ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶನ ಆರಾಧನೆಗೆ ಚಾಮರಾಜನಗರ ಸಜ್ಜು

ಮಾರುಕಟ್ಟೆಗೆ ಬಗೆಬಗೆಯ ಗಣಪತಿ ಮೂರ್ತಿ ಲಗ್ಗೆ; ಎಲ್ಲೆಡೆ ಹಬ್ಬದ ಉತ್ಸಾಹ
Published 4 ಸೆಪ್ಟೆಂಬರ್ 2024, 15:31 IST
Last Updated 4 ಸೆಪ್ಟೆಂಬರ್ 2024, 15:31 IST
ಅಕ್ಷರ ಗಾತ್ರ

ಚಾಮರಾಜನಗರ: ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ಚಾಮರಾಜನಗರ ಸಜ್ಜಾಗಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಸಂಘ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಪೆಂಡಾಲ್‌ಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಬಾರಿ ಅದ್ಧೂರಿ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಸಾರ್ವನಿಕರು ಒಲವು ತೋರುತ್ತಿರುವುದು ಕಂಡುಬಂದಿದೆ.

ಮಣ್ಣಿನ ಗಣಪತಿಗಳ ತಯಾರಿಕೆಯಲ್ಲಿ ದಶಕಗಳ ಅನುಭವ ಹೊಂದಿರುವ ವೆಂಕಟೇಶ್‌ ಹಾಗೂ ಮಾದೇವಿ ದಂಪತಿ ಈ ಬಾರಿಯೂ ಗಣಪನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಚಾಮರಾಜನಗರದ ಕೋರ್ಟ್‌ ರಸ್ತೆಯ ಸಬ್‌ಜೈಲ್ ಹಿಂಭಾಗದಲ್ಲಿರುವ ತಮ್ಮ ನಿವಾಸದಲ್ಲಿ ಗಜಮುಖನ ವಿವಿಧ ಭಂಗಿಯ ಮೂರ್ತಿಗಳನ್ನು ತಯಾರಿಸಿಟ್ಟಿದ್ದು ಎಲ್ಲವೂ ಕಣ್ಮನ ಸೆಳೆಯುತ್ತಿವೆ.‌‌

ತಂದೆ ನಾಗಶೆಟ್ಟಿ ತಾಯಿ ಚಿನ್ನಮ್ಮ, ಸೋದರ ಮಾವ ಜಯಣ್ಣ ಅವರಿಂದ ಬಳುವಳಿಯಾಗಿ ಬಂದ ಗಣಪತಿ ಮೂರ್ತಿಗಳ ತಯಾರಿಕೆ ಕಲೆಯನ್ನು ಕಳೆದ 30 ವರ್ಷಗಳಿಂದ ಜತನದಿಂದ ಮುಂದುವರಿಸಿಕೊಂಡು ಬಂದಿರುವ ವೆಂಕಟೇಶ್‌ ಮಾದೇವಿ ದಂಪತಿಯ ಕೈಚಳಕದಲ್ಲಿ ಹಂಸ, ಗಜ, ಸಿಂಹ, ಹುಲಿ, ಸಿಂಹಾಸನ ರೂಢನಾಗಿ ಹಲವು ರೂಪಗಳಲ್ಲಿ ಗಣಪ ಕಂಗೊಳಿಸುತ್ತಿದ್ದಾನೆ

ಕೆಆರ್‌ಎಸ್‌ನಿಂದ ಮಣ್ಣು: ಈ ಬಾರಿ ಗಣಪತಿ ಮೂರ್ತಿಗಳ ತಯಾರಿಕೆಗೆ ವೆಂಕಟೇಶ್ ಕೆಆರ್‌ಎಸ್ ನದಿ ಪಾತ್ರದಿಂದ ಜೇಡಿ ಮಣ್ಣು ತರಿಸಿಕೊಂಡು ಮೂರ್ತಿಗಳನ್ನು ತಯಾರಿಸಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಮೂರ್ತಿಗಳಿಗೆ ಬೇಡಿಕೆ ಸೃಷ್ಟಿಯಾಗಿದ್ದು ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ತಾಲ್ಲೂಕುಗಳಿಂದ ಸಾರ್ಜಜನಿಕ ಪ್ರತಿಷ್ಠಾಪನೆಗೆ ಗಣಪನ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.

‘1 ಅಡಿಯಿಂದ 5 ಅಡಿಯವರೆಗೂ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದ್ದು ಸಾರ್ವಜನಿಕರ ಬೇಡಿಕೆಗಳಿಗೆ ತಕ್ಕಂತೆ ಮೂರ್ತಿಗಳ ಭಂಗಿಗಳಲ್ಲಿ ಬದಲಾವಣೆ ಮಾಡಲಾಗಿದೆ. ₹ 100ರಿಂದ 8,000 ಮೌಲ್ಯದ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದೆ’ ಎನ್ನುತ್ತಾರೆ ವೆಂಕಟೇಶ್‌.

‘ಈ ಬಾರಿ ಗಣೇಶೋತ್ಸವ ಉತ್ಸಾಹ ಹೆಚ್ಚಾಗಿರುವಂತೆ ಕಾಣುತ್ತಿದೆ. ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳ ಖರೀದಿಗೆ ಒಲವು ಕಾಣುತ್ತಿದೆ. ಆದರೂ ಹಬ್ಬದ ಹಿಂದಿನ ದಿನ ಮಾರುಕಟ್ಟೆಗೆ ಪರಿಸರಕ್ಕೆ ಮಾರಕವಾದ ಪಿಒಪಿ ಗಣಪತಿಗಳು ಲಗ್ಗೆ ಇಡುತ್ತವೆ. ಜಿಲ್ಲಾಡಳಿತ ಪಿಒಪಿ ಗಣಪತಿ ಮೂರ್ತಿಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ.

‘ಹಗುರ ಹಾಗೂ ಮೂರ್ತಿಗಳು ಆಕರ್ಷಕವಾಗಿರುತ್ತವೆ ಎಂಬ ಕಾರಣಕ್ಕೆ ಕೆಲವರು ಪಿಒಪಿ ಗಣಪತಿಗಳ ಖರೀದಿಗೆ ಆಸಕ್ತಿ ತೋರುತ್ತಾರೆ. ಆದರೆ, ಪಿಒಪಿ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಮಣ್ಣಿನ ಮೂರ್ತಿಗಳು ಪರಿಸರಕ್ಕೂ ಪೂರಕ ಹಾಗೂ ಪೂಜೆಗೂ ಶ್ರೇಷ್ಠ’ ಎಂದು ಹೇಳಿದರು.

ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತ ಗಣಪತಿ ಮೂರ್ತಿಗಳ ಮಾರಾಟ ಆರಂಭವಾಗಿದೆ. ದೂರದ ಊರುಗಳಿಂದ ಸಂಘ ಸಂಸ್ಥೆಗಳ ಪ್ರಮುಖರು ಗಣಪತಿಗೆ ಮುಂಗಡ ಹಣ ನೀಡಿ ಬುಕ್ಕಿಂಗ್ ಮಾಡುತ್ತಿದ್ದಾರೆ.

ರಾಮನ ಭಂಗಿಯ ಗಣಪ: ಚಾಮರಾಜನಗರದ ರಥದ ಬೀದಿಯಲ್ಲಿ ಪ್ರತಿ ವರ್ಷದಂತೆ ಶ್ರೀ ವಿದ್ಯಾಗಣಪತಿ ಮಂಡಳಿಯಿಂದ ಅದ್ಧೂರಿಯಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಈ ಬಾರಿ ರಾಮನ ಅವತಾರದ ಗಣಪತಿ ಕೂರಿಸಲಾಗುತ್ತಿದೆ. 7 ಅಡಿ ಎತ್ತರದ ನಿಂತಿರುವ ಭಂಗಿಯಲ್ಲಿ ಗಣಪನ ಮೂರ್ತಿ ತಯಾರಾಗುತ್ತಿದ್ದು ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

63ನೇ ವರ್ಷದ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈಗಾಗಲೇ ಗಣಪತಿ ಪ್ರತಿಷ್ಠಾಪನೆಗೆ ಪೆಂಡಾಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 

₹ 100ರಿಂದ 8,000 ಮೌಲ್ಯದ ಮೂರ್ತಿಗಳ ಮಾರಾಟ ಪಿಒಪಿ ಗಣಪತಿ ಮೂರ್ತಿ ಮಾರಾಟಕ್ಕೆ ಕಡಿವಾಣ ಹಾಕಲಿ: ಆಗ್ರಹ

ಏಕಗವಾಕ್ಷಿ ಸಮಿತಿ ಅನುಮತಿ ಕಡ್ಡಾಯ

ಗಣೇಶ ಪ್ರತಿಷ್ಠಾಪನೆ ಹಾಗೂ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಪರವಾನಗಿ ಪಡೆದುಕೊಳ್ಳಲು ಆಯೋಜಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು ಪರವಾನಗಿ ವಿತರಣೆಗೆ ತಾಲ್ಲೂಕು ಮಟ್ಟದಲ್ಲಿ ಏಕಗವಾಕ್ಷಿ ಸಮಿತಿ ರಚಿಸಿದೆ. ‘ಗಣೇಶ ಪ್ರತಿಷ್ಠಾಪನೆ ಸ್ಥಳ ಪೆಂಡಾಲ್ ನಿರ್ಮಾಣ ವಿದ್ಯುತ್ ಸಂಪರ್ಕ ಪಡೆಯಲು ಕಂದಾಯ ಲೋಕೋಪಯೋಗಿ ಇಂಧನ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಏಕಗವಾಕ್ಷಿ ಸಮಿತಿಯಡಿ ಪರವಾನಗಿ ನೀಡಲಿವೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

‘ಪರಿಸರಸ್ನೇಹಿ ಗಣೇಶ ಪ್ರತಿಷ್ಠಾಪಿಸಿ’

‘ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಲಹೆ ನೀಡಿದ್ದಾರೆ. ‘ಭಕ್ತಿ-ಭಾವ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬ ಪರಿಸರಕ್ಕೆ ಪೂರಕವಾಗಿರಲಿ ಪಿಒಪಿ ಹಾಗೂ ರಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿ ಬದಲು ಮಣ್ಣಿನ ಗಣಪನ ಆರಾಧನೆ ಮಾಡೋಣ’ ಎಂದು ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT