ಶುಕ್ರವಾರ, ಸೆಪ್ಟೆಂಬರ್ 25, 2020
28 °C
ಪದವಿಪೂರ್ವ ಕಾಲೇಜುಗಳಿಗೆ ಇನ್ನೂ ನೇಮಕಗೊಳ್ಳದ ಅತಿಥಿ ಉಪನ್ಯಾಸಕರು

ಬೋಧಕರಿಲ್ಲ, ವಿದ್ಯಾರ್ಥಿಗಳಿಗೆ ಪಾಠವೂ ಇಲ್ಲ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಆರಂಭಗೊಂಡು ಮೂರು ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕವಾಗದೆ ಇರುವುದರಿಂದ ಕಾಲೇಜುಗಳಲ್ಲಿ ಪಾಠ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. 

ಜಿಲ್ಲೆಯಲ್ಲಿ ಒಟ್ಟು 64 ಪದವಿಪೂರ್ವ ಕಾಲೇಜುಗಳಿದ್ದು, ಈ ಪೈಕಿ 33 ಸರ್ಕಾರಿ ಕಾಲೇಜುಗಳು. ಜಿಲ್ಲೆಯಾದ್ಯಂತ ವಿವಿಧ ವಿಷಯಗಳ 56 ಉಪನ್ಯಾಸಕರ ಹುದ್ದೆ ಖಾಲಿ ಇವೆ. ಇವುಗಳ ಭರ್ತಿಗೆ ಇಲಾಖೆ ಕ್ರಮ ಕೈಗೊಂಡಿಲ್ಲ.

ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಬೋಧನೆಗೆ ತೊಂದರೆಯಾಗದಂತೆ ಇದುವರೆಗೂ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಈ ವರ್ಷ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿಗೆ ಹಸಿರು ನಿಶಾನೆ ತೋರಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಕಳೆದ ವರ್ಷ ಜುಲೈ ಎರಡನೇ ವಾರದ ಹೊತ್ತಿಗೆ ವಿವಿಧ ವಿಷಯಗಳಿಗೆ 37 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ನಡೆಯದ ಪಾಠ: ಬೋಧಕರ ಕೊರತೆಯಿಂದಾಗಿ ಬಹುತೇಕ ಪಿಯು ಕಾಲೇಜುಗಳಲ್ಲಿ ಎಲ್ಲ ವಿಷಯಗಳ ಪಾಠ ಸರಿಯಾಗಿ ನಡೆಯುತ್ತಿಲ್ಲ. ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕರ ಕೊರತೆ ಹೆಚ್ಚಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಬೋಧಕರ ಕೊ‌ರತೆ ಎದುರಿಸುತ್ತಿರುವ ಕಾಲೇಜುಗಳಿಗೆ ಬೇರೆ ಕಾಲೇಜುಗಳಿಂದ ಉಪನ್ಯಾಸಕರನ್ನು ನಿಯೋಜಿಸಿದ್ದಾರೆ. ಉಪನ್ಯಾಸಕರು ಎರಡೂ ಕಡೆ ಬೋಧನೆ ಮಾಡಬೇಕಾಗಿರುವುದರಿಂದ ಅವರ ಮೇಲೆಯೂ ಹೆಚ್ಚುವರಿ ಒತ್ತಡ ಬೀಳುತ್ತಿದೆ. ಎರಡೂ ಕಡೆಗಳಲ್ಲಿ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಅಳಲು.

‘ಉಪನ್ಯಾಸಕರ ಕೊರತೆ ಎದುರಿಸುತ್ತಿರುವ ಕಾಲೇಜುಗಳಿಗೆ ಬೇರೆ ಕಾಲೇಜುಗಳಿಂದ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಅವರು ಎರಡೂ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 56 ಉಪನ್ಯಾಸಕರ ಹುದ್ದೆ ಖಾಲಿ ಇವೆ. ಅತಿಥಿ ಉಪನ್ಯಾಸಕರ ನೇಮಕವಾದರೆ, ಸಮಸ್ಯೆ ಕೊಂಚ ಬಗೆಹರಿಯಲಿದೆ’ ಎಂದು ಪದವಿಪೂರ್ವ ಇಲಾಖೆ ಉಪನಿರ್ದೇಶಕಿ ವಿ.ಆರ್‌.ಶ್ಯಾಮಲ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾಲೇಜುಗಳು ಆರಂಭವಾಗಿ ಎರಡೂವರೆ ತಿಂಗಳು ಕಳೆಯಿತು. ಇದೇ ತಿಂಗಳ 17ರಂದು ಮೊದಲ ಆಂತರಿಕ ಪರೀಕ್ಷೆ ನಡೆಯಲಿದ್ದು, ಉಪನ್ಯಾಸಕರ ಕೊರತೆಯಿಂದಾಗಿ ಬಹುತೇಕ ಕಾಲೇಜುಗಳಲ್ಲಿ ಪಾಠಗಳು ಪೂರ್ಣಗೊಂಡಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಏನು ಬರೆಯುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಬೋಧಕರ ಕೊರತೆಯಿಂದ ಅವರು ಪಡೆಯುತ್ತಿರುವ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಸರ್ಕಾರಿ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಮಾಣಿಕ್ಯಂ ‘ಪ್ರಜಾವಾಣಿ’ಗೆ ವಿವರಿಸಿದರು. 

‘ಬೋಧಕರ ಸಮಸ್ಯೆಯನ್ನು ಬಗೆಹರಿಸಲು ಉಪನಿರ್ದೇಶಕರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಬೇರೆ ಕಾಲೇಜುಗಳ ಉಪನ್ಯಾಸಕರನ್ನು ನಿಯೋಜನೆ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಿಕ್ಷಣ ಇಲಾಖೆ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪಿ.ನರೇಂದ್ರನಾಥ್‌ ತಿಳಿಸಿದರು. 

‘ಹಿಂದೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ಇತ್ತು. ಅದೀಗ ಉಪನಿರ್ದೇಶಕರ ಹೆಗಲೇರಿದೆ. ಸರ್ಕಾರ ಇದುವರೆಗೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮತಿ ನೀಡಿಲ್ಲ. ಫಲಿತಾಂಶ ಬಂದ ಸಂದರ್ಭದಲ್ಲಿ ಜಿಲ್ಲೆ ಪಡೆದಿರುವ ಸ್ಥಾನದ ಬಗ್ಗೆ ಚರ್ಚೆ ಆಗುತ್ತದೆ. ಆದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡಲು ಉಪನ್ಯಾಸಕರೇ ಇಲ್ಲದಿದ್ದರೆ ಫಲಿತಾಂಶ ಬರುವುದು ಹೇಗೆ? ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮ ವಹಿಸಬೇಕು’ ಎಂದು ಅವರು ಆಗ್ರಹಿಸಿದರು.

9 ಪ್ರಾಂಶುಪಾಲರ ಹುದ್ದೆ ಖಾಲಿ

ಜಿಲ್ಲೆಯ 9 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ ಇವೆ.

‘ಹೊಸ ಪ್ರಾಂಶುಪಾಲರ ನೇಮಕ ಆಗಿಲ್ಲ. ಇರುವ ಉಪನ್ಯಾಸಕರಿಗೆ ಬಡ್ತಿಯೂ ನೀಡುತ್ತಿಲ್ಲ. ಉಪನ್ಯಾಸಕರಿಗೆ ಪ್ರಭಾರ ಜವಾಬ್ದಾರಿ ನೀಡಲಾಗುತ್ತಿದೆ. ಇದರಿಂದ ಪಾಠಕ್ಕೆ ತೊಂದರೆಯಾಗುತ್ತಿದೆ. ಉಪನ್ಯಾಸಕರ ಮೇಲೂ ಒತ್ತಡ ಬೀಳುತ್ತದೆ’ ಎಂದು ಮಾಣಿಕ್ಯಂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.