ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಪೂಜೆ ಸಂಭ್ರಮ, ಕಳೆಗುಂದಿದ ಮಾರುಕಟ್ಟೆ

ಗಣೇಶ ಚತುರ್ಥಿಗೆ ಸಕಲ ಸಿದ್ಧತೆ: ಗಣಪ ಮೂರ್ತಿಗಳನ್ನು ಖರೀದಿಸಿದ ಭಕ್ತರು
Last Updated 9 ಸೆಪ್ಟೆಂಬರ್ 2021, 16:33 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಗೌರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಿಸಲಾಯಿತು.

ಮಹಿಳೆಯರು ಮನೆಗಳನ್ನು ಬಾಳೆ ಕಂದು, ತಳಿರು ತೋರಣ, ರಂಗೋಲಿಯಿಂದ ಶೃಂಗರಿಸಿದ್ದರು. ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ಮನೆಗೆ ಬಂದ ಸುಮಂಗಲಿಯರಿಗೆ ಬಾಗಿನ ನೀಡಿದರು. ಕೆಲವು ದೇವಾಲಯಗಳಲ್ಲೂ ಸಾರ್ವಜನಿಕವಾಗಿ ಗೌರಿ ಪೂಜೆ ನಡೆಯಿತು.

ಹಬ್ಬದ ಅಂಗವಾಗಿ ಹೋಳಿಗೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದರು. ಎಲ್ಲವನ್ನೂ ಗೌರಿಗೆ ನೈವೇದ್ಯ ಮಾಡಿ, ಬಂಧು ಬಳಗ, ಸ್ನೇಹಿತರನ್ನು ಆಹ್ವಾನಿಸಿ ಹಬ್ಬದ ಊಟ ಬಡಿಸಿದರು.

ಶುಕ್ರವಾರ ಗಣೇಶನ ಹಬ್ಬ ಇರುವುದರಿಂದ ಜನರು ಹಬ್ಬದ ಆಚರಣೆಗೆ ಗುರುವಾರ ಸಿದ್ಧತೆ ನಡೆಸಿದರು. ಗಣೇಶ ಮೂರ್ತಿ, ಹೂವು ಹಣ್ಣು ಹಾಗೂ ಇತರ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದರು.

ಆದರೆ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಕಾಣಲಿಲ್ಲ. ಹೂವುಗಳ ಅಂಗಡಿಗಳ ಮುಂದೆ ಒಂದಷ್ಟು ಜನರು ಖರೀದಿಯಲ್ಲಿ ತೊಡಗಿದ್ದುದು ಕಂಡು ಬಂತು.

ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿ ಅಂತಹ ಬೇಡಿಕೆ ಸೃಷ್ಟಿಯಾಗಲಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಹೂವುಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದರೂ ವಿಪರೀತ ಎಂಬಂತೆ ಇರಲಿಲ್ಲ. ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಗುರುವಾರ ಕನಕಾಂಬರ ಹೂವಿಗೆ ಕೆಜಿಗೆ ₹ 800 ಇತ್ತು. ಕಾಕಡಕ್ಕೆ ₹ 280ರಿಂದ ₹ 300, ಸುಗಂಧರಾಜ ಹೂವಿಗೆ ₹ 200, ಮರ್ಲೆಗೆ ₹ 500ರಿಂದ ₹ 600, ಚೆಂಡು ಹೂವಿಗೆ ₹ 2ರಿಂದ ₹ 50ರವರೆಗೆ ಬೆಲೆ ಇತ್ತು.

‘ಈ ಬಾರಿ ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ. ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹಬ್ಬದ ಸಮಯದಲ್ಲಿ ಇರುವಂತಹ ಬೇಡಿಕೆ ಇರಲಿಲ್ಲ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT