ಸೋಮವಾರ, ಜುಲೈ 26, 2021
26 °C
ಲೊಕ್ಕನಹಳ್ಳಿ, ರಾಮಾಪುರ ಹೋಬಳಿಯಲ್ಲಿ ಸ್ವಲ್ಪ ಕಡಿಮೆ ಮಳೆ, ಕೆರೆ ಕಟ್ಟೆಗಳಿಗೆ ಹರಿದು ಬರುತ್ತಿದೆ ನೀರು

ಹನೂರು: ಉತ್ತಮ ಮಳೆ, ರೈತರದಲ್ಲಿ ಹರ್ಷ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಹನೂರು ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದೆ. ಮುಂಗಾರು ಮಳೆಯೂ ಚೆನ್ನಾಗಿ ಸುರಿಯುವ ಲಕ್ಷಣ ಕಂಡು ಬಂದಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. 

ಪ್ರತಿ ವರ್ಷ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದರೂ ಹನೂರು ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗುತ್ತಿರಲಿಲ್ಲ. ಮಳೆಯನ್ನೇ ಆಶ್ರಯಿಸಿದ ರೈತರು ಪ್ರತಿ ವರ್ಷ ನೀರಿಗಾಗಿ ಆಗಸವನ್ನೇ ದಿಟ್ಟಿಸುವ ಸ್ಥಿತಿ ಇತ್ತು. ಆದರೆ, ಈ ಬಾರಿ ಅಂತಹ ಸ್ಥಿತಿ ನಿರ್ಮಾಣವಾಗಿಲ್ಲ. 

ತಾಲ್ಲೂಕಿನಲ್ಲಿ ಹನೂರು, ಲೊಕ್ಕನಹಳ್ಳಿ ಹಾಗೂ ರಾಮಾಪುರ ಹೋಬಳಿ ಬರುತ್ತದೆ. ಹನೂರು ಹೋಬಳಿ ವ್ಯಾಪ್ತಿಯಲ್ಲಿ ಇದುವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದ ಎರಡು ಹೋಬಳಿಗಳಲ್ಲಿ ಸ್ವಲ್ಪ ಕಡಿಮೆ ಮಳೆಯಾಗಿದೆ. ಹಾಗಿದ್ದರೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿಲ್ಲ. 

ಜನವರಿ 1ರಿಂದ ಜೂನ್‌ 2ರವರೆಗೆ ಹನೂರು ಹೋಬಳಿಯಲ್ಲಿ 29.7 ಸೆಂ.ಮೀ ಮಳೆ ಬಿದ್ದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 23.7 ಸೆಂ.ಮೀ ಮಳೆಯಾಗುತ್ತದೆ. ಶೇಕಡವಾರು ಲೆಕ್ಕಾಚಾರದಲ್ಲಿ ಈ ಬಾರಿ 25ರಷ್ಟು ಹೆಚ್ಚು ಮಳೆಯಾಗಿದೆ. ಲೊಕ್ಕನಹಳ್ಳಿ ಹೋಬಳಿಯಲ್ಲಿ ವಾರ್ಷಿಕವಾಗಿ 24 ಸೆಂ.ಮೀ ಮಳೆಯಾದರೆ, ಈ ವರ್ಷ 23.1 ಸೆಂ.ಮೀ ಮಳೆಯಾಗಿದೆ. ಶೇ 4ರಷ್ಟು ಕಡಿಮೆಯಾಗಿದೆ. 

ರಾಮಾಪುರ ಹೋಬಳಿಯಲ್ಲಿ ಶೇ 21ರಷ್ಟು ಕಡಿಮೆ ಮಳೆಯಾಗಿದೆ. ಈ ವರ್ಷ ಇದುವರೆಗೆ 18 ಸೆಂ.ಮೀ ಮಳೆಯಾಗಿದೆ. ವಾಡಿಕೆಯಲ್ಲಿ 22.7 ಸೆಂ.ಮೀನಷ್ಟು ಮಳೆ ಸುರಿಯುತ್ತದೆ. 

ಹಳ್ಳಕೊಳ್ಳಗಳಿಗೆ ನೀರು: ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳಿಗೆ ನೀರು ಹರಿದು ಬರುತ್ತಿದ್ದು, ಜಲಾಶಯಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.

ಪಿ.ಜಿ.ಪಾಳ್ಯ, ಲೊಕ್ಕನಹಳ್ಳಿ, ಒಡೆಯರಪಾಳ್ಯ ಮುಂತಾದ ಕಡೆ ಉತ್ತಮ ಮಳೆಯಾದ ಪರಿಣಾಮ ಉಡುತೊರೆಹಳ್ಳ ತುಂಬಿ ಹರಿದಿದೆ. ಹನೂರು ಪಟ್ಟಣದ ಜೋಡಿ ಕೆರೆಗಳಿ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿದೆ. ಉಡುತೊರೆ ಹಾಗೂ ರಾಮನನಗುಡ್ಡೆ ಜಲಾಶಯಗಳಿಗೆ ನೀರು ಹರಿದು ಬಂದಿದೆ. 

ಈ ಬಾರಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ದಿನ್ನಳ್ಳಿ, ಹೂಗ್ಯಂ ಹಾಗೂ ಮಾರ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದರಿಂದ ನೀರಿನ ಸಮಸ್ಯೆ ಕೊಂಚ ನಿವಾರಣೆಯಾಗಲಿದೆ.

ಕೆರೆಕಟ್ಟೆಗಳಲ್ಲಿ ನೀರು ಶೇಖರಣೆಯಾಗುತ್ತಿರುವುದರಿಂದ ಹಾಗೂ ಅಗತ್ಯವಿದ್ದ ಸಮಯದಲ್ಲೇ ಮಳೆ ಬಂದು ಬೆಳೆಗೆ ನೀರು ದೊರಕಿರುವುದರಿಂದ ರೈತರು ಸಂತಸಗೊಂಡಿದ್ದಾರೆ.  

‘4 ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದೇನೆ. ಅಂತರ್ಜಲ ಮಟ್ಟ ಕುಸಿತದಿಂದಾಗಿ ಈ ಬಾರಿ ಫಸಲು ಸಿಗುವುದಿಲ್ಲವೇನೋ ಎಂಬ ಆತಂಕವಿತ್ತು. 15 ದಿನಗಳ ಹಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಅಂತರ್ಜಲ ಹೆಚ್ಚಿದೆ. ಈಗ ಮಳೆಯೂ ಬರುತ್ತಿದೆ. ಈ ಬಾರಿ ಉತ್ತಮ ಇಳುವರಿ ಬರಬಹುದು’ ಎಂದು ಕಣ್ಣೂರು ಗ್ರಾಮದ ರೈತ ಜಗದೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ರಾಗಿ, ಜೋಳ ಬಿತ್ತನೆಗೆ ಸಿದ್ಧತೆ

‘ಪೂರ್ವ ಮುಂಗಾರಿನಲ್ಲಿ ಹನೂರು ಹಾಗೂ ರಾಮಾಪುರ ಹೋಬಳಿಗಳಲ್ಲಿ ಸಜ್ಜೆ ಮತ್ತು ಎಳ್ಳನ್ನು ಬಿತ್ತನೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ ಮಳೆಯಾಗಿ ನಂತರ ನಿಂತು ಹೋಯಿತು. ಇದರಿಂದ ಮೊಳಕೆಯೊಡೆದಿದ್ದ ಪೈರು ಬಾಡಿ ಹೋಗಿತ್ತು. ಆದರೆ, ಈಚೆಗೆ ಬಿದ್ದ ಮಳೆಗೆ ಮತ್ತೆ ಪೈರು ಚೇತರಿಸಿಕೊಂಡಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ರೈತರಲ್ಲೂ ಭರವಸೆ ಮೂಡಿದೆ’ ಎಂದು  ಕೃಷಿ ಅಧಿಕಾರಿ ರಘುವೀರ್  ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು ಹಾಗೂ ರಾಮಾಪುರ ಹೋಬಳಿಗಳಲ್ಲಿ 820 ಹೆಕ್ಟೇರ್ ಸಜ್ಜೆ, 900 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳು ಬಿತ್ತನೆ ಮಾಡಲಾಗಿದೆ.

‘ಇದುವರೆಗೆ ಎರಡು ಹೋಬಳಿಗಳಲ್ಲಿ 300 ಕ್ವಿಂಟಲ್‌ ಕಡಲೆಕಾಯಿ ಬಿತ್ತನೆ ಬೀಜ ಮಾರಾಟ ಮಾಡಲಾಗಿದೆ. ಜೂನ್ ಕೊನೆ ಹಾಗೂ ಜುಲೈ ಆರಂಭದಿಂದ ರಾಗಿ, ಮತ್ತು ಜೋಳ ವಿತರಿಸಲಾಗುವುದು. ಪೂರ್ವ ನಿಯೋಜಿತವಾಗಿ ಮುಂದಿನ ವಾರದಲ್ಲಿ ಬಿತ್ತನೆ ಬೀಜ ದಾಸ್ತಾನು ಆಗಲಿದೆ’ ಎಂದು ರಘುವೀರ್‌ ಅವರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.