ಶುಕ್ರವಾರ, ಏಪ್ರಿಲ್ 3, 2020
19 °C
ನಾಮಕರಣ, ಮದುವೆ, ಬೀಗರನ್ನು ಕರೆಯುವ ಹಾಡು, ಸೀಮಂತ ಶಾಸ್ತ್ರಗಳಲ್ಲಿ ಹಾಡುವುದರಲ್ಲಿ ಎತ್ತಿದ ಕೈ

ಜನಪದೀಯರ ಬುತ್ತಿ ಬಿಚ್ಚಿಡುವ ಬೋರಮ್ಮ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ‘ಬಾಗಿಲು ತೆಗಿಯಿರಮ್ಮ ಭಾಗ್ಯದ ಲಕ್ಷ್ಮಮ್ಮ ಜ್ಯೋತಮ್ಮೊಳಗೆ ಕರಕೊಳ್ಳಿ...’ ದೀಪಾವಳಿ ಮಾದೇಶ್ವರ ಜಾತ್ರೆಯಿಂದ ಊರಿಗೆ ಬಂದವರು ಹಾಡುವ ಹಾಡಿದು. ಗ್ರಾಮೀಣ ಮಹಿಳೆಯರ ಕಂಠಸಿರಿಯಲ್ಲಿ ಈ ಪದ ಮೂಡಿಬರುತ್ತಿದ್ದರೆ, ಮನಸೋಲದವರು ಯಾರು?

ಇಂತಹ ಜನಪದೀಯ ಪದಗಳನ್ನು ಹಾಡುವುದರಲ್ಲಿ ಎತ್ತಿದ ಕೈ ಬೋರಮ್ಮ. ತಾಲ್ಲೂಕಿನ ಕೊಮಾರನಪುರದ 65 ವರ್ಷದ ಬೋರಮ್ಮ ಅವರಿಗೆ ನಡೆಯುತ್ತಾ ಹಾಡುವುದೆಂದರೆ ಬಲು ಇಷ್ಟ. ಮಾದಪ್ಪನ ದೀಪಾವಳಿ ಜಾತ್ರೆ, ರಂಗಪ್ಪನ ತೇರು, ಮನೆಯ ಸುತ್ತಮುತ್ತಲ ನೂರೆಂಟು ಸಂಭ್ರಮಕ್ಕೆ ಈಕೆಗೆ ಎಲೆ ಅಡಿಕೆ ಕೊಡಲೇಬೇಕು. ಸಂಗಡಿಗರೊಂದಿಗೆ ಹಾಡುವ ಬೋರಮ್ಮನ  ದನಿ ಮನ–ಮನೆಗಳನ್ನು ಮುಟ್ಟಲೇಬೇಕು. 

ನಾಮಕರಣ, ಮದುವೆ, ಬೀಗರನ್ನು ಕರೆಯುವ ಹಾಡು, ಸೀಮಂತ ಶಾಸ್ತ್ರಗಳಲ್ಲಿ ಇವರ ಸೋಬಾನೆ ಪದಗಳ ನಿನಾದ ಕೇಳಿ ಬರುತ್ತಿರುತ್ತದೆ. ಊರಲ್ಲಿ ಉಳಿದ ನಾಲ್ಕಾರು ಮಂದಿ ಬೋರಮ್ಮನ ಹಾಡಿಗೆ ಒಟ್ಟಾಗುತ್ತಾರೆ.  

‘ಅಳಬೇಡ ನನ್ನ ಕಂದ ತಿಂಗಳ ಕರೆಯುವೆ, ನೀ ಅತ್ತರೆ ಚಂದಿರನ ತಂಗಿಯರು ಧರೆಗಿಳಿದು ಚಂದದ ಅಂಗಿ ತೊಡಿಸ್ಯಾರು.., ಎಂದು ಚಂದ ಮಾಮನ ಪದಗಳ ಮೂಲಕ ಮಗುವನ್ನು ಸಂತೈಸುತ್ತಾರೆ. ಈಕೆಯ ಜೋಗುಳಕ್ಕೆ ನೂರೆಂಟು ಅರ್ಥಗಳು ಹೊಮ್ಮುತ್ತವೆ ಎನ್ನುತ್ತಾರೆ ಗ್ರಾಮದ ರವಿ ಅವರು.

‘ಬಾಲ್ಯದ ದಿನಗಳಲ್ಲಿ ಶಾಲೆಗೀಲೆ ಇರಲಿಲ್ಲ. ಹಬ್ಬ–ಹರಿದಿನಗಳಲ್ಲಿ ಕುಟ್ಟೋ ಪದ, ಎಣ್ಣೆ ಒತ್ತೋ ಪದ, ಸುಗ್ಗಿ ಪದ, ಮಕ್ಕಳ ಪದ ಹಾಡೋರು. ಕೆಲವರು ಹಣೆಗೆ ವಿಭೂತಿ ಹಚ್ಚಿ ಕೈಯಲ್ಲಿ ತಂಬೂರಿ ಹಿಡಿದು ದಾಸರ ಪದ, ತತ್ತ್ವ ಪದ ಹೇಳೋರು. ಇವೆಲ್ಲಾ ನಮಗೆ ವಿಸ್ಮಯಗಳಾಗಿ ಕಾಡುತ್ತಿದ್ದವು. ವರ್ಷಕ್ಕೊಮ್ಮೆ ಗ್ರಾಮದಲ್ಲಿ ದೇವರ ಕಥೆ ಇದ್ದೇ ಇರುತ್ತಿತ್ತು. ಕಥೆಯಲ್ಲಿ ಬರುವ ನಮ್ಮೂರಿನ ಮಾರಿ, ದೈವಗಳ ವರ್ಣನೆಯೂ ನಮ್ಮನ್ನು ಹಾಡಲು ಪ್ರೇರಣೆ ತುಂಬುತ್ತಿದ್ದವು’ ಎಂದು ಹೇಳುತ್ತಾರೆ ಬೋರಮ್ಮ. 

‘ಒಂದು ಪ್ರದೇಶದ ಜಾನಪದ ಆಯಾ ಕಾಲಗಟ್ಟದ ಸಾರ. ಆಯಾ ಆಚರಣೆಯ ಮೂಲ ಬೇರನ್ನು ಜನಪದದ ಸಾಹಿತ್ಯದಲ್ಲಿ ಕಾಣಬಹುದು. ನೋವು–ನಲಿವು, ಗಾದೆ, ಐತಿಹ್ಯ, ನಂಬಿಕೆ, ಸಂಪ್ರದಾಯಗಳ ಭಾಗವಾಗಿ ಇವುಗಗಳನ್ನು ಕಾಣಬಹುದು. ಇತರರನ್ನು ಸಿಟ್ಟಿನಿಂದ ಬೈಯ್ಯುವಾಗ, ನೀತಿ–ಮೌಲ್ಯಗಳನ್ನು ತಿಳಿಸುವಾಗ ಗಾದೆಗಳನ್ನು ಬಳಸುತ್ತಾರೆ’ ಎಂದು ಬೋರಮ್ಮ ವಿವರಿಸುತ್ತಾರೆ.

‘ನಾವು ಹಾಡುವಾಗ ಯಾವುದೇ ವಾದ್ಯ, ಸಂಗೀತಗಳ ಹಂಗಿಲ್ಲ. ಕಥನ ಗೀತೆ ಮತ್ತು ಸೋಬಾನೆ ಪದಗಳಲ್ಲಿ ಈಶ್ವರ, ಸರಸ್ವತಿ, ಪಾರ್ವತಿಯರನ್ನು ಭೂವಿಗೆ ಇಳಿಸುತ್ತಾರೆ. ಶಿವಭಕ್ತರ ಜನಪದರಲ್ಲಿ ಕೌಟುಂಬಿಕ ಕಥನಗಳು ಸುಕ್ಕು ಗಟ್ಟಿರುತ್ತವೆ. ಗ್ರಾಮೀಣರ ನಡಾವಳಿ ಇಂತಹ ದೈವಗಳೊಂದಿಗೆ ಬೆಸೆದು ಕೊಂಡಿರುತ್ತವೆ. ಈಗಲೂ ಹಾಡುವವರಿಗೆ ಮನೆ ಮನೆಯಲ್ಲಿ ದೀಪಕ್ಕೆ ಎಣ್ಣೆ, ಅಕ್ಕಿ, ಹಣ್ಣು, ತೆಂಗಿನಕಾಯಿ ಮತ್ತು ಚಿಲ್ಲರೆ ಹಣ ನೀಡುವ ಪದ್ಧತಿ ಇದೆ’ ಎಂದು ಹೇಳುತ್ತಾರೆ ಅವರು.

‘ಮರೆಯಾಗುತ್ತಿದೆ ಸಂಭ್ರಮ’

‘ಜನಪದೀಯರ ಭಾಷೆ ಹೃದಯ ಮುಟ್ಟುತ್ತದೆ. ಆಧುನಿಕ ಸಿನೆಮಾ ಸಂಗೀತಕ್ಕೆ ಕಾಲ–ದೇಶಗಳನ್ನು ಆಳುವ ಶಕ್ತಿ ಇಲ್ಲ. ಇಂದಿನ ಯುವವಕರು ನಮ್ಮ ದೇಶಿ ಸಾಹಿತ್ಯವನ್ನು ಬಳಸಿಕೊಂಡು ಹಣ ಮಾಡುವ ದುಃಸ್ಥಿತಿಗೆ ತಲುಪಿದ್ದಾರೆ. ಶುದ್ಧ ಇಂತಹವರು ಶುದ್ಧ ಜನಪದವನ್ನು ಹಾಡದಂತೆ ಮಾಡಬೇಕಾದ ಅಗತ್ಯವಿದೆ. ಹತ್ತಾರು ದಿನಗಳ ಕಾಲ ಕಾಡು–ಮೇಡಿನಲ್ಲಿ ಜನರೊಟ್ಟಿಗೆ ನಡೆದು ಹಾಡಿ ನಲಿಯುವ ಸಂಭ್ರಮ ಇತ್ತೀಚಿಗೆ ಮರೆಯಾಗುತ್ತಿದೆ’ ಎಂದು ಬೋರ ವಿಷಾದ ವ್ಯಕ್ತಪಡಿಸುತ್ತಾರೆ ಬೋರಮ್ಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು