ಬುಧವಾರ, ಸೆಪ್ಟೆಂಬರ್ 28, 2022
27 °C
ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಜಿ. ತಗತ್‌ ನೆನಪಿನಾಳ...

ಚೇಷ್ಟೆ ಮಾಡುತ್ತಲೇ ಚಳವಳಿಯ ಭಾಗವಾದೆ...

ಲಲಿತಾ ಜಿ.ತಗತ್‌ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಾನು ಹುಡುಗರ ರೀತಿಯಲ್ಲೇ ಬೆಳೆದಿದ್ದೆ. ಸಿಕ್ಕಾಪಟ್ಟೆ ಚೇಷ್ಟೆ ಮಾಡುತ್ತಿದ್ದೆ. ಹೋರಾಟ, ಗದ್ದಲ, ಪ್ರತಿಭಟನೆ ನಡೆಯುತ್ತಿದ್ದಲ್ಲಿ ನಾನಿರುತ್ತಿದ್ದೆ. ‘ಏನು ಬೇಕಾದರೂ ಮಾಡಲಿ’ ಎಂದು ತಾಯಿ ಬಿಟ್ಟುಬಿಟ್ಟಿದ್ದರು. ಹಾಗಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಬೇಡ ಎಂದು ನನ್ನನ್ನು ತಡೆಯುವವರು ಯಾರೂ ಇರಲಿಲ್ಲ. 14 ವರ್ಷಕ್ಕೇ ಧ್ವಜ ಹಿಡಿದು ಚಳವಳಿಯ ಭಾಗವಾದೆ. 

ನನ್ನ ತಂದೆ –ತಾಯಿ ಪಶ್ಚಿಮ ಬಂಗಾಳದವರು. ತಂದೆ ಗೋಪಿನಾಥ್‌ ತಗತ್‌ ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ತಾಯಿ ನಳಿನಾ ಬಾಯಿ ಅವರು ಶಿಕ್ಷಣ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ತಂದೆ ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದರು. ಅಲ್ಲಿಂದ ಕುಟುಂಬ ಮೈಸೂರಿಗೆ ಸ್ಥಳಾಂತರವಾಗಿತ್ತು. 1932ರ ಅಕ್ಟೋಬರ್‌ 10ರಂದು ಮೈಸೂರಿನಲ್ಲಿ ಹುಟ್ಟಿದೆ. ತಂದೆಯ ನಿಧನದ ನಂತರ ತಾಯಿ ಚಾಮರಾಜನಗರಕ್ಕೆ ಬಂದರು. ಇಲ್ಲಿನ ಮಿಡ್ಲ್‌ ಸ್ಕೂಲ್‌ನಲ್ಲಿ ಮುಖ್ಯ ಶಿಕ್ಷಕಿಯಾಗಿ (ಹೆಡ್‌ ಮೇಡಂ) ಕೆಲಸ ಮಾಡುತ್ತಿದ್ದರು.

ನಾನು ಪೇಟೆ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆ. ಪ್ರೌಢ ಶಿಕ್ಷಣ ಓದುತ್ತಿದ್ದಾಗ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿವಳಿಕೆ ಬಂತು. ಎಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಾನೂ ಯಾಕೆ ಚಳವಳಿಯಲ್ಲಿ ಭಾಗಿಯಾಗಬಾರದು ಎಂಬ ಯೋಚನೆ ಬಂತು. ಚಾಮರಾಜನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ತೊಡಗಿಕೊಳ್ಳಲು ಆರಂಭಿಸಿದೆ. ಮೊದಲ ಹೋರಾಟದಲ್ಲಿಯೇ ಪೊಲೀಸ್‌ ಠಾಣೆಯ ಮೇಲೆ ಹತ್ತಿ ಧ್ವಜವನ್ನು ಕಟ್ಟಿಯೇ ಬಿಟ್ಟೆ! ಅಂದಿನಿಂದ ಪೊಲೀಸರ ಕೆಂಗಣ್ಣಿಗೆ ಗುರಿಯಾದೆ. ಆದರೆ, ನಾನು ಇನ್ನೂ ಬಾಲಕಿಯಾಗಿದ್ದರಿಂದ ಅವರೇನೂ ಮಾಡುತ್ತಿರಲಿಲ್ಲ. ಆದರೆ, ನಾನು ಚಳವಳಿಗಳಲ್ಲಿ ಭಾಗವಹಿಸುವುದು ನಿಲ್ಲಿಸಿರಲಿಲ್ಲ. 

1947ರಲ್ಲಿ ಸ್ವಾತಂತ್ರ್ಯ ಘೋಷಣೆಗೂ ಮುನ್ನ ಮೈಸೂರಿನಲ್ಲಿ ನಡೆಯುತ್ತಿದ್ದ ಚಳವಳಿಯಲ್ಲಿ ಭಾಗವಹಿಸುವುದಕ್ಕಾಗಿ ಸ್ನೇಹಿತರೊಂದಿಗೆ ಕಾಲ್ನಡಿಗೆಯಲ್ಲಿ ಹೊರಟೆ. ನಂಜನಗೂಡು ದಾಟಿದ ಬಳಿಕ ನಮ್ಮ ತಂಡವನ್ನು ಪೊಲೀಸರು ತಡೆದು, ವಶಕ್ಕೆ ಪಡೆದರು. ಮೈಸೂರಿನ ಪೊಲೀಸ್‌ ಠಾಣೆಗೆ ಕರೆದೊಯ್ದರು. ನಾನು ಚಿಕ್ಕವಳಿದ್ದುದರಿಂದ ಮನೆಗೆ ಹೋಗುವಂತೆ ತಿಳಿಸಿದರು. 

ನನ್ನೊಂದಿಗೆ ಇನ್ನಿಬ್ಬರಿದ್ದರು. ಜೊತೆಯಾಗಿ ಮೈಸೂರಿನಲ್ಲಿ ನಡೆದುಕೊಂಡು ಬರುತ್ತಿರುವಾಗ ಚಾಮುಂಡೇಶ್ವರಿ ಉದ್ಯಾನದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಮನೆಗೆ ಬರುವ ಬದಲು ನಾವು ಉದ್ಯಾನಕ್ಕೆ ಹೋಗಿ ಚಳವಳಿಯಲ್ಲಿ ಭಾಗವಹಿಸಿದೆವು. ಆಗ ಮಕ್ಕಳು ಎಂದು ನೋಡದ ಪೊಲೀಸರು ನಮ್ಮನ್ನು ಬಂಧಿಸಿ ಸೆಂಟ್ರಲ್‌ ಜೈಲಿಗೆ ಕಳುಹಿಸಿದರು. 22 ದಿನಗಳ ಕಾಲ ಅಲ್ಲಿದ್ದೆ. ಹಲವು ನಾಯಕರು ಅಲ್ಲಿದ್ದರು. ಮಹಿಳಾ ಹೋರಾಟಗಾರರ ಸಂಖ್ಯೆ ಕಡಿಮೆ ಇತ್ತು. ಸ್ವಾತಂತ್ರ್ಯ ಘೋಷಣೆಯಾಗುವ ಸಂದರ್ಭದಲ್ಲಿ ಜೈಲಿನಲ್ಲಿದ್ದವರೆನ್ನೆಲ್ಲ ಬಿಡುಗಡೆ ಮಾಡಿದರು. 

ಸ್ವಾತಂತ್ರ್ಯ ನಂತರ ಶಿಕ್ಷಣ ಮುಂದುವರಿಸಿದೆ. ನಾನು ಜೈಲಿಗೆ ಹೋಗಿ ಬಂದಿದ್ದೇನೆ ಎಂಬ ಕಾರಣಕ್ಕೆ ಮದುವೆಯಾಗಲು ಯಾರೂ ಮುಂದೆ ಬರಲಿಲ್ಲ. 16ನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಸ್‌.ನಾಗರಾಜು ಅವರನ್ನು ವರಿಸಿದೆ. ನಮ್ಮದು ಅಂತರಜಾತಿ ವಿವಾಹ. ಮಕ್ಕಳೂ ಆಯಿತು. ಆದರೆ, ಶಿಕ್ಷಣ ಮೊಟಕುಗೊಳಿಸಲಿಲ್ಲ. 1954ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿಎಸ್‌ಸಿ ಪದವಿ ಪಡೆದೆ. ನಂತರ ಮೈಸೂರು ವಿವಿಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದೆ. 

ಸಾಮಾಜಿಕ ಶಿಕ್ಷಣ ಅಧಿಕಾರಿಯಾಗಿ ಕೆಲಸವೂ ಸಿಕ್ಕಿತು. ಕೊಳ್ಳೇಗಾಲದಲ್ಲಿ ಬ್ಲಾಕ್‌ ಡೆವೆಲಪ್‌ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದೆ. 1990ರಲ್ಲಿ ಸೇವೆಯಿಂದ ನಿವೃತ್ತಳಾದೆ. ಈಗ ನನಗೆ 90 ವರ್ಷ ವಯಸ್ಸು. 1998ರ ಮಾರ್ಚ್‌ನಲ್ಲಿ ಮಹಿಳಾ ದಿನದ ಅಂಗವಾಗಿ ರಾಷ್ಟ್ರೀಯ ಮಹಿಳಾ ಆಯೋಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಗುರುತಿಸಿ ಸನ್ಮಾನಿಸಿತ್ತು. ನನ್ನನ್ನೂ ದೆಹಲಿಗೆ ಕರೆಯಿಸಿಕೊಂಡು ಗೌರವಿಸಿತ್ತು.   

ವಯಸ್ಸಿನ ಕಾರಣಕ್ಕೆ ಹಲವು ಘಟನೆಗಳು ತಕ್ಷಣಕ್ಕೆ ನೆನಪು ಬರುತ್ತಿಲ್ಲ. ಆದರೆ,  ಕೆಲವು ಘಟನೆಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವುದಕ್ಕೆ ಹೆಮ್ಮೆ ಇದೆ.

ಮಗಳ ಹೋರಾಟಕ್ಕೆ ಅಡ್ಡಬಾರದ ತಾಯಿ

ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಹೊರಬರಲು ಹಿಂಜರಿಯುತ್ತಿದ್ದ ಕಾಲದಲ್ಲಿ ಲಲಿತಾ ಜಿ ತಗತ್‌ ಅವರು ಧೈರ್ಯವಾಗಿ ಹೋರಾಟಕ್ಕೆ ಧುಮುಕ್ಕಿದ್ದು ಕ್ರಾಂತಿಕಾರಿ ಬೆಳವಣಿಗೆ. ಮಗಳ ಉದ್ದೇಶಕ್ಕೆ ತಾಯಿ ವಿರೋಧ ವ್ಯಕ್ತಪಡಿಸದೇ ಇದ್ದುದು ಗಮನಾರ್ಹ ಸಂಗತಿ. ತಂದೆ ತಾಯಿ ಇಬ್ಬರೂ ಶಿಕ್ಷಿತರಾಗಿದ್ದು ಇದಕ್ಕೆ ಕಾರಣವಾಗಿರಬಹುದು. 

90 ವರ್ಷದ ಲಲಿತಾ ಅವರಿಗೆ ಈಗ ಹೋರಾಟದ ನೆನಪುಗಳು ಸರಾಗವಾಗಿ ಬರುತ್ತಿಲ್ಲ. ಅಂದಿನ ಘಟನೆಗಳ ಬಗ್ಗೆ ಪ್ರಶ್ನಿಸಿದರೆ ಮಾತ್ರ ನೆನಪಿಸಿಕೊಂಡು ಹೇಳುತ್ತಾರೆ. ಮನೆಯವರು ಅವರೊಂದಿಗೆ ಮಾತನಾಡಿ, ಹಿಂದಿನ ಸಂಗತಿಗಳನ್ನು ಮೆಲುಕು ಹಾಕಿದರೆ ಉತ್ತರ ಕೊಡುತ್ತಾರೆ. ನಾಯಕರೊಂದಿಗಿನ ಒಡನಾಟದ ಬಗ್ಗೆ ಅವರಿಗೆ ನೆನಪಿಲ್ಲ. ಆದರೆ, ಪೊಲೀಸರೊಂದಿಗೆ ನಡೆಸಿದ್ದ ವಾಗ್ವಾದ, ಠಾಣೆ ಕಟ್ಟಡ ಹತ್ತಿ ಧ್ವಜ ಹಾರಿಸಿದ್ದು, ಚಳವಳಿಗಳಲ್ಲಿ ಭಾಗವಹಿಸಿದ್ದು, ಮೈಸೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದು, ಎಲ್ಲವೂ ಸರಿಯಾಗಿ ನೆನಪಿದೆ. 

ಲಲಿತಾ ಅವರಿಗೆ ನಾಲ್ವರು ಪುತ್ರರು ಇದ್ದರು. ಅವರು ನಿಧನರಾಗಿದ್ದಾರೆ. ಇಬ್ಬರು ಪುತ್ರಿಯರಿದ್ದಾರೆ. 

ನಿರೂಪಣೆ: ಸೂರ್ಯನಾರಾಯಣ ವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು