ಬುಧವಾರ, ಆಗಸ್ಟ್ 17, 2022
23 °C
ಪರಿಹಾರವಾಗದ ಸಮಸ್ಯೆಗಳು, ಅನಿಲ ಸಿಲಿಂಡರ್ ಬಾರದೆ ಮೂರು ತಿಂಗಳು

ಗೊಂಬೆಗಲ್ಲು ಪೋಡು: ಕುಡಿಯುವ ನೀರು ಕೆಂಪು, ರಾತ್ರಿ ಪೂರ ಕತ್ತಲು

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಆನೆಗಳು ಕಿತ್ತು ಹಾಕಿರುವ ಸೋಲಾರ್ ಫಲಕಗಳು. ಕುಡಿಯಲು ಕೆಂಪು ನೀರು. ಅಡುಗೆ ಅನಿಲ ಸಿಲಿಂಡರ್ ಸಿಗದೆ ಸೌದೆ ಒಲೆಯಿಂದ ಬರುತ್ತಿದ್ದ ದಟ್ಟವಾದ ಹೊಗೆ. ಎಷ್ಟೋ ವರ್ಷಗಳಿಂದ ಮುಚ್ಚದೆ ಬಿಟ್ಟಿರುವ ಮನೆಯ ಹಿಂದಿನ ಶೌಚದ ಗುಂಡಿಗಳು...

ಇವು ಹನೂರು ತಾಲ್ಲೂಕು ಗೊಂಬೆಗಲ್ಲು ಹಾಡಿಯ ಸದ್ಯದ ಚಿತ್ರಣ.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಈ ಹಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ತರಾತುರಿಯಲ್ಲಿ ಸಚಿವರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿ ಮಾಧ್ಯಮಗಳ ಮುಂದೆ ತೋರಿಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿದ್ದರು. ಅತ್ತ ಅವರು ವಾಸ್ತವ್ಯ ಮುಗಿಸಿ ಹೋಗಿದ್ದೇ ಇತ್ತ ಗೊಂಬೆಗಲ್ಲು ಹಾಡಿಯ ಅಭಿವೃದ್ಧಿ ಮುಂದಕ್ಕೆ ಹೋಗದೆ ಗೊಂಬೆಯಂತೆಯೇ ನಿಂತುಬಿಟ್ಟಿದೆ. 

ಇಲ್ಲಿನ ಸೋಲಿಗರು ಸರ್ಕಾರ ನೀಡುವ ಪಡಿತರವನ್ನೇ ಊಟಕ್ಕೆ ಅವಲಂಬಿಸಿದ್ದಾರೆ. ಲಾಕ್‌‌ಡೌನ್ ಇಲ್ಲದಿದ್ದಾಗ ಇಲ್ಲಿನ ಜನರು ಹೊರ ಊರುಗಳಿಗೆ ಜಮೀನಿನ ಕೆಲಸಕ್ಕಾಗಿ ಹೊರಗೆ ಹೋಗುತ್ತಾರೆ. ಈ ಹಾಡಿ ಸಮೀಪದಲ್ಲಿಯೇ ಭಾರ್ಗವಿ ನದಿ ಇದೆ. ಕುಡಿಯಲು ಇದೇ ನದಿಯ ನೀರನ್ನೇ ಅವಲಂಬಿಸಬೇಕಾಗಿದೆ ಎಂದು ಇಲ್ಲಿನ ಮಹಿಳೆಯರು ಅಳಲು ತೋಡಿಕೊಂಡರು.

‘ಸಂಜೆ ನಾಲ್ಕು ಗಂಟೆ ಕಳೆಯಿತೆಂದರೆ ನದಿಯ ಕಡೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಸುತ್ತಮುತ್ತ ವನ್ಯ ಜೀವಿಗಳು ಅಡ್ಡಾಡುತ್ತವೆ. ನೀರಿನ ಸಮಸ್ಯೆ ನೀಗಿಸಲು ಕೊಳವೆಬಾವಿ ಕೊರೆದು ಕೈಪಂಪ್ ಅಳವಡಿಸಲಾಗಿದೆ. ಆದರೆ, ಇಲ್ಲಿ ಪೂರೈಕೆ ಆಗುವ ನೀರು ಕೆಂಪಾಗಿದ್ದು, ಕುಡಿಯಲು ಸಾಧ್ಯವಿಲ್ಲ. ಬಿಸಿ ಮಾಡಿದರೆ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮನೆಗಳ ಸಮೀಪ ಶೌಚಾಲಯಕ್ಕೆ ತೆಗೆದ ಗುಂಡಿ ಇದ್ದರೂ ಕಟ್ಟಡ ನಿರ್ಮಿಸಲು ನೆರವು ಕಲ್ಪಿಸಿಲ್ಲ. ಪೋಡಿನ ಸುತ್ತಮುತ್ತ ಆನೆಗಳು ಆಹಾರ ಅರಸಿ ಬರುವಾಗ ವಿದ್ಯುತ್ ಪೂರೈಸುವ ಸೋಲಾರ್ ಫಲಕಗಳು ಮುರಿದಿವೆ. ಇದರಿಂದ ಜನರು ಸಂಜೆ ಆಗುತ್ತಲೇ ಮನೆ ಸುತ್ತ ಬೆಂಕಿ ಹಚ್ಚಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣ ಇದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಗಿರಿಜನ ಉಪ ಯೋಜನೆಯಡಿ ಆರಂಭದಲ್ಲಿ ಅಡುಗೆ ಅನಿಲ ಸಂಪರ್ಕ ಉಚಿತವಾಗಿ ನೀಡಲಾಗುತ್ತದೆ. ನಂತರದ ಅವಧಿಯಲ್ಲಿ ಅನಿಲ ಮುಗಿದರೆ, ಹಣ ಕಟ್ಟಿ ಪಡೆಯಬೇಕು. ಮೂರು ತಿಂಗಳಾದರೂ ಇಲ್ಲಿಗೆ ಗ್ಯಾಸ್ ಪೂರೈಕೆ ಆಗಿಲ್ಲ. ಇದರಿಂದ ಅಡುಗೆಗೆ ಸೌದೆ ಒಲೆಯನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಗುಡಿಸಲುಗಳಲ್ಲಿ ಹೊಗೆ ತುಂಬಿ ಕಣ್ಣುಗಳು ಕೆಂಪಾಗುತ್ತವೆ. ಕೆಮ್ಮು ಅಮರಿಕೊಳ್ಳುತ್ತದೆ’ ಎಂದು ನಿವಾಸಿ ನಾಗಮ್ಮ ಅಳು ತೋಡಿಕೊಂಡರು.

‘ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಆಂಜನೇಯ ಇಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಪ್ರತಿ ಮನೆಗೂ ಶೌಚಾಲಯ ನಿರ್ಮಿಸಲು ಪಂಚಾಯಿತಿ ಅನುದಾನ ಒದಗಿಸಿದ್ದರು. ಕೆಲವು ಮನೆ ನಿರ್ಮಾಣ ಈಗ ಅರ್ಧಕ್ಕೆ ನಿಂತಿದ್ದರೆ, ಕೆಲವು ಮನೆಗಳು ಮಾತ್ರ ಮೇಲೆದ್ದಿವೆ. ಶೌಚಗುಂಡಿ ಮುಚ್ಚಿ ಹೋಗಿ ಹಲವು ವರ್ಷಗಳೇ ಪೂರೈಸಿವೆ. ಪಂಚಾಯಿತಿ ಸಿಬ್ಬಂದಿಯನ್ನು ಕೇಳಿದರೆ ಶೌಚಾಲಯ ನೀವೇ ನಿರ್ಮಿಸಿಕೊಳ್ಳಿ ಎಂದು ಹೇಳುತ್ತಾರೆ. ಈಗಾಗಲೇ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿದ ಕೆಲಸಕ್ಕೂ ಹಣ ನೀಡಿಲ್ಲ’ ಎಂದು ಯಜಮಾನ ಶಿಕಾರಿ ಮಾದೇಗೌಡ ಹೇಳಿದರು.

‘ನಮ್ಮ ಹಾಡಿ ಹನೂರು ವ್ಯಾಪ್ತಿಯಲ್ಲಿ ಇದೆ. ಈಗ ಮಳೆ ಸುರಿಯುತ್ತಿದ್ದು, 20 ಕಿಲೋ ಮೀಟರ್ ದೂರದ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಬೇಕು. ಲಾಕ್‌ಡೌನ್‌ ಇರುವುದರಿಂದ ಕೆಲಸ ಸ್ಥಗಿತಗೊಂಡಿವೆ. ಈ ಬಗ್ಗೆ ಪಂಚಾಯಿತಿಗೆ ಮನವಿ ಮಾಡಿದ್ದೇನೆ’ ಎಂದು ಗೊಂಬೆಗಲ್ಲು ಗ್ರಾಮ ಪಂಚಾಯಿತಿ ಸದಸ್ಯ ಮೀಸೆ ಮಾದ ಹೇಳಿದರು.

‘ಕೊಳವೆ ಬಾವಿ ನೀರಿನ ಪರೀಕ್ಷೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಧರ್ಮೇಶ್‌, ‘ಗೊಂಬೆಗಲ್ಲು ಹಾಡಿಯಲ್ಲಿನ ಕೊಳವೆಬಾವಿಯಲ್ಲಿ ಬರುತ್ತಿರುವ ನೀರನ್ನು ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಕುಡಿಯಲು ಯೋಗ್ಯವಾಗಿದ್ದರೆ ಅದನ್ನೇ ಯಾವ ರೀತಿ ಬಳಸಬೇಕು ಎಂದು ತಿಳಿಸಲಾಗುವುದು. ಒಂದು ವೇಳೆ ಯೋಗ್ಯವಲ್ಲದಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಶೌಚಾಲಯ ಗುಂಡಿಗಳು ಮುಚ್ಚಿರುವ ಬಗ್ಗೆ ಸಂಬಂಧಪಟ್ಟ ಪಿಡಿಒಗೆ ವರದಿ ನೀಡುವಂತೆ ಸೂಚಿಸಲಾಗುವುದು’ ಎಂದರು. 

ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ಅವರು ಮಾತನಾಡಿ, ‘ಅರಣ್ಯದೊಳಗಿರುವ ಗ್ರಾಮಗಳಿಗೆ ತೆರಳಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವ ಸಂಬಂಧ ಇಂದು ಗ್ರಾಮಪಂಚಾಯಿತಿಯಲ್ಲಿ ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಗೊಂಬೆಗಲ್ಲು ಹಾಡಿಗೆ ತೆರಳಿ ಸಮಸ್ಯೆಯನ್ನು ಪರಿಶೀಲಿಸಿ ಅದರ ನಿವಾರಣೆಗಾಗಿ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು