ಗುರುವಾರ , ಆಗಸ್ಟ್ 11, 2022
21 °C
411 ಮಂದಿ ನಾಮಪತ್ರ ವಾಪಸ್‌, ಪಕ್ಷದ ಅಡಿಯಲ್ಲಿ ಪ್ರಚಾರ ನಡೆಸುವಂತಿಲ್ಲ– ಜಿಲ್ಲಾಧಿಕಾರಿ ಸ್ಪಷ್ಟನೆ

ಗ್ರಾ.ಪಂ. ಚುನಾವಣೆ ಮೊದಲ ಹಂತ: 62 ಮಂದಿ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿರುವ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 62 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಚಾಮರಾಜನಗರ ತಾಲ್ಲೂಕಿನ 43 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ 476 ಕ್ಷೇತ್ರಗಳ 1,241 ಸದಸ್ಯ ಸ್ಥಾನಗಳಿಗೆ ಇದೇ 22ರಂದು ಮತದಾನ ನಡೆಯಲಿದೆ. ವೇಳಾಪಟ್ಟಿ ಪ್ರಕಾರ, ನಾಮಪತ್ರ ವಾಪಸ್‌ ಪಡೆಯಲು ಭಾನುವಾರ (ಡಿ.14) ಕೊನೆಯ ದಿನವಾಗಿದ್ದು, 411 ಮಂದಿ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 

‘ಎರಡು ತಾಲ್ಲೂಕುಗಳಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಗೆ 3,705 ನಾಮಪತ್ರಗಳು ಸ್ವೀಕೃತವಾಗಿದ್ದವು. ಈ ಪೈಕಿ 32 ನಾಮಪತ್ರಗಳು ತಿರಸ್ಕೃತಗೊಂಡಿವೆ. 3,552 ನಾಮಪತ್ರಗಳು ಕ್ರಮಬದ್ಧವಾಗಿವೆ. 411 ಮಂದಿ (ಚಾಮರಾಜನಗರ ತಾಲ್ಲೂಕು–218, ಗುಂಡ್ಲುಪೇಟೆ ತಾಲ್ಲೂಕು 193) ನಾಮಪತ್ರಗಳನ್ನು ವಾಪಸ್‌ ಪಡೆದಿದ್ದಾರೆ. ಚಾಮರಾಜನಗರ ತಾಲ್ಲೂಕಿನಲ್ಲಿ 49 ಹಾಗೂ ಗುಂಡ್ಲುಪೇಟೆಯಲ್ಲಿ 13 ಮಂದಿ ಸೇರಿದಂತೆ 62 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತಿಮವಾಗಿ ಕಣದಲ್ಲಿ 3,079 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ 1,876 ಹಾಗೂ ಗುಂಡ್ಲುಪೇಟೆಯಲ್ಲಿ 1,203 ಮಂದಿ ಇದ್ದಾರೆ’ ಎಂದು ಅವರು ಹೇಳಿದರು. 

‘ಮೊದಲ ಹಂತದ ಚುನಾವಣೆಯಲ್ಲಿ 1,241 ಸದಸ್ಯ ಸ್ಥಾನಗಳಿದ್ದು, ಈಗಾಗಲೇ 62 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಹಾಗಾಗಿ, 22ರಂದು 1,179 ಸ್ಥಾನಗಳಿಗೆ ಮತದಾನ ನಡೆಯಲಿದೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು. 

‘21ರಂದು ಮಸ್ಟರಿಂಗ್‌ ಕಾರ್ಯ ನಡೆಯಲಿದೆ. 22ಕ್ಕೆ ಮತದಾನ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ’ ಎಂದರು. 

ಅಕ್ರಮಗಳ ಮೇಲೆ ನಿಗಾ: ‘ಹನೂರು ತಾಲ್ಲೂಕಿನ ನಾಲ್‌ರೋಡ್‌, ಪಾಲಾರ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆಗಳ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ಅಕ್ರಮಗಳ ಮೇಲೆ ನಿಗಾ ವಹಿಸಲಾಗಿದೆ. ನೀತಿ ಸಂಹಿತೆ ಪಾಲನೆ ಸಂಬಂಧ ಎಂಸಿಸಿ ತಂಡ, ಫ್ಲೈಯಿಂಗ್‌ ಸ್ಕ್ಯಾಡ್‌, ಸೆಕ್ಟರ್‌ ಮತ್ತು ರೂಟ್‌ ಅಧಿಕಾರಿಗಳ ತಂಡವು ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸುತ್ತಿದ್ದು, ರಾತ್ರಿ ಗಸ್ತು, ಹೆದ್ದಾರಿ ಗಸ್ತು ವ್ಯವಸ್ಥೆ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

‘ಜಿಲ್ಲೆಯಲ್ಲಿ ಅಧಿಸೂಚನೆ ಹೊರಡಿಸಿದ ನಂತರ, ಸೋಮವಾರದವರೆಗೆ (ಡಿ.14) ಮುಂಜಾಗ್ರತಾ ಕ್ರಮವಾಗಿ 18 ಮಂದಿ ವಿರುದ್ಧ ಸಿಆರ್‌ಪಿಸಿ 107 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆ, ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ 56 ಪ್ರಕರಣಗನ್ನು ದಾಖಲಿಸಿದೆ. ಕೋವಿಡ್‌ ನಿಯಮ ಉಲ್ಲಂಘನೆಯ (ಮಾಸ್ಕ್‌ ಧರಿಸದ್ದಕ್ಕೆ) 750 ಪ್ರಕರಣನ್ನು ದಾಖಲಿಸಿ ₹73,500 ದಂಡ ವಸೂಲು ಮಾಡಲಾಗಿದೆ’ ಎಂದು ಅವರು ಹೇಳಿದರು. 

ತರಬೇತಿ: ‘ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ 1046 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸಲು 4,608 ಸಿಬ್ಬಂದಿ ಅಗತ್ಯವಿದೆ. ಅವರಿಗೆ ತರಬೇತಿ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಇದೇ 19ರೊಳಗಾಗಿ ತರಬೇತಿ ಪೂರ್ಣಗೊಳ್ಳಲಿದೆ’ ಎಂದರು. 

‘ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವುದು ನಮ್ಮ ಉದ್ದೇಶ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌‌ ಇದ್ದರು.   

‘ಪಕ್ಷಗಳ ಮುಖಂಡರು ಪ್ರಚಾರ ನಡೆಸುವಂತಿಲ್ಲ’

‘ಸ್ಪರ್ಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಳ್ಳಬಹುದು. ಅಭ್ಯರ್ಥಿ ಸೇರಿ ಐವರು ಮಾತ್ರ ಪ್ರಚಾರದಲ್ಲಿ ಭಾಗವಹಿಸಲು ಅವಕಾಶ. ಆರು ಜನರಿದ್ದರೂ ಅದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಮಿತಿಗಿಂತ ಹೆಚ್ಚು ಮಂದಿ ಪ್ರಚಾರದಲ್ಲಿ ಭಾಗವಹಿಸಿದರೆ ಪ್ರಕರಣ ದಾಖಲು ಮಾಡಿಕೊಳ್ಳುತ್ತೇವೆ. ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಚಾರದ ಸಂದರ್ಭದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದರೆ ₹100 ದಂಡ ಹಾಕುವುದಕ್ಕೆ ಅವಕಾಶ ಇದೆ’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.  

‘ಇದು ಪಕ್ಷ ರಹಿತ ಚುನಾವಣೆ. ಪಕ್ಷಗಳು, ಅವುಗಳ ಚಿಹ್ನೆಗಳ ಅಡಿಯಲ್ಲಿ ಸ್ಪರ್ಧಿಸುವುದಕ್ಕೆ, ನಿರ್ದಿಷ್ಟ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸುವುದಕ್ಕೂ ಅವಕಾಶ ಇಲ್ಲ. ಮುಖಂಡರು ಪ್ರಚಾರ ಮಾಡುವಂತಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ಸಭೆಗಳನ್ನೂ ನಡೆಸುವ ಹಾಗಿಲ್ಲ. ಇವುಗಳ ಉಲ್ಲಂಘನೆಯಾದರೆ ಸದಸ್ಯತ್ವ ಅನರ್ಹವಾಗುತ್ತದೆ’ ಎಂದು ಅವರು ಹೇಳಿದರು. 

‘ಪಕ್ಷ ಅಥವಾ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿಕೊಂಡು ಪ್ರಚಾರ ನಡೆಸುವಂತಿಲ್ಲ. ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳನ್ನು ಏರ್ಪಡಿಸುವುದು, ವೇದಿಕೆಯ ಮೇಲೆ ಪಕ್ಷದ, ಬಾವುಟ ಬ್ಯಾನರ್‌ ಬಳಸುವಂತಿಲ್ಲ. ಅಭ್ಯರ್ಥಿಗಳು ಕೂಡ ಪಕ್ಷದ ಹೆಸರನ್ನು ಬಳಸಿ ಮತ ಕೋರಬಾರದು. ಈ ವಿಷಯದಲ್ಲಿ ಪಕ್ಷಗಳ ಮುಖಂಡರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು