ಸೋಮವಾರ, ಮೇ 23, 2022
21 °C
ಗ್ರಾ.ಪಂ. ಚುನಾವಣೆ: 19 ದಿನಗಳಲ್ಲಿ 62 ಕಡೆ ದಾಳಿ, 65 ಪ್ರಕರಣ ದಾಖಲು, 200 ಲೀ ಮದ್ಯ ಜಪ್ತಿ

ಚಾಮರಾಜನಗರ: ಅಬಕಾರಿ ಇಲಾಖೆ ಹದ್ದಿನ ಕಣ್ಣಿನ ನಡುವೆಯೂ ಮದ್ಯದ ಭರಾಟೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆ ಅಖಾಡದಲ್ಲಿ ಮದ್ಯದ ಭರಾಟೆ ಜೋರಾಗಿದೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ, ಸಾಗಾಟದ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದರೂ, ಅದರ ಕಣ್ತಪ್ಪಿಸುವ ಕೆಲಸ ಜಿಲ್ಲೆಯಲ್ಲಿ ನಡೆಯುತ್ತಿದೆ. 

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನವಾದ ನವೆಂಬರ್‌ 30ರಿಂದ ಡಿ.16ರವರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ 62 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. 65 ಪ್ರಕರಣಗಳನ್ನು ದಾಖಲಿಸಿಕೊಂಡು 45 ಮಂದಿಯನ್ನು ಬಂಧಿಸಿದ್ದಾರೆ. ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, 107 ಲೀಟರ್‌ ದೇಶಿ ಮದ್ಯ, 85 ಲೀಟರ್‌ ಶೇಂದಿ ಹಾಗೂ 7.8 ಲೀಟರ್‌ಗಳಷ್ಟು ಬಿಯರ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 

ಚುನಾವಣಾ ಉದ್ದೇಶಕ್ಕಾಗಿಯೇ ಅಬಕಾರಿ ಇಲಾಖೆ ಐದು ಫ್ಲೈಯಿಂಗ್‌ ಸ್ಕ್ಯಾಡ್‌ಗಳನ್ನು ರಚಿಸಿದೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ–ಹನೂರು ವಿಭಾಗಗಳಲ್ಲಿ ಮೂರು ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಎರಡು ತಂಡಗಳು ಸಕ್ರಿಯವಾಗಿವೆ. ಅಕ್ರಮ ಮದ್ಯ ಸರಬರಾಜು, ಮಾರಾಟದ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವುದಕ್ಕಾಗಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ (08226–224776) ತೆರೆದಿದೆ. 

ಚಾಮರಾಜನಗರದಲ್ಲಿ ಹೆಚ್ಚು: ಅಕ್ರಮ ಮದ್ಯ ಸಂಗ್ರಹ, ಮಾರಾಟ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳು ಚಾಮರಾಜನಗರದಲ್ಲೇ ಹೆಚ್ಚು  ವರದಿಯಾಗಿವೆ. ಗಂಭೀರ (ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ) ನಾಲ್ಕು ಪ್ರಕರಣಗಳು ಅಬಕಾರಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಸಾಮಾನ್ಯ ಅಂದರೆ, ಪರವಾನಗಿ ನಿಯಯ ಉಲ್ಲಂಘನೆಯ ಮೂರು ಪ್ರಕರಣಗಳು ತಾಲ್ಲೂಕಿನಲ್ಲಿ ದಾಖಲಾಗಿವೆ. ಪರವಾನಗಿ ಹೊಂದಿಲ್ಲದ ಪ್ರದೇಶದಲ್ಲಿ ಮದ್ಯ ಸೇವನೆ, ಮಾರಾಟಕ್ಕೆ ಸಂಬಂಧಿಸಿದಂತೆ (15–‌ಎ) ತಾಲ್ಲೂಕಿನಲ್ಲಿ 22 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 52.290 ಲೀಟರ್ ಮದ್ಯ‌ ಹಾಗೂ 7.800 ಲೀಟರ್‌ ಬಿಯರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 85 ಲೀಟರ್‌ ಶೇಂದಿ, 3.57 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ. ಹನೂರಿನಲ್ಲಿ 28.170 ಲೀಟರ್‌, ಗುಂಡ್ಲುಪೇಟೆಯಲ್ಲಿ 13.77 ಲೀಟರ್‌ ಹಾಗೂ ಯಳಂದೂರಿನಲ್ಲಿ 9.27 ಲೀಟರ್‌ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.  

ಮದ್ಯ ಮಾರಾಟದ ಮೇಲೆ ನಿಗಾ

‘ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಾಗಿರುತ್ತದೆ. ಹಾಗಾಗಿ ಮದ್ಯದ ಮಾರಾಟದ ಪ್ರಮಾಣವೂ ಸ್ವಲ್ಪ ಮಟ್ಟಿಗೆ ಜಾಸ್ತಿಯಾಗುತ್ತದೆ. ನಾವು ಮದ್ಯ ಮಾರಾಟ ಪ್ರಮಾಣದ ಮೇಲೆ ನಿಗಾ ಇಡುತ್ತಿದ್ದೇವೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಕೆ.ಎಸ್‌.ಮುರಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅನ್‌ಲಾಕ್‌ ಆದ ನಂತರ ಪ್ರತಿ ತಿಂಗಳು ಜಿಲ್ಲೆಯಲ್ಲಿ ಮದ್ಯ ಮಾರಾಟ ಏರುಮುಖವಾಗಿದೆ. ಪ್ರತಿ ತಿಂಗಳು ಗರಿಷ್ಠ ಶೇ 10ರಷ್ಟು ಹೆಚ್ಚಳವಾಗುತ್ತಿದೆ. ಕಳೆದ ವರ್ಷದ ಡಿಸೆಂಬರ್‌ ತಿಂಗಳ ಮಾರಾಟಕ್ಕೂ ಈ ಬಾರಿಯ ಮಾರಾಟಕ್ಕೂ ಹೋಲಿಕೆ ಮಾಡುತ್ತೇವೆ. ಇದುವರೆಗೆ ಜಿಲ್ಲೆಯಲ್ಲೂ ಎಲ್ಲೂ ಆ ರೀತಿಯ ಮಾರಾಟ ಗಮನಕ್ಕೆ ಬಂದಿಲ್ಲ. ಎರಡು ಅಂಗಡಿಗಳು ಪಾನೀಯ ನಿಗಮದಿಂದ ಸ್ವಲ್ಪ ಹೆಚ್ಚು ಮದ್ಯವನ್ನು ಎತ್ತುವಳಿ ಮಾಡಿವೆ. ತಕ್ಷಣ ಇದನ್ನು ತಡೆಯಲಾಗಿದೆ. ಪರಿಶೀಲನೆ ನಡೆಸುತ್ತಿದ್ದೇವೆ. ಮಾಹಿತಿಗಳೆಲ್ಲ ತೃಪ್ತಿಕರವಾಗಿದ್ದರೆ ಮತ್ತೆ ಮಾರಾಟಕ್ಕೆ ಅವಕಾಶ ಕೊಡುತ್ತೇವೆ’ ಎಂದು ಅವರು ಹೇಳಿದರು. 

‘ಮಿತಿಗಿಂತ ಹೆಚ್ಚು ಸಂಗ್ರಹ ಮಾಡಿದವರು, ಅಕ್ರಮ ಸಾಗಾಟ ಮಾಡಿದವರು, ಪರವಾನಗಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೆ 62 ಕಡೆಗಳಲ್ಲಿ ದಾಳಿಗಳನ್ನು ನಡೆಸಿದ್ದೇವೆ. ದಿನದ 24 ಗಂಟೆಗಳ ಕಾಲವೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಂಟ್ರೋಲ್‌ ರೂಂ ಕೂಡ ಸ್ಥಾಪಿಸಲಾಗಿದೆ’ ಎಂದು ಕೆ.ಎಸ್‌.ಮುರಳಿ ಅವರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು