ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಯುದ್ಧ, ಚೀನಾ ಬಿಕ್ಕಟ್ಟು; ಗ್ರಾನೈಟ್‌ ಉದ್ಯಮಕ್ಕೆ ಹೊಡೆತ

ರಫ್ತು ಶೇ 50ರಷ್ಟು ಕುಂಠಿತ, ಸ್ಥಳೀಯ ಮಾರುಕಟ್ಟೆಯನ್ನೇ ನೆಚ್ಚಿದ ಉದ್ಯಮಿಗಳು
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಚಾಮರಾಜನಗರ: ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ, ರಷ್ಯಾ–ಉಕ್ರೇನ್‌ ಯುದ್ಧ, ಇಸ್ರೇಲ್‌–ಹಮಾಸ್‌ ಕದನವು ಕರಿಕಲ್ಲು (ಗ್ರಾನೈಟ್‌) ಮತ್ತು ನೈಸರ್ಗಿಕ ಕಲ್ಲು (ಸ್ಟೋನ್‌) ಉದ್ಯಮಕ್ಕೆ ತೀವ್ರ ಹೊಡೆತ ನೀಡಿದೆ. 

ವರ್ಷದಿಂದ ದೇಶ ಹಾಗೂ ರಾಜ್ಯದಿಂದ ಗ್ರಾನೈಟ್‌ ರಫ್ತಿನ ಪ್ರಮಾಣ ಕಡಿಮೆಯಾಗಿದ್ದು, ಕರಿಕಲ್ಲು ಉದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯಲ್ಲೂ ಗಣಿಗಾರಿಕೆ ಬಹುತೇಕ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ. ಸ್ಥಳೀಯ ಮಾರುಕಟ್ಟೆಗೆ ಮಾತ್ರ ಪೂರೈಕೆಯಾಗುತ್ತಿದೆ. 

ಪ್ರಮುಖವಾಗಿ ಅಮೆರಿಕ, ಯುರೋಪ್‌, ಚೀನಾಕ್ಕೆ ಗ್ರಾನೈಟ್‌, ಮಾರ್ಬಲ್‌ ಸೇರಿದಂತೆ ಕಲ್ಲಿನ ಉತ್ಪನ್ನಗಳು ರಫ್ತಾಗುತ್ತವೆ. ವಾರ್ಷಿಕವಾಗಿ ₹15 ಸಾವಿರ ಕೋಟಿಯಷ್ಟು ವಹಿವಾಟು ನಡೆಯುತ್ತದೆ.

‘ಒಂದು ವರ್ಷದಿಂದ ರಫ್ತಿನ ಪ್ರಮಾಣ ಶೇ 40ರಿಂದ ಶೇ 50ರಷ್ಟು ಕಡಿಮೆಯಾಗಿದ್ದು, ಕ್ವಾರಿಗಳಲ್ಲಿ ಉತ್ಪಾದನೆ ಕಡಿಮೆ ಮಾಡಿದ್ದೇವೆ. ಚೀನಾವು ಕರಿಕಲ್ಲು ಉತ್ಪನ್ನಗಳ ದೊಡ್ಡ ಗ್ರಾಹಕನಾಗಿದ್ದು, ಆಂಧ್ರಪ್ರದೇಶದಿಂದ ಹೆಚ್ಚು ರಫ್ತಾಗುತ್ತಿತ್ತು. ಎರಡೂ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಉದ್ಯಮಕ್ಕೆ ಹಿನ್ನಡೆಯಾಗಿದೆ’ ಎಂದು ಭಾರತೀಯ ಗ್ರಾನೈಟ್‌ ಮತ್ತು ಕಲ್ಲು ಉದ್ಯಮದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್‌.ಕೃಷ್ಣಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ರಾಜ್ಯದ ಉದ್ದಿಮೆಗೂ ನಷ್ಟ: ಕರಿಕಲ್ಲು ಹಾಗೂ ಕಲ್ಲಿನ ಇತರ ಉತ್ಪನ್ನಗಳನ್ನು ರಫ್ತು ಮಾಡುವುದರಲ್ಲಿ ದೇಶದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ವಾರ್ಷಿಕವಾಗಿ ₹2,000 ಕೋಟಿಯಷ್ಟು ವಹಿವಾಟು ನಡೆಯುತ್ತದೆ. 

ರಾಜ್ಯದಲ್ಲಿ ಚಾಮರಾಜನಗರ, ಇಳಕಲ್‌, ಕನಕಪುರ, ತುಮಕೂರು, ಹಾಸನ, ಮಂಗಳೂರಿನಲ್ಲಿ ಕರಿಕಲ್ಲು ಕ್ವಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೊರದೇಶಗಳಿಗೆ ರಫ್ತಾಗುತ್ತದೆ. ಅಮೆರಿಕ, ಯುರೋಪ್‌ ರಾಷ್ಟ್ರಗಳಿಗೆ ಕಳುಹಿಸಲಾಗುತ್ತದೆ. ಸ್ಮಾರಕಗಳ ನಿರ್ಮಾಣಕ್ಕಾಗಿ ಗ್ರಾನೈಟ್‌, ಮಾರ್ಬಲ್‌ಗಳನ್ನು ಖರೀದಿಸುತ್ತಾರೆ. 

‘ಅಮೆರಿಕದಲ್ಲಿ ಆರ್ಥಿಕ ಹಿಂಜರಿತದೊಂದಿಗೆ ಕೃತಕ ಗ್ರಾನೈಟ್‌, ಮಾರ್ಬಲ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ನಮ್ಮ ದೇಶದಲ್ಲೇ ಉತ್ಪಾದನೆಯಾಗಿ ಅಲ್ಲಿಗೆ ಹೋಗುತ್ತಿದೆ. ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಿಂದಿನ ಅವಧಿಗೆ ಹೋಲಿಸಿದರೆ, ಬೇಡಿಕೆ ಶೇ 20ರಷ್ಟು ಕಡಿಮೆಯಾಗಿದೆ’ ಎಂದು ಕೃಷ್ಣಪ್ರಸಾದ್ ಹೇಳಿದರು. 

‘ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದಿಂದ ಯುರೋಪ್‌ ಮಾರುಕಟ್ಟೆ ಬಿದ್ದು ಹೋಗಿದೆ. ಇತ್ತೀಚೆಗೆ ಇಸ್ರೇಲ್‌–ಹಮಾಸ್‌ ಸಂಘರ್ಷದಿಂದ ಮಧ್ಯಪ್ರಾಚ್ಯದ ಮಾರುಕಟ್ಟೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ಒಕ್ಕೂಟದ ಉಪಾಧ್ಯಕ್ಷ ಹಾಗೂ ಚಾಮರಾಜನಗರ ಜಿಲ್ಲಾ ಗ್ರಾನೈಟ್‌ ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಅಧ್ಯಕ್ಷ ಜಿ.ಎಂ.ಹೆಗಡೆ ತಿಳಿಸಿದರು. 

‘ನಮಗೆ ಅಮೆರಿಕ, ಯುರೋಪ್‌ ರಾಷ್ಟ್ರಗಳು ಪ್ರಮುಖ ಗ್ರಾಹಕರು. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಇರುವುದರಿಂದ ಬಡ್ಡಿದರ ಹೆಚ್ಚಳ ಸೇರಿದಂತೆ ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ಚೀನಾದ ವೀಸಾ ಸಮಸ್ಯೆಯೂ ಬಾಧಿಸುತ್ತಿದೆ. ಉದ್ದಿಮೆ ಚೇತರಿಕೆಗೆ ಎಷ್ಟು ಸಮಯ ಬೇಕು ಎಂಬುದು ತಿಳಿದಿಲ್ಲ’ ಎಂದು ಜಿಲ್ಲೆಯ ಕರಿಕಲ್ಲು ಉದ್ಯಮಿ ಆಲೂರು ಪ್ರದೀಪ್‌ ಹೇಳಿದರು. 

ಚಾಮರಾಜನಗರ ಜಿಲ್ಲೆಯ ಕರಿಕಲ್ಲು ಕ್ವಾರಿಯೊಂದರಲ್ಲಿ ಗಣಿಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು
ಚಾಮರಾಜನಗರ ಜಿಲ್ಲೆಯ ಕರಿಕಲ್ಲು ಕ್ವಾರಿಯೊಂದರಲ್ಲಿ ಗಣಿಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು

ಕರಿಕಲ್ಲು ಉತ್ಪಾದನೆ ಗಣನೀಯ ಇಳಿಕೆ

ಚಾಮರಾಜನಗರ ಜಿಲ್ಲೆಯ 45 ಕರಿಕಲ್ಲು ಕ್ವಾರಿಗಳ ಪೈಕಿ ಬಹುತೇಕ ಕ್ವಾರಿಗಳಲ್ಲಿ ತೆಗೆಯುವ ಕರಿಕಲ್ಲನ್ನು ರಫ್ತು ಮಾಡಲಾಗುತ್ತದೆ. ಸ್ಥಳೀಯ ಮಾರುಕಟ್ಟೆಗೆ ಹೋಗುವುದು ಕಡಿಮೆ. ‘ಪ್ರತಿ ತಿಂಗಳು 3000ದಿಂದ 3500 ಘನ ಮೀಟರ್‌ನಷ್ಟು ಕಲ್ಲು ಉತ್ಪಾದನೆಯಾಗುತ್ತಿತ್ತು. ಈಗ ಹೊರದೇಶಗಳ ಮಾರುಕಟ್ಟೆ ಬಂದ್‌ ಆಗಿರುವುದರಿಂದ 600ರಿಂದ 1000 ಘನ ಮೀಟರ್‌ಗಳಷ್ಟು ಕಲ್ಲನ್ನು ಮಾತ್ರ ತೆಗೆಯಲಾಗುತ್ತಿದೆ. ಹಲವು ಮಾಲೀಕರು ಕ್ವಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಗೆ ಪೂರೈಸುವವರು ಮಾತ್ರ ಗಣಿಗಾರಿಕೆ ನಡೆಸುತ್ತಿದ್ದಾರೆ’ ಎಂದು ಜಿ.ಎಂ.ಹೆಗಡೆ ಮಾಹಿತಿ ನೀಡಿದರು. 

ಇದು ತಾತ್ಕಾಲಿಕ ಹಿನ್ನಡೆ. ಆದರೆ ಎಷ್ಟು ದಿನ ಇರಬಹುದು ಎಂದು ಹೇಳಲು ಸಾಧ್ಯವಿಲ್ಲ. ನೈಸರ್ಗಿಕ ಕಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಇದ್ದೇ ಇದೆ.
-ಎಸ್‌.ಕೃಷ್ಣಪ್ರಸಾದ್‌, ಭಾರತೀಯ ಗ್ರಾನೈಟ್‌ ಮತ್ತು ಕಲ್ಲು ಉದ್ಯಮದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಸಾಲ ತೆಗೆದುಕೊಂಡಿರುತ್ತೇವೆ. ಕಾರ್ಮಿಕರಿಗೆ ವೇತನವನ್ನು ಕೊಡಬೇಕಾಗಿದೆ. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುತ್ತಿದ್ದೇವೆ.
-ಆಲೂರ್‌ ಪ್ರದೀಪ್‌, ಚಾಮರಾಜನಗರದ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT