಿರ ಕೊಡಬೇಕು. ಟ್ರ್ಯಾಕ್ಟರ್‌ಗೆ
₹ 12,500ರಿಂದ ₹ 15 ಸಾವಿರದವರೆಗೆ ಇದೆ. ಬೇಸಿಗೆಯಲ್ಲಿ ಹಾಲು ಉತ್ಪಾದನೆಯೂ ಕಡಿಮೆ. ಹೈನುಗಾರರಿಗೆ ಹೊರೆ ಹೆಚ್ಚು.
–ಮಹದೇವಪ್ಪ, ಸೋಮವಾರಪೇಟೆ, ಚಾಮರಾಜನಗರ
ಹೊರ ರಾಜ್ಯಕ್ಕೆ ಹೋಗುವುದು ತಪ್ಪಿಸಿ
ಬೇಸಿಗೆಯಲ್ಲಿ ಮೇವಿನ ಸಮಸ್ಯೆ ಕಂಡು ಬಂದಿದೆ. ಜಿಲ್ಲೆಯಿಂದ ಒಣಹುಲ್ಲು ಹೊರ ರಾಜ್ಯದ ಕಡೆಗೆ ಹೋಗುವುದನ್ನು ತಪ್ಪಿಸಿ. ಸರ್ಕಾರ ಖರೀದಿ ಮಾಡಿ ಪಂಚಾಯಿತಿಗಳಲ್ಲಿ ಮೇವು ಕೊಡುವಂತಾಗಬೇಕು. ಮೇವು ಬೆಳೆದಿರುವ ರೈತರಿಂದ ಹೆಚ್ಚಿನ ಬೆಲೆ ನೀಡಿ ಕೊಳ್ಳಬೇಕು.
–ಮಹಾದೇವಪ್ಪ, ಶಿವಪುರ, ಗುಂಡ್ಲುಪೇಟೆ ತಾಲ್ಲೂಕು
ದುಬಾರಿಯಾದ ಒಣ ಮೇವು
ಕಳೆದ ವರ್ಷ ಬಿದ್ದ ಅಕಾಲಿಕ ಮಳೆಯಿಂದ ಈ ಬಾರಿ ಮೇವಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಒಂದು ಟ್ರ್ಯಾಕ್ಟರ್ ಹುಲ್ಲಿಗೆ ₹ 10 ಸಾವಿರದಿಂದ ₹ 12 ಸಾವಿರದ ತನಕ ಇರುತ್ತಿತು. ಈಗ ಬೆಲೆ ಏರಿಕೆಯಾಗಿದೆ.
–ಚಂದ್ರಶೇಖರ್, ಮಲಾರಪಾಳ್ಯ,ಯಳಂದೂರು ತಾಲ್ಲೂಕು
ಕುಟುಂಬಗಳು ಸಂಕಷ್ಟದಲ್ಲಿ
ಈ ಬಾರಿ ಬಿಸಿಲಿನ ತಾಪ ಜೋರಾಗಿದೆ. ಕಳೆದ ವರ್ಷದ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದು, ಮೇವಿನ ಸಮಸ್ಯೆ ಕಾಡಿದೆ. ಕಳೆದ ಸಲ ಮಳೆ ಹೆಚ್ಚಾಗಿ ಒಣ ಹುಲ್ಲು ಸಂಗ್ರಹವಾಗಿಲ್ಲ. ಯುಗಾದಿಗೂ ಮೊದಲೇ ಮೇವಿನ ಸಮಸ್ಯೆ ಕಾಡಿದೆ. ಹೈನುಗಾರಿಕೆ ನೆಚ್ಚಿಕೊಂಡ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.
–ಗಜೇಂದ್ರ, ಮದ್ದೂರು,ಯಳಂದೂರು ತಾಲ್ಲೂಕು
ಹಸಿರು ಮೇವಿಲ್ಲ
ಹಸಿರು ಮೇವು ಕೊರತೆಯಾಗಿ ಹಸುಗಳು ಕಡಿಮೆ ಹಾಲು ನೀಡುತ್ತಿವೆ. ನಮ್ಮ ಭಾಗದ ಭತ್ತದ ಹುಲ್ಲು ತಮಿಳುನಾಡು, ಕೇರಳಕ್ಕೆ ಮಾರಾಟವಾಗಿರುವುದರಿಂದ ಹೆಚ್ಚಾಗಿ ಒಣಮೇವು ಸಂಗ್ರಹಿಸಿಲ್ಲ. ಸರ್ಕಾರ ಪಂಚಾಯಿತಿಗೊಂದು ಗೋ ಶಾಲೆ ತೆರೆದು ಅನುಕೂಲ ಮಾಡಿಕೊಡಬೇಕು.
–ಮನು, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು
ಜಾನುವಾರುಗಳು ನಿತ್ರಾಣ
ತಾಲ್ಲೂಕಿನಲ್ಲಿ ಪ್ರತಿ ಬೇಸಿಗೆಯಲ್ಲೂ ಮೇವಿನ ಕೊರತೆ ಉಂಟಾಗುತ್ತದೆ. ಈ ವರ್ಷವೂ ಅದೇ ಪರಿಸ್ಥಿತಿ ಇದೆ. ಜಾನುವಾರುಗಳಿಗೆ ಮೇವು ನೀರಿಲ್ಲದೆ ನಿತ್ರಾಣಗೊಳ್ಳುತ್ತಿವೆ. ಜಿಲ್ಲಾಡಳಿತ ಈಗಲೇ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು.
–ಶಾಂತಕುಮಾರ್, ಚೆನ್ನೂರು, ಹನೂರು ತಾಲ್ಲೂಕು
ನಿರ್ವಹಣೆ: ಸೂರ್ಯನಾರಾಯಣ ವಿ.
ಪೂರಕ ಮಾಹಿತಿ: ನಾ. ಮಂಜುನಾಥಸ್ವಾಮಿ, ಬಿ.ಬಸವರಾಜು, ಮಹದೇವ್ ಹೆಗ್ಗವಾಡಿಪುರ, ಮಲ್ಲೇಶ ಎಂ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.