ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಟ್ಟಿದ ಚರಂಡಿ, ಖಾಲಿ ಜಾಗದಲ್ಲಿ ಕಸದ ರಾಶಿ

5ನೇ ವಾರ್ಡ್‌ನಲ್ಲಿ ಸುಸ್ಥಿತಿಯಲ್ಲಿ ಬಹುತೇಕ ರಸ್ತೆ, ನೀರಿನ ವ್ಯವಸ್ಥೆ
Last Updated 10 ಮಾರ್ಚ್ 2022, 3:12 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ನಗರಸಭೆಯ 5ನೇ ವಾರ್ಡ್‌ನ ನಿವಾಸಿಗಳನ್ನು ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದೆ. ಕೆಲವು ಕಡೆಗಳಲ್ಲಿ ಕಟ್ಟಿಕೊಂಡಿರುವ ಚರಂಡಿಗಳು ಅನೈರ್ಮ್ಯಲ್ಯ ವಾತಾವರಣ ಸೃಷ್ಟಿಸಿವೆ.

2,500 ಜನ ಸಂಖ್ಯೆಯಲ್ಲಿರುವ ವಾರ್ಡ್‌ನಲ್ಲಿ ಬಡವರು ಹಾಗೂ ಕೆಳ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಕುಟುಂಬಗಳು ಪುಟ್ಟ ಮನೆಗಳಲ್ಲಿ ವಾಸಿಸುತ್ತಿವೆ.

ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಇಲ್ಲ. ಪ್ರತಿ ದಿನ ಇಲ್ಲವೇ ಎರಡು ದಿನಕ್ಕೊಮ್ಮೆ ನಗರಸಭೆಯು ನೀರು ಪೂರೈಸುತ್ತಿದೆ. ಬಹುತೇಕ ಮನೆಗಳಲ್ಲಿ ಪೈಪ್ ಇಲ್ಲವೇ ನಲ್ಲಿ ಸಂಪರ್ಕ ಇದೆ. ಬೀದಿ ದೀಪಗಳ ವ್ಯವಸ್ಥೆಯೂ ತಕ್ಕಮಟ್ಟಿಗೆ ಇದೆ.

'ನಮಗೆ ನೀರಿನ ಸಮಸ್ಯೆ ಇಲ್ಲ. ಮನೆ‌ಯಲ್ಲಿ‌ ನಲ್ಲಿ ಸಂಪರ್ಕ ಇದೆ. ನೀರು ಬಿಟ್ಟಾಗ ಸಂಗ್ರಹಿಸಿಟ್ಟುಕೊಳ್ಳುತ್ತೇವೆ' ಎಂದು ವಾರ್ಡ್ ನಿವಾಸಿ ರಜಿಯಾ ಬೇಗ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಕೆಲವು ಗಲ್ಲಿ ಪ್ರದೇಶಗಳನ್ನು ಬಿಟ್ಟರೆ ಉಳಿದ ಕಡೆ ರಸ್ತೆಗಳು ಚೆನ್ನಾಗಿವೆ. ರಸ್ತೆಗಳು ಕಿರಿದಾಗಿವೆ. ರಸ್ತೆ ಬದಿಯ ಚರಂಡಿಗಳು ತೆರೆದಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಅಲ್ಲಲ್ಲಿ ಎತ್ತರದ ರಸ್ತೆ ಉಬ್ಬುಗಳನ್ನು ಹಾಕಲಾಗಿದೆ. ಕೆಲವು ಕಡೆಗಳಲ್ಲಿ ರಸ್ತೆಗೆ ಈಗ ಡಾಂಬರು ಹಾಕಲಾಗುತ್ತಿದೆ.

ಕಟ್ಟಿಕೊಂಡ ಚರಂಡಿ: ವಾರ್ಡ್‌ನ ಕೆಲವು ಬೀದಿಗಳಲ್ಲಿ ಸ್ವಚ್ಛತೆಯ ಕೊರತೆ‌ ಇದೆ. ಬಹುತೇಕ ಕಡೆಗಳಲ್ಲಿ ತೆರೆದ ಚರಂಡಿಗಳಿವೆ. ಕೆಲವು ಕಡೆ ಚರಂಡಿಯಲ್ಲಿ‌ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಟ್ಟಿಕೊಂಡು ವಾಸನೆ ಬರುತ್ತಿದೆ. ನಗರಸಭೆ ಸಿಬ್ಬಂದಿ ನಿಯಮಿತವಾಗಿ ಚರಂಡಿ ಸ್ವಚ್ಛ ಮಾಡುತ್ತಿಲ್ಲ ಎಂಬುದು ನಿವಾಸಿಗಳ ದೂರು.

’ನಮ್ಮ ಬೀದಿಗೆ ಇತ್ತೀಚೆಗೆ ಹೊರ ರಸ್ತೆಯಾಗಿದೆ. ನೀರು ಬರುತ್ತಿದೆ. ನಮಗೆ ಚರಂಡಿಯದ್ದೇ ಸಮಸ್ಯೆ, ಚರಂಡಿಯಲ್ಲಿ ನೀರು ಸರಿಯಾಗಿ ಹರಿಯುತ್ತಿಲ್ಲ. ಕಟ್ಟಿಕೊಂಡಿರುವುದರಿಂದ ತೊಂದರೆಯಾಗುತ್ತಿದೆ. ನಗರಸಭೆಯ ನೌಕರರು ನಿಯಮಿತವಾಗಿ ಚರಂಡಿಯನ್ನು ಸ್ವಚ್ಛಗೊಳಿಸುತ್ತಿಲ್ಲ. ನಾವು ನಗರಸಭಾ ಸದಸ್ಯರ ಗಮನಕ್ಕೆ ತಂದ ನಂತರ ಅವರು ನೌಕರರನ್ನು ಕರೆಸುತ್ತಾರೆ‘ ಎಂದು ವಾರ್ಡ್‌ ನಿವಾಸಿ ಯಾಸ್ಮಿನ್‌ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಕಸದ ರಾಶಿ: ವಾರ್ಡ್‌ನ ಕೆಲವು ಬೀದಿಗಳು ಸ್ವಚ್ಛವಾಗಿವೆ. ಜನರು ಕೂಡ ತಮ್ಮ ಮನೆ ಮುಂದೆ ಸ್ವಚ್ಛತೆ ಕಾಪಾಡಿದ್ದಾರೆ. ಆದರೆ, ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತೆ ಕಡಿಮೆ ಇದೆ. ಕೆಲವು ಖಾಲಿ ನಿವೇಶನಗಳಲ್ಲಿ ಕಸದ ರಾಶಿಗಳಿವೆ. ಎರಡು ದಿನಗಳಿಗೊಮ್ಮೆ ಪೌರಕಾರ್ಮಿಕರು ಬಂದರೂ ಕೆಲವು ನಿವಾಸಿಗಳು ಖಾಲಿ ನಿವೇಶನಗಳಲ್ಲಿ ಕಸವನ್ನು ಎಸೆಯುತ್ತಿದ್ದಾರೆ. ಇದರಿಂದ ನೈರ್ಮಲ್ಯ ಉಂಟಾಗುತ್ತಿದೆ.

’ನಮ್ಮ ವಾರ್ಡ್‌ನಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಖಾಲಿ ಕಾಗದಲ್ಲಿ ಕಸದ ರಾಶಿಯೇ ಇದೆ. ಉಳಿದಂತೆ ನೀರು, ಬೀದಿ ದೀಪದ ವ್ಯವಸ್ಥೆ ಚೆನ್ನಾಗಿದೆ. ವ್ಯವಸ್ಥಿತವಾಗಿ ಕಸ ವಿಲೇವಾರಿಗೆ ನಗರಸಭೆ ಕ್ರಮ ಕೈಗೊಳ್ಳಬೇಕು‘ ಎಂದು ನಿವಾಸಿ ಅಪ್ಪಣ್ಣ ಅವರು ಒತ್ತಾಯಿಸಿದರು.

ಸಮಸ್ಯೆಗಳಿಗೆ ಸ್ಪಂದನೆ
ಎಸ್‌ಡಿಪಿಐನ ತೌಸೀಯಾ ಬಾನು ಈ ವಾರ್ಡ್‌ನ ಸದಸ್ಯೆ. ಅವರು ಇಲ್ಲವೇ ಅವರ ಪತಿ ಇಸ್ರಾರ್‌ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬುದು ನಿವಾಸಿಗಳ ಮಾತು.

’ಏನಾದರೂ ಸಮಸ್ಯೆ ಆದರೆ ಸದಸ್ಯರಿಗೆ ಕರೆ ಮಾಡುತ್ತೇವೆ. ತಕ್ಷಣವೇ ಬಂದು ಪರಿಶೀಲಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತಾರೆ‘ ಎಂದು ರಜಿಯಾ ಬೇಗ್‌ ಅವರು ತಿಳಿಸಿದರು.

ವಾರ್ಡ್‌ನಲ್ಲಿರುವ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ತೌಸೀಯಾ ಬಾನು ಅವರು, ’ರಸ್ತೆ, ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ನಗರಸಭೆಯಲ್ಲಿ ಪೌರ ನೌಕರರ ಕೊರತೆ ಇರುವುದರಿಂದ ಕಸ ವಿಲೇವಾರಿಗೆ ಸ್ವಲ್ಪ ಸಮಸ್ಯೆಯಾಗಿದೆ. ಇತ್ತೀಚೆಗೆ ಮಹದೇಶ್ವರ ಬೆಟ್ಟದ ಜಾತ್ರೆ ಸಂದರ್ಭದಲ್ಲಿ ಇಲ್ಲಿಂದ ಪೌರಕಾರ್ಮಿಕರನ್ನು ಕಳುಹಿಸಿರುವುದರಿಂದ ಕಸ ಸಂಗ್ರಹಕ್ಕೆ ತೊಂದರೆಯಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT