ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕಾಡಿನ ಪ್ರಾಣಿಗಳಿಗೆ ಟ್ಯಾಂಕರ್‌ ನೀರು!

ವನ್ಯಜೀವಿಗಳ ದಾಹ ತಣಿಸಲು ತೊಟ್ಟಿ ನಿರ್ಮಾಣ, ಕೆರೆ ಕಟ್ಟೆಗಳಿಗೆ ಕೊಳವೆ ಬಾವಿಯಿಂದ ನೀರು ಪೂರೈಕೆ
Published 11 ಏಪ್ರಿಲ್ 2024, 7:11 IST
Last Updated 11 ಏಪ್ರಿಲ್ 2024, 7:11 IST
ಅಕ್ಷರ ಗಾತ್ರ

ಹನೂರು: ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂದು ಗುರುತಿಸಿಕೊಂಡಿರುವ ಕಾವೇರಿ ವನ್ಯಧಾಮದಲ್ಲಿ ನೀರಿನ ಅಭಾವ ಎದುರಾಗಿದೆ. ವನ್ಯಧಾಮದ ವ್ಯಾಪ್ತಿಯಲ್ಲಿ ಕಾವೇರಿ ನದಿ ಹರಿದರೂ ಪ್ರಾಣಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಾಕಾಗುತ್ತಿಲ್ಲ. 

ಪ್ರಾಣಿಗಳಿಗೆ ನೀರಿನ ಕೊರತೆ ಕಾಡದಂತೆ ಮಾಡಲು ಅರಣ್ಯ  ಇಲಾಖೆ ಕಾಡಿನೊಳಗಿರುವ ಕೆರೆ, ಕಟ್ಟೆಗಳಿಗೆ ಕೊಳವೆ ಬಾವಿ, ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿದೆ. 

ನೀರು ಅರಸಿ ಕಾಡಂಚಿನಲ್ಲಿರುವ ಗ್ರಾಮಗಳತ್ತ ವನ್ಯಪ್ರಾಣಿಗಳು ಬರುತ್ತಿದ್ದು, ಇದನ್ನು ತಪ್ಪಿಸುವುದಕ್ಕಾಗಿ ಅಧಿಕಾರಿಗಳು ಈ ಕ್ರಮ ಕೈಕೊಂಡಿದ್ದಾರೆ. 

ಕಾಡಿನ ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ವಿದ್ಯುತ್ ಸಮಸ್ಯೆ ಇರುವುದರಿಂದ ಕೊಳವೆ ಬಾವಿಗಳಿಂದ ನೀರು ಮೇಲಕ್ಕೆತ್ತಲು ಸೋಲಾರ್‌ ಪಂಪ್‌, ಡೀಸೆಲ್‌ ಪಂಪ್‌ಗಳ ವ್ಯವಸ್ಥೆ ಮಾಡಲಾಗಿದೆ.

ಸೋಲಾರ್‌ ವ್ಯವಸ್ಥೆಗೆ ಹೆಚ್ಚು ವೆಚ್ಚವಾಗುತ್ತದೆ. ಜೊತೆಗೆ ಕಾಡಿನೊಳಗಡೆ ಆನೆ, ಇನ್ನಿತರ ಪ್ರಾಣಿಗಳು ಸೋಲಾರ್‌ ಫಲಕಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಕೆರೆಗಳಿಗೆ ನೀರು ತುಂಬಿಸಲು ಡೀಸೆಲ್ ಪಂಪ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. 

‘ಡೀಸೆಲ್‌ ಪಂಪ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದು. ನೀರು ತುಂಬಿಸಿದ ಬಳಿಕ ಬೇರೆಡೆ ಸಾಗಿಸುವುದರಿಂದ ಪ್ರಾಣಿಗಳ ದಾಳಿಗೆ ತುತ್ತಾಗುವ ತೊಂದರೆ ಇಲ್ಲ. ಒಮ್ಮೆ ತುಂಬಿಸಿದರೆ 15 ದಿನಗಳಿಗೆ ಸಾಲುವಷ್ಟು ನೀರು ನಿಲ್ಲುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು. 

ಸಿಮೆಂಟ್‌ ತೊಟ್ಟಿಗಳ ನಿರ್ಮಾಣ: ಅರಣ್ಯ ವ್ಯಾಪ್ತಿಯಲ್ಲಿ 22 ಕಡೆಗಳಲ್ಲಿ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಕೆಲವು ಕಡೆ ಟ್ಯಾಂಕರ್‌ಗಳಿಂದ ನೀರು ತುಂಬಿಸಲಾಗುತ್ತಿದೆ. ಆರು ಸೋಲಾರ್ ಪಂಪ್ ಸೆಟ್‌ಗಳಿದ್ದು ಇದರಿಂದ 10 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಹಳೆ ಕೊಳವೆಬಾವಿಗಳಿಗೆ ಎಂಟು ಡಿಸೇಲ್ ಪಂಪ್‌ಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಸುಮಾರು 30ಕ್ಕೂ ಹೆಚ್ಚು ಕಡೆಗಳಲ್ಲಿ ಹಳ್ಳಗಳಲ್ಲಿ ಮರಳು ತೆಗೆದು, ಅಲ್ಲಿ ನೀರು ತುಂಬಿಸಲಾಗಿದೆ.

‘ಕೌದಳ್ಳಿ ಹಾಗೂ ಗೋಪಿನಾಥಂ ವನ್ಯಜೀವಿ ವಲಯಗಳು ಕಣಿವೆ ಪ್ರದೇಶವಾಗಿರುವುದರಿಂದ ಬೇಸಿಗೆ ಸಮಯದಲ್ಲಿ ಈ ಜಾಗಕ್ಕೆ ಹೆಚ್ಚು ಆನೆಗಳು ಬರುತ್ತವೆ.  ಬೇಸಿಗೆ ಸಂದರ್ಭದಲ್ಲೂ ಇಲ್ಲಿ ನೀರು, ಮೇವು ಸಮೃದ್ಧವಾಗಿ ಸಿಗುವುದರಿಂದ ಆನೆಗಳು ಅಲ್ಲೇ ಉಳಿಯುವುದು ಹೆಚ್ಚು. ಜತೆಗೆ ಕೌದಳ್ಳಿ ವನ್ಯಜೀವಿ ವಲಯ ಉತ್ತಮ ವನ್ಯಜೀವಿ ಕಾರಿಡಾರ್ ಆಗಿದೆ. ಕೌದಳ್ಳಿಯಿಂದ ಮಲೆಮಹದೇಶ್ವರ ವನ್ಯಧಾಮದ ರಾಮಾಪುರ, ಪಿ.ಜಿ ಪಾಳ್ಯ ವನ್ಯಜೀವಿ ವಲಯಗಳ ಮೂಲಕ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಚರಿಸುತ್ತವೆ. ಇದರ ಜತೆಗೆ ಬನ್ನೇರುಘಟ್ಟ ಹಾಗೂ ತಮಿಳುನಾಡಿನ ಹೊಸೂರು ಅರಣ್ಯದಿಂದಲೂ ಇಲ್ಲಿಗೆ ಆನೆಗಳು ಆಗಮಿಸುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು. 

ಅರಣ್ಯದಲ್ಲಿ ನಿರ್ಮಿಸಿರುವ ತೊಟ್ಟಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿರುವುದು
ಅರಣ್ಯದಲ್ಲಿ ನಿರ್ಮಿಸಿರುವ ತೊಟ್ಟಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸುತ್ತಿರುವುದು
ಬೇಸಿಗೆಗೂ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ನೀರಿನ ಸಮಸ್ಯೆ ತಲೆದೋರಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು
ಸುರೇಂದ್ರ ಡಿಸಿಎಫ್ ಕಾವೇರಿ ವನ್ಯಧಾಮ.
 2017ರಲ್ಲಿ ಈ ರೀತಿಯ ಬರ ಕಾಣಿಸಿಕೊಂಡಿತ್ತು. ಏಳು ವರ್ಷಗಳ ಬಳಿಕ ಮತ್ತೆ ಈ  ಪರಿಸ್ಥಿತಿ ಎದುರಾಗಿದೆ. ಪ್ರಾಣಿ್ಗಳಿಗೆ ನೀರು ಪೂರೈಸಲು ನಾವು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ
ಎಂ.ಎನ್ ಅಂಕರಾಜು ಎಸಿಎಫ್ ಕಾವೇರಿ ವನ್ಯಧಾಮ.
ರೈತನಿಂದ ಚೆಕ್ ಡ್ಯಾಂಗೆ ನೀರು
ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪಡುವ ಕಷ್ಟವನ್ನು ಗಮನಿಸಿರುವ ಕಾಡಂಚಿನ ಜಮೀನಿನ ರೈತರೊಬ್ಬರು ಅರಣ್ಯದಲ್ಲಿನ ಚೆಕ್ ಡ್ಯಾಂಗೆ ನೀರು ಹರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹನೂರು ವನ್ಯಜೀವಿ ವಲಯದ ಅರಣ್ಯದಂಚಿನಲ್ಲಿರುವ ನಂಜುಂಡ ಎಂಬುವವರು ಕೃಷಿಗೆ ನೀರು ಬಳಸಿಕೊಂಡ ನಂತರ ಉಳಿದ ನೀರನ್ನು ಅರಣ್ಯದ ಚೆಕ್ ಡ್ಯಾಂಗೆ ಹರಸಿದ್ದಾರೆ. ಇದುವರೆಗೆ ಮೂರು ಬಾರಿ ಚೆಕ್ ಡ್ಯಾಂ ತುಂಬಿಸಿದ್ದಾರೆ. ಇದರಿಂದ ವನ್ಯಪ್ರಾಣಿಗಳಿಗೆ ಅನುಕೂಲವಾಗಿದೆ. ನಂಜುಂಡ ಅವರ ಸಹಕಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳೂ ಶ್ಲಾಘಿಸಿದ್ದಾರೆ.  ‘ಬೇಸಿಗೆಯಲ್ಲಿ ಪ್ರಾಣಿಗಳು ನೀರಿಗಾಗಿ ಜಮೀನಿನತ್ತ ಬರುತ್ತಿದ್ದವು. ಇದನ್ನು ಗಮನಿಸಿ ಚೆಕ್ ಡ್ಯಾಂಗೆ ನೀರು ಹರಿಸಿದೆ. ಆ ಬಳಿಕ ಪ್ರಾಣಿಗಳು ಬರುವುದು ತಪ್ಪಿದೆ. ಜತೆಗೆ ವೈಯಕ್ತಿಕವಾಗಿ ನನ್ನ ಮನಸ್ಸಿಗೂ ಖುಷಿಯಾಗಿದೆ’ ಎಂದು ರೈತ ನಂಜುಂಡ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT