ಭಾನುವಾರ, ಫೆಬ್ರವರಿ 28, 2021
31 °C
ಮತದಾರರಲ್ಲಿ ಹುಮ್ಮಸ್ಸು, ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತ ಜನ, ಮುಂಜಾಗ್ರತಾ ಕ್ರಮಗಳ ಪಾಲನೆ

ಗ್ರಾಮ ಪಂಚಾಯಿತಿ ಚುನಾವಣೆ: ಚಾಮರಾಜನಗರದಲ್ಲಿ ಬಿರುಸಿನ, ಶಾಂತಿಯುತ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಾಮರಾಜನಗರ ತಾಲ್ಲೂಕು ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಮಂಗಳವಾರ ಶಾಂತಿಯುತ ಮತದಾನವಾಗಿದೆ. ಬೆಳಿಗ್ಗೆಯಿಂದಲೇ ಬಿರುಸಿನ ಮತದಾನವಾಗಿದ್ದು, ಶೇ 83.65ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನಲ್ಲಿ 2,40,594 ಮಂದಿ ಮತದಾರರಿದ್ದು, ಶೇ 79.25ರಷ್ಟು ಮಂದಿ ಮತದಾನ ಮಾಡಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 1,60,970 ಮಂದಿ ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದು, ಶೇ 88.05 ಮಂದಿ ಮತದಾನ ಮಾಡಿದ್ದಾರೆ. ಶೇಕಡವಾರು ಮತದಾನದ ಪ್ರಮಾಣದಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಮುಖಂಡರ ನಡುವೆ ವಾಗ್ವಾದ, ಪೊಲೀಸರೊಂದಿಗೆ ಮಾತಿನ ಚಕಮಕಿಯಂತಹ ಸಣ್ಣ ಪುಟ್ಟ ಘಟನೆಗಳನ್ನು ಬಿಟ್ಟರೆ, ಎರಡೂ ತಾಲ್ಲೂಕಿಗಳಲ್ಲಿ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತದಾನಕ್ಕೆ ಎಲ್ಲೂ ತೊಂದರೆಯಾಗಿಲ್ಲ. 

ಗುಂಡ್ಲುಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ 499 ಹಾಗೂ ಚಾಮರಾಜನಗರ ನಗರ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ 742 ಸದಸ್ಯ ಸ್ಥಾನಗಳು ಸೇರಿದಂತೆ 1,241 ಸದಸ್ಯ ಸ್ಥಾನಗಳಿಗೆಗೆ ಚುನಾವಣೆ ನಡೆದಿದ್ದು, ಎರಡು ತಾಲ್ಲೂಕುಗಳಲ್ಲಿ ಈಗಾಗಲೇ 62 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಮಂಗಳವಾರ 1,179 ಸ್ಥಾನಗಳಿಗೆ ಮತದಾನ ನಡೆಯಿತು. ಕಣದಲ್ಲಿದ್ದ 3,079 ಅಭ್ಯರ್ಥಿಗಳಿದ್ದರು. ಈಗ ಅವರ ಭವಿಷ್ಯ ಮತಪೆಟ್ಟಿಗೆಳಲ್ಲಿ ಭದ್ರವಾಗಿದೆ. 

ಬಿ‌ರುಸಿನ ಮತದಾನ

ಎರಡೂ ತಾಲ್ಲೂಕುಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಯಿತು. ಚಳಿಯ ವಾತಾವರಣದ ನಡುವೆಯೇ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುವವರು, ನಗರ, ಪಟ್ಟಣಗಳಿಗೆ ವಿವಿಧ ಕಾರ್ಯಗಳಿಗಾಗಿ ಹೊರಟವರು ಆರಂಭದಲ್ಲೇ ಮತಗಟ್ಟೆಗೆ ಬಂದು ಮತದಾನ ಮಾಡಿದರು. 9 ಗಂಟೆಯ ವೇಳೆಗೆ ಎರಡೂ ತಾಲ್ಲೂಕುಗಳಲ್ಲಿ ಶೇ 6.75ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದರು. 

ಬಿಸಿಲು ಏರುತ್ತಿದ್ದಂತೆಯೇ ಮತದಾನವೂ ಬಿರುಸು ಪಡೆಯಿತು. ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದ ಜನ, ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಬೆಳಿಗ್ಗೆ 11ರ ವೇಳೆಗೆ ಶೇ 24.81ರಷ್ಟು ಮತದಾನವಾಯಿತು. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಶೇ 48.77ರಷ್ಟು ಹಾಗೂ ಮಧ್ಯಾಹ್ನ ಮೂರು ಗಂಟೆ‌ಗೆ ಮತದಾನದ ಪ್ರಮಾಣ ಶೇ 63.04ಕ್ಕೆ ಹಿಗ್ಗಿತ್ತು. 

ಯುವಕ ಯುವತಿಯರು, ವಯಸ್ಕರು, ವೃದ್ಧರು ಸೇರಿದಂತೆ ಎಲ್ಲರೂ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಲ್ಲಲ್ಲಿ ಶತಾಯುಷಿಗಳು, 90 ವರ್ಷ ದಾಟಿದವರು ಕೂಡ ತಮ್ಮ ಹಕ್ಕನ್ನು ಚಲಾಯಿಸಿದರು. ಯುವ ಮತದಾರರು ಮೊದಲ ಬಾರಿ ಮತ ಚಲಾಯಿಸಿ ಸಂಭ್ರಮಿಸಿದರು.

ಕೋವಿಡ್‌ ಮುನ್ನೆಚ್ಚರಿಕಾ ಕ್ರಮ

ಕೋವಿಡ್‌–19 ತಡೆಗಾಗಿ ಚುನಾವಣಾ ಆಯೋಗ ರೂಪಿಸಿದ್ದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಮತಗಟ್ಟೆಗಳಲ್ಲಿ ಪಾಲಿಸಲಾಯಿತು. ಮತದಾರರ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗಲಿಲ್ಲ. ಉಳಿದಂತೆ, ಮಾಸ್ಕ್‌ ಧರಿಸದವರಿಗೆ ಮತದಾನ ಮಾಡಲು ಅವಕಾಶ ನಿರಾಕರಿಸಲಾಯಿತು. ಪ್ರತಿ ಮತಗಟ್ಟೆಯಲ್ಲೂ ಆಶಾ ಕಾರ್ಯಕರ್ತೆಯರು ಮತದಾರರ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ ಸ್ಯಾನಿಟೈಸರ್‌ ನೀಡಿ ಮತದಾನ ಕೇಂದ್ರಕ್ಕೆ ಕಳುಹಿಸಿದರು. ಮತಗಟ್ಟೆ ಸಿಬ್ಬಂದಿ ಕೂಡ ಮಾಸ್ಕ್‌, ಗ್ಲೌಸ್‌, ಫೇಸ್‌ಶೀಲ್ಡ್‌ ಧರಿಸಿದ್ದರು. 

ಕೊನೆ ಕ್ಷಣದ ಕಸರತ್ತು

ಮತಗಟ್ಟೆಯಿಂದ 200 ಮೀಟರ್‌ ದೂರದಲ್ಲಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಸೇರಿ ಮತದಾನಕ್ಕೆ ತೆರಳುತ್ತಿದ್ದವರಿಗೆ ನಮಸ್ಕರಿಸುತ್ತಾ ತಮಗೇ ಮತ ಹಾಕುವಂತೆ ಮನವಿ ಮಾಡುತ್ತಿದ್ದರು. ಕೆಲವು ಅಭ್ಯರ್ಥಿಗಳು ಮತದಾರರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಬರಲು ವಾಹನದ ವ್ಯವಸ್ಥೆಯನ್ನೂ ಮಾಡಿದ್ದರು. ಬೆಂಗಳೂರು, ಮೈಸೂರು ಸೇರಿದಂತೆ ದೂರದಲ್ಲಿರುವ ಮತದಾರರನ್ನು ಕರೆದುಕೊಂಡು ಬರಲು ಬಸ್‌ನ ವ್ಯವಸ್ಥೆಯನ್ನೂ ಮಾಡಿದ್ದರು. ಮತದಾನ ಮಾಡಲು ಬರದವರಿಗೆ ಕರೆ ಮಾಡಿ ಮತ ಚಲಾಯಿಸುವಂತೆ ಪ್ರೇರೇಪಿಸುತ್ತಿದ್ದುದೂ ಕಂಡು ಬಂತು. 

ಪಕ್ಷದ ಚರ್ಚೆ

ಮತದಾನದ ದಿನವೂ ಗ್ರಾಮೀಣ ಭಾಗಗಳಲ್ಲಿ ಪಕ್ಷವಾರು ಚರ್ಚೆ ಜೋರಾಗಿತ್ತು. ಕೇಳಿದವರೆಲ್ಲ ತಾನು ಬಿಜೆಪಿ ಬೆಂಭಲಿತ ಅಭ್ಯರ್ಥಿ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಎಂದು ಹೇಳುತ್ತಿದ್ದರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು, ಪಕ್ಷಗಳ ಮುಖಂಡರು ಕೂಡ ತಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಇದ್ದರು. 

ಕ್ರಮ ಸಂಖ್ಯೆ ಅದಲು ಬದಲು

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯ ತೆರಕಣಾಂಬಿ ಹುಂಡಿಯಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ನೀಡಿದ್ದ ಕ್ರಮ ಸಂಖ್ಯೆಯಲ್ಲಿ ಅದಲು ಬದಲಾಗಿ ಸ್ವಲ್ಪ ಗೊಂದಲ ಉಂಟಾಯಿತು. 

ಶಶಿಕುಮಾರ್‌ ಎಂಬ ಅಭ್ಯರ್ಥಿಗೆ 9ನೇ ಕ್ರಮ ಸಂಖ್ಯೆ ಹಾಗೂ ಶಂಕರಯ್ಯ ಎಂಬುವವರಿಗೆ 8ನೇ ಕ್ರಮ ಸಂಖ್ಯೆಯನ್ನು ಚುನಾವಣಾಧಿಕಾರಿಗಳು ಈ ಮೊದಲು ನೀಡಿದ್ದರು. ಅದರಂತೆ ಅವರು ಪ್ರಚಾರ ನಡೆಸಿದ್ದರು. ಆದರೆ, ಮಂಗಳವಾರದ ಮತಪತ್ರದಲ್ಲಿ ಇದು ಅದಲು ಬದಲಾಗಿತ್ತು. ಇದರಿಂದಾಗಿ ಗೊಂದಲ ಉಂಟಾಯಿತು. ಶಶಿಕುಮಾರ್‌ ಅವರು ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದರು. ಚುನಾವಣಾ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಶಶಿಕುಮಾರ್‌ ಅವರು ಹೇಳಿದರು. 

ವಾಮಾಚಾರ

ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಡ್ರಹಳ್ಳಿಯಲ್ಲಿ ವಾಮಾಚಾರ ಮಾಡಿದ ಕುರುಹುಗಳು ಕಂಡು ಬಂದವು. ಮೂರ್ನಾಲ್ಕು ಕಡೆಗಳಲ್ಲಿ ರಸ್ತೆಯಲ್ಲಿ ಒಡೆದ ಕುಡಿಕೆಗಳು, ಕುಂಕುಮ, ನಿಂಬೆಹಣ್ಣು ಕಂಡು ಬಂದವು. 

ಮತದಾನಕ್ಕೆ ಅವಕಾಶ

ಗುಂಡ್ಲುಪೇಟೆ ತಾಲ್ಲೂಕಿನ ಚಿರಕನಹಳ್ಳಿಯಲ್ಲಿ 31 ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಇದನ್ನು ತಹಶೀಲ್ದಾರ್‌ ಅವರ ಗಮನಕ್ಕೆ ತರಲಾಯಿತು. ನಂತರ ಅವರಿಗೂ ಮತದಾನಕ್ಕೆ ಅವಕಾಶ ಮಾಡಿ ಕೊಡಲಾಯಿತು. 

ವಾಗ್ವಾದ

ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿಯ ಬ್ಲಾಕ್‌ ಒಂದರಲ್ಲಿ ಮತದಾನಕ್ಕೆ ಬಂದ ಮಹಿಳೆಯು ದಾಖಲೆ ತಂದಿಲ್ಲ ಎಂದು ಸ್ಪರ್ಧಿಯೊಬ್ಬರ ಬೆಂಬಲಿಗರೊಬ್ಬರು ಹೇಳಿದ್ದಕ್ಕೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು. 

ರಾಜಕೀಯ ನಾಯಕರಿಂದ ಮತದಾನ

ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರು ತಮ್ಮ ಊರಿನಲ್ಲಿ ಮತದಾನ ಮಾಡಿದರು. ಕೆಪಿಸಿಸಿ ವಕ್ತಾರ ಆರ್‌. ಧ್ರುವನಾರಾಯಣ ಅವರು ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ, ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಹಂಗಳ ಗ್ರಾಮ ಪಂಚಾಯಿತಿಯ ಚೌಡಹಳ್ಳಿಯಲ್ಲಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಅವರು ತೆರಕಣಾಂಬಿಯಲ್ಲಿ ಮತದಾನ ಮಾಡಿದರು. ಇವರಲ್ಲದೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಪಕ್ಷಗಳ ಮುಖಂಡರು ತಮ್ಮ ಊರುಗಳಲ್ಲಿ ಹಕ್ಕನ್ನು ಚಲಾಯಿಸಿದರು. 

ಹಕ್ಕು ಚಲಾಯಿಸಿದ 28 ಕೋವಿಡ್‌ ರೋಗಿಗಳು 

ಕೋವಿಡ್‌–19 ನಿಂದ ಬಳಲುತ್ತಿರುವವರಿಗೂ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆರೋಗ್ಯ ಇಲಾಖೆಯು ಎರಡೂ ತಾಲ್ಲೂಕುಗಳಲ್ಲಿ 55 ಮಂದಿ ಸೋಂಕಿತರನ್ನು ಗುರುತಿಸಿತ್ತು. ಈ ಪೈಕಿ 28 ಮಂದಿ ಮತದಾನ ಮಾಡುವ ಆಶಯ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಇಲಾಖೆ ವ್ಯವಸ್ಥೆ ಮಾಡಿತ್ತು. 

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟು ಮಂದಿ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ 20 ಮಂದಿ ಮತದಾನ ಮಾಡಿದ್ದಾರೆ. ಸಂಜೆ 4 ಗಂಟೆಯಿಂದ 5 ಗಂಟೆಯ ಅವಧಿಯಲ್ಲಿ ಸೋಂಕಿತರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮತಗಟ್ಟೆ ಸಿಬ್ಬಂದಿಗೂ ಪಿಪಿಇ ಕಿಟ್‌ ನೀಡಲಾಗಿತ್ತು. 

ಶಾಂತಿಯುತ ಮತದಾನ: ಜಿಲ್ಲಾಧಿಕಾರಿ

ಚಾಮರಾಜನಗರ: ಮತದಾನದ ಪ್ರಕ್ರಿಯೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದೆ, ಶಾಂತಿಯುತವಾಗಿ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದೇನೆ. ಗ್ರಾಮೀಣ ಜನರು ಉತ್ಸಾಹದಲ್ಲಿ ಪಾಲ್ಗೊಂಡಿದ್ದಾರೆ. ಜನರ ಭಾಗೀದಾರಿಕೆ ಹೆಚ್ಚಿತ್ತು. ಪ್ರಜಾಭುತ್ವದ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ’ ಎಂದರು. 

‘ಇದೊಂದು ಸ್ಮರಣೀಯ ಚುನಾವಣೆ. ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸುವ ಸವಾಲು ಇತ್ತು. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕೋವಿಡ್‌ ರೋಗಿಗಳು ಕೂಡ ಮತದಾನ ಮಾಡಿದ್ದಾರೆ. 5 ಗಂಟೆ ಆದ ನಂತರವೂ ಹಲವು ಕಡೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಟೋಕನ್‌ ನೀಡಿ, ಅವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು