ಚಾಮರಾಜನಗರ: ಫೆಬ್ರುವರಿ 15ರಂದು ಆರಂಭಗೊಂಡ ಜಿಲ್ಲೆಯ ಮೊಟ್ಟ ಮೊದಲ ಪಾಸ್‌ಪಾರ್ಟ್ ಸೇವಾ ಕೇಂದ್ರಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಎರಡೂವರೆ ತಿಂಗಳ ಅವಧಿಯಲ್ಲಿ (ಏಪ್ರಿಲ್ 26ರ ವರೆಗೆ) 1,641 ಮಂದಿಯ ಪಾಸ್‌ಪೋರ್ಟ್ ಅರ್ಜಿಗಳನ್ನು ಸೇವಾ ಕೇಂದ್ರ ವಿಲೇವಾರಿ ಮಾಡಿದೆ.
ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಕೇಂದ್ರ ಆಗಬೇಕು ಎಂಬುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸಂಸದ ಆರ್.ಧ್ರುವನಾರಾಯಣ ಅವರ ಪ್ರಯತ್ನದ ಫಲವಾಗಿ ಕೊನೆಗೂ ಸೇವಾಕೇಂದ್ರ ಮಂಜೂರು ಆಗಿತ್ತು. ಅಂಚೆ ಇಲಾಖೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿರುವ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲು ವಿದೇಶಾಂಗ ಇಲಾಖೆ ಒಪ್ಪಿತ್ತು.
ಚಾಮರಾಜನಗರದಲ್ಲಿರುವ ಮುಖ್ಯ ಅಂಚೆ ಕಚೇರಿಯ ಆವರಣದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿ, ಫೆಬ್ರುವರಿ 15ರಂದು ಅಧಿಕೃತವಾಗಿಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು.
ಉತ್ತಮ ಸ್ಪಂದನೆ: ಇದುವರೆಗೂ ಜಿಲ್ಲೆಯ ಜನ ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಮೈಸೂರು ಇಲ್ಲವೇ ಬೆಂಗಳೂರಿಗೆ ಹೋಗಬೇಕಿತ್ತು. ಅದಕ್ಕಾಗಿ ಸಾಕಷ್ಟು ದಿನಗಳು ಕಾಯಬೇಕಿತ್ತು. ಜಿಲ್ಲೆಯಲ್ಲೇ ಕೇಂದ್ರ ಆರಂಭವಾಗಿರುವುದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ.ಆರಂಭವಾದಾಗಿನಿಂದ ಇಲ್ಲಿವರೆಗಿನ ಅಂಕಿ ಅಂಶಗಳೇ ಅದನ್ನು ಹೇಳುತ್ತವೆ.
ಪೆಬ್ರುವರಿ 15ರಿಂದ 28ರ ವರೆಗಿನ 14 ದಿನಗಳ ಅವಧಿಯಲ್ಲಿ 358 ಜನರು ಸಲ್ಲಿಸಿರುವ ಅರ್ಜಿಗಳನ್ನು ಕೇಂದ್ರ ವಿಲೇವಾರಿ ಮಾಡಿದೆ. ಮಾರ್ಚ್ ತಿಂಗಳಲ್ಲಿ 716 ಅರ್ಜಿಗಳು ಮತ್ತು ಏಪ್ರಿಲ್‌ನಲ್ಲಿ 26ರ ವರೆಗೆ 567 ಅರ್ಜಿಗಳನ್ನು ಸೇವಾಕೇಂದ್ರವು ಇತ್ಯರ್ಥಪಡಿಸಿ ಬೆಂಗಳೂರಿಗೆ ರವಾನಿಸಿದೆ.
ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಪ್ರತಿ ದಿನ 40 ಟೋಕನ್‌ಗಳನ್ನು ಕೊಡುತ್ತೇವೆ. ಬಹುತೇಕ ಎಲ್ಲರ ಅರ್ಜಿಗಳು ಸ್ವೀಕಾರ ಆಗುತ್ತವೆ. ದಾಖಲೆಗಳು ಸರಿ ಇಲ್ಲದ ಸಂದರ್ಭದಲ್ಲಿ ಎರಡು– ಮೂರು ಅರ್ಜಿಗಳು ತಿರಸ್ಕೃತ ಆಗಬಹುದು’ ಎಂದು ಪೋಸ್ಟ್ ಮಾಸ್ಟರ್ ಟಿ.ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಾಸ್‌ಪೋರ್ಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸೇವಾಕೇಂದ್ರಕ್ಕೆ ಭೇಟಿ ನೀಡಬೇಕಾದ ಸಮಯವನ್ನು ಮೊದಲೇ ಸೂಚಿಸಲಾಗುತ್ತದೆ. ಅದೇ ಸಮಯಕ್ಕೆ ಅರ್ಜಿದಾರರು ಸೇವಾ ಕೇಂದ್ರಕ್ಕೆ ಬಂದರೆ ಸಾಕು. ಪ್ರತಿ ದಿನ 35ರಿಂದ 40 ಜನರಿಗೆ ಅವಕಾಶ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.
‘ಜನರು ನೀಡಿರುವ ಅರ್ಜಿಗಳನ್ನು, ದಾಖಲೆಗಳನ್ನು ಪರಿಶೀಲಿಸಿ ಅವರ ಫೋಟೊ, ಬೆರಳಚ್ಚು ಎಲ್ಲ ತೆಗೆದು ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೆ ರವಾನಿಸುತ್ತೇವೆ. ನಂತರದ ಪ್ರಕ್ರಿಯೆಯನ್ನು ಅವರು ನೋಡಿಕೊಳ್ಳುತ್ತಾರೆ’ ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅರ್ಜಿಯನ್ನು ಸ್ವೀಕರಿಸಿ ಬೆಂಗಳೂರಿಗೆ ರವಾನಿಸುವುದರಿಂದ ಎಲ್ಲರಿಗೂ ಪಾಸ್‌ಪೋರ್ಟ್ ಬರಬಹುದು ಎಂದು ಅವರು ಹೇಳಿದರು.
ಅರ್ಜಿ ಸಲ್ಲಿಕೆ ಹೇಗೆ?
ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ನಲ್ಲಿ (portal2.passportindia.gov.in) ನೋಂದಣಿ ಮಾಡಿಕೊಂಡು, ಆನ್‌ಲೈನ್ ಅರ್ಜಿಯನ್ನು ತುಂಬಿ ಶುಲ್ಕ ಸಮೇತ ಸಲ್ಲಿಸಬೇಕು.ಆ ಬಳಿಕ ಆ ವೆಬ್‌ಸೈಟ್ ಸೇವಾ ಕೇಂದ್ರಕ್ಕೆ ದಾಖಲೆಗಳೊಂದಿಗೆ ಭೇಟಿ ನೀಡಬೇಕಾದ ದಿನ ಹಾಗೂ ಸಮಯವನ್ನು ಸೂಚಿಸುತ್ತದೆ (ಅಪಾಂಯಿಟ್‌ಮೆಂಟ್). ನಿಗದಿತ ದಿನದ ನೀಡಲಾದ ಸಮಯಕ್ಕೆ ಅರ್ಜಿದಾರರು ಸೂಚಿಸಲಾದ ಅಗತ್ಯ ದಾಖಲೆಗಳೊಂದಿಗೆ ಸೇವಾಕೇಂದ್ರಕ್ಕೆ ಭೇಟಿ ನೀಡಬೇಕು.
ಈಗ ಪಾಸ್‌ಪೋರ್ಟ್ ನೀಡುವ ಪ್ರಕ್ರಿಯೆ ತುಂಬಾ ಸರಳವಾಗಿದ್ದು,10 ದಿನಗಳ ಒಳಗಾಗಿ ಸಿಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.