ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಜನರ ಪರದಾಟ

ಸಮಸ್ಯೆಗಳ ನೆಪ ಹೇಳುವ ಆಹಾರ ಇಲಾಖೆ ಸಿಬ್ಬಂದಿ–ಫಲಾನುಭವಿಗಳ ಆರೋಪ
Last Updated 13 ಜನವರಿ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ತಾಲ್ಲೂಕಿನ ಜನ ಪರದಾಡುತ್ತಿದ್ದಾರೆ.

ಪಟ್ಟಣದ ಆಹಾರ ಇಲಾಖೆಗೆ ಪ್ರತಿ ದಿನ ಹೋದಾಗಲೂ ಸಿಬ್ಬಂದಿ ಸರ್ವರ್‌ ಇಲ್ಲ, ಮೇಲಿನ ಅಧಿಕಾರಿಗಳು ಬಂದಿಲ್ಲ ಎಂದು ಸಬೂಬು ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದು ಜನರು ದೂರಿದ್ದಾರೆ.

‘ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಲು, ಹೆಸರು ಸೇರಿಸಲು, ಹೊಸದಾಗಿ ಕಾರ್ಡ್ ಪಡೆಯಲು ಸಾರ್ವಜನಿಕರು ದಿನನಿತ್ಯ ಕಚೇರಿಗೆ ಬರುತ್ತಾರೆ. ಸರ್ವರ್ ಇಲ್ಲ, ಡಿ.ಡಿ ಬಂದಿಲ್ಲ, ಸಿಬ್ಬಂದಿ ಬಂದಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಸರ್ವರ್ ಮಧ್ಯಾಹ್ನ 12ಕ್ಕೆ ಬರುತ್ತದೆ. 3.30ರ ವರೆಗೆ ಮಾತ್ರ ಕೆಲಸ ಮಾಡುತ್ತದೆ. ಇದರಲ್ಲಿ ಒಂದು ಗಂಟೆ ಊಟದ ಸಮಯ ಬೇರೆ. ಹೀಗಾದರೆ, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದಾದರೂ ಹೇಗೆ’ ಎಂದು ಪಡಗೂರು ಗ್ರಾಮದ ರಾಜೇಶ್ ಪ್ರಶ್ನಿಸಿದರು.

‘ಒಂದು ವಾರದಿಂದ ಪಡಿತರ ಪಡೆದುಕೊಳ್ಳುವುದಕ್ಕಾಗಿ ಕಾರ್ಡ್ ಮಾಡಿಸಲು ಬರುತ್ತಿದ್ದೇನೆ. ಇಂದು, ನಾಳೆ ಎಂದು ಅಲೆಸುತ್ತಿದ್ದಾರೆ. ಬಡವರಾದ ನಾವು ಏನು ಮಾಡುವುದು’ ಎಂದು ಹಂಗಳ ಗ್ರಾಮದ ವೃದ್ದೆ ಬಸಮ್ಮ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ಗುಂಡ್ಲುಪೇಟೆ ಆಹಾರ ಇಲಾಖೆಯ ಕಚೇರಿಯಲ್ಲಿ ಸಮಯವಾದರೂ ಯಾರೂ ಇರುವುದಿಲ್ಲ. ಜನರು ಕಾಯುವ ಪರಿಸ್ಥಿತಿ ಬಂದಿದೆ. ತಹಶೀಲ್ದಾರ್ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ಮತ್ತು ಶಾಸಕರು ಈ ಬಗ್ಗೆ ಗಮನಹರಿಸಿ ಸಾರ್ವಜನಿಕ ಸಮಸ್ಯೆ ಬಗೆಹರಿಸಬೇಕು’ ಎಂದು ಪುರಸಭೆ ಸದಸ್ಯ ರಾಜ್ ಗೋಪಾಲ್ ಒತ್ತಾಯಿಸಿದರು.

ಬಿಪಿಎಲ್‌ ಬದಲು ಎಪಿಎಲ್‌ ಕಾರ್ಡ್‌:ಪಡಿತರ ಚೀಟಿಯಲ್ಲಿ ಹೆಸರನ್ನು ಕೈಬಿಡಲು ಅಥವಾ ಹೊಸ ಹೆಸರನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಸಿಬ್ಬಂದಿ ಮಾಡಿದ ಅಚಾತುರ್ಯದಿಂದಾಗಿ ಕೆಲವು ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಕಾರ್ಡ್‌ಗಳಾಗಿ ಬದಲಾಗಿದ್ದು, ಬಡವರಿಗೆ ಇದರಿಂದ ತಿಂಗಳ ಪಡಿತರ ಸಿಗುತ್ತಿಲ್ಲ.ಈ ಬಗ್ಗೆ ತಾಲ್ಲೂಕು ಕಚೇರಿಯಲ್ಲಿ ಇರುವ ಆಹಾರ ಶಾಖೆಯಲ್ಲಿ ವಿಚಾರ ಮಾಡಿದರೆ ‘ನಾವು ಮಾಡಿರುವುದಲ್ಲ, ನಮಗೂ ಇದಕ್ಕೆ ಸಂಬಂಧವಿಲ್ಲ. ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿ’ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಲವು ಪಡಿತರದಾರರು ಆರೋಪಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಆರ್‌.ರಾಚಪ್ಪ ಅವರು, ‘ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಆಗಿದ್ದರೆ ಅಂತವರು, ಆದಾಯ ಮತ್ತು ಜಾತಿ ಪ್ರಮಾಣಪತ್ರ ಸೇರಿಸಿ ಕಚೇರಿಯಲ್ಲಿ ಅರ್ಜಿ ನೀಡಿದರೆ, ಶೀಘ್ರವಾಗಿ ಕಾರ್ಡ್ ಬದಲಾವಣೆ ಮಾಡಿಕೊಡಲಾಗುತ್ತದೆ’ ಎಂದು ಹೇಳಿದರು.

ಇ–ಕೆವೈಸಿ ಸಂದರ್ಭ ಬೆಳಕಿಗೆ

ಕೆಲ ಕಾಡಂಚಿನ ಗ್ರಾಮಗಳಿಗೆ ನ್ಯಾಯಬೆಲೆ ಅಂಗಡಿಗಳಿಲ್ಲ. ಸಂಚಾರಿ ವಾಹನದ ಮೂಲಕ ಪಡಿತರ ನೀಡುತ್ತಾರೆ. ಕೆಲವರ ಬಿಪಿಎಲ್ ಕಾರ್ಡ್ ವರ್ಷದ ಹಿಂದೆ ಎಪಿಎಲ್ ಕಾರ್ಡ್‌ ಆಗಿ ಬದಲಾಗಿದ್ದರೂ ಜನರ ಅನುಭವಕ್ಕೆ ಬಂದಿಲ್ಲ. ಇಲ್ಲಿಯವರೆಗೂ ಸಂಚಾರಿ ವಾಹನಗಳಲ್ಲಿ ಪಡಿತರ ಪಡೆದುಕೊಳ್ಳುತ್ತಾಬಂದಿದ್ದಾರೆ. ಇದೀಗ ಬಯೊಮೆಟ್ರಿಕ್‌ ದೃಢೀಕರಣಕ್ಕಾಗಿ (ಇ–ಕೆವೈಸಿ) ಹೆಬ್ಬಟ್ಟು ನೀಡಬೇಕು ಎಂದಾಗ ಅನೇಕರ ಕಾರ್ಡ್ ಎಪಿಎಲ್ ಆಗಿರುವುದು, ಇನ್ನೂ ಕೆಲವರದ್ದು ಬೇರೆ ಊರಿಗೆ ವರ್ಗಾವಣೆ ಆಗಿರುವುದು, ಹೆಸರು ಕೈಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT