ಬುಧವಾರ, ಮೇ 12, 2021
18 °C
ಕಾವೇರಿ ವನ್ಯಧಾಮ ಬಿಟ್ಟು ಬೇರೆಲ್ಲೂ ಹೆಚ್ಚು ಹಾನಿ ಮಾಡದ ಕಾಡಿನ ಬೆಂಕಿ, ಅಧಿಕಾರಿಗಳು, ಸಿಬ್ಬಂದಿ ಈಗ ಹಗುರ

ಅರಣ್ಯದಲ್ಲೂ ಮಳೆ: ಕಾಳ್ಗಿಚ್ಚು ಆತಂಕ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯಾದ್ಯಂತ ನಾಲ್ಕೈದು ದಿನಗಳಲ್ಲಿ ಅರಣ್ಯ ಪ್ರದೇಶಗಳಲ್ಲೂ ಮಳೆಯಾಗಿದ್ದು, ಬಿಸಿಲಿನಿಂದ ಬೆಂಡಾಗಿದ್ದ ಗಿಡ ಮರಗಳಿಗೆ ಹೊಸ ಚೈತನ್ಯ ಬಂದಿದೆ. ಜೊತೆಗೆ ‌ಕಾಳ್ಗಿಚ್ಚಿನ ಆತಂಕ ದೂರವಾಗಿದ್ದು, ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

ವಾರದಿಂದೀಚೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದ ವ್ಯಾಪ್ತಿಗಳಲ್ಲಿ ಮಳೆಯಾಗಿದೆ. ಕಾಡಂಚಿನ ಪ್ರದೇಶ ಹಾಗೂ ಒಳ ಪ್ರದೇಶದಲ್ಲೂ ಸಾಧಾರಣದಿಂದ ಉತ್ತಮ ಮಳೆಯಾಗಿದೆ. 

ಸಾಮಾನ್ಯವಾಗಿ ಬಿರು ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಕಾಡಿಗೆ ಬಿದ್ದ ಬೆಂಕಿಯ ಸಣ್ಣ ಕಿಡಿ ಕೂಡ ಬಿಸಿಲಿನ ಝಳ ಹಾಗೂ ಬೀಸುವ ಗಾಳಿಗೆ ವೇಗವಾಗಿ ಹರಡಿ, ಗಿಡ ಮರಗಳನ್ನು ಆಪೋಷನ ತೆಗೆದುಕೊಳ್ಳುತ್ತವೆ. ಕಾಳ್ಗಿಚ್ಚಿನ ತಡೆಗಾಗಿಯೇ ಅರಣ್ಯ ಇಲಾಖೆ ಪ್ರತಿ ಬೇಸಿಗೆಯಲ್ಲಿ ವಿಶೇಷವಾಗಿ ಸಿದ್ಧತೆಗಳನ್ನು ನಡೆಸುತ್ತದೆ. ಒಂದು ಉತ್ತಮ ಮಳೆ ಬಂದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಂಚ ಹಗುರವಾಗುತ್ತಾರೆ. ವಾರದಲ್ಲಿ ಎರಡು ಮೂರು ಮಳೆ ಬಂದರೆ, ಆ ವರ್ಷ ಮತ್ತೆ  ಕಾಳ್ಗಿಚ್ಚು ಕಂಡು ಬರುವ ಸಾಧ್ಯತೆ ತುಂಬಾ ಕ್ಷೀಣ. ಅಲ್ಲದೇ ಕೆರೆ ಕಟ್ಟೆಗಳಿಗೆ ನೀರು ಹರಿದು ಬರುವುದರಿಂದ ಪ್ರಾಣಿಗಳಿಗೆ ನೀರಿನ ಕೊರತೆಯೂ ಕಾಡದು. 

ಈ ವಾರದಲ್ಲಿ ಮೂರು ನಾಲ್ಕು ದಿನ ಮಳೆಯಾಗಿರುವುದು ಅಧಿಕಾರಿಗಳಲ್ಲಿ ಸಂತಸ ಉಂಟು ಮಾಡಿದೆ. ಇನ್ನು ಎರಡು ಮೂರು ವಾರ ಮಳೆಯಾಗದಿದ್ದರೂ, ಬೆಂಕಿ ಅನಾಹುತ ಆಗುವ ಸಾಧ್ಯತೆ ಕಡಿಮೆ ಎಂಬುದು ಅವರ ಊಹೆ. 

ಈ ಬಾರಿ ಜಿಲ್ಲೆಯ ಅರಣ್ಯದಲ್ಲಿ ಕಾವೇರಿ ವನ್ಯಧಾಮ ಬಿಟ್ಟರೆ, ಬೇರೆಲ್ಲೂ ದೊಡ್ಡ ಮಟ್ಟಿನ ಕಾಳ್ಗಿಚ್ಚು ಸಂಭವಿಸಿಲ್ಲ. ಬಂಡೀಪುರ ಅರಣ್ಯದ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಎರಡು ಮೂರು ಕಡೆ ಕೆಲವು ಎಕರೆಗಳಷ್ಟು ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ಬಿಆರ್‌ಟಿ ಅರಣ್ಯದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗದಿದ್ದರೂ, ಚಾಮರಾಜನಗರ ಸಮೀಪದ ಕರಿವರದರಾಜನಬೆಟ್ಟ ಹಾಗೂ ಸುತ್ತಮುತ್ತಲಿನ ಸಾಲು ಬೆಟ್ಟಗಳಿಗೆ ಬೆಂಕಿ ಬಿದ್ದು ಹುಲ್ಲು, ಕುರುಚಲು ಗಿಡಗಗಳು ನಾಶವಾಗಿದ್ದವು. ಮಲೆ ಮಹದೇಶ್ವರ ವನ್ಯಧಾಮ‌ದ ವ್ಯಾಪ್ತಿಯ ಒದೆರಡು ಗುಡ್ಡಕ್ಕೆ ಬೆಂಕಿ ಬಿದ್ದಿತ್ತು. ಕಾವೇರಿ ವನ್ಯಧಾಮದ ಕೊತ್ತನೂರು, ಬಂಡಳ್ಳಿ ಪ್ರದೇಶದಲ್ಲಿ ಕಂಡು ಬಂದ ಕಾಳ್ಗಿಚ್ಚಿನಿಂದ ಸ್ವಲ್ಪ ಹೆಚ್ಚಿನ ಹಾನಿಯೇ ಸಂಭವಿಸಿತ್ತು. 

ಕಾಳ್ಗಿಚ್ಚು ತಡೆಗಾಗಿ ಅರಣ್ಯ ಇಲಾಖೆ ಪ್ರತಿ ವರ್ಷ ಕಾಡಂಚಿನ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ, ಕರ ಪತ್ರ ಹಂಚಿಕೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಹಾಗಿದ್ದರೂ, ಕಾಡಿಗೆ ಬೆಂಕಿ ಹಾಕುವವರಿದ್ದಾರೆ. ಎರಡು ವರ್ಷಗಳಿಂದ ಬಂಡೀಪುರದಲ್ಲಿ ಕಾಡಂಚಿನ ವಿಶ್ವಾಸಗಳಿಸಲು ಇಲಾಖೆ ಕೈಗೊಂಡ ಅನೇಕ ಕ್ರಮಗಳು ಫಲನೀಡಿದ್ದು, ಈ ಬಾರಿಯೂ ಬೆಂಕಿ ಬಿದ್ದಿಲ್ಲ.

‘ಮಳೆಯಿಂದ ಮನಸ್ಸು ನಿರಾಳ’

 ಮಳೆ ಬಂದಿರುವುದು ನಮ್ಮಲ್ಲಿನ ಅರ್ಧದಷ್ಟು ಒತ್ತಡ ಹಾಗೂ ಭಯವನ್ನು ಹೋಗಲಾಡಿಸಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಳರಾಗಿದ್ದಾರೆ. ಈ ವರ್ಷ ನಮಗೆ ಕಾಳ್ಗಿಚ್ಚಿನ ಭಯ ಸ್ವಲ್ಪ ಹೆಚ್ಚಾಗಿಯೇ ಇತ್ತು. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಹುಲ್ಲು ಬೆಳೆದಿದ್ದವು. ಕೋವಿಡ್‌ ಕಾರಣಕ್ಕೆ ಅನುದಾನದ ಕೊರತೆಯೂ ಇದ್ದುದರಿಂದ ಲಭ್ಯವಿದ್ದ ಅನುದಾನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೆವು. ಕಾವೇರಿ ವನ್ಯಧಾಮ ಬಿಟ್ಟು ಬೇರೆಲ್ಲೂ ದೊಡ್ಡ ಪ್ರಮಾಣದಲ್ಲಿ ಕಾಳ್ಗಿಚ್ಚು ಸಂಭವಿಸಿ‌ಲ್ಲ’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಎರಡು ಮೂರು ಮಳೆ ಬಂದಿರುವುದರಿಂದ ಈಗ ಒಣಗಿ ಹೋಗಿರುವ ಹುಲ್ಲುಗಳು ಕೊಳೆತು ಹೋಗುತ್ತವೆ. ಹೊಸ ಹುಲ್ಲು ಚಿಗುರೊಡೆಯುತ್ತದೆ. ಹಾಗಾಗಿ, ಒಂದು ವೇಳೆ ಬೆಂಕಿ ಬಿದ್ದರೂ ಅದು ಬೇಗ ಹರಡುವುದಿಲ್ಲ’ ಎಂದು ಅವರು ವಿವರಿಸಿದರು. 

ಶೇ 70ರಷ್ಟು ಭಾಗ ಮಳೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶೇ 70ರಷ್ಟು ಭಾಗ ಉತ್ತಮ ಮಳೆಯಾಗಿದೆ. ಎಲ್ಲೂ ಭಯ ಪಡುವಂತಹ ಸ್ಥಿತಿ ನಿರ್ಮಾಣ ಆಗಿರಲಿಲ್ಲ. ಸಿಬ್ಬಂದಿ ಶ್ರಮದಿಂದ ಎಲ್ಲ ರೀತಿಯಲ್ಲಿ ಸಜ್ಜು ಆಗಿದ್ದೆವು. ಉತ್ತಮ ಮಳೆಯಾಗುತ್ತಿರುವುದರಿಂದ ಪ್ರಾಣಿಗಳಿಗೆ ಮೇವು ಮತ್ತು ನೀರಿನ ಸಮಸ್ಯೆಯೂ ಬರದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.