ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರು, ರೈತರು, ದಲಿತರು ಕಾಂಗ್ರೆಸ್‌ ಬೆಂಬಲಿಸಬೇಕು’

ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಂಸದ ಎಲ್‌.ಹನುಮಂತಯ್ಯ
Published 17 ಏಪ್ರಿಲ್ 2024, 5:52 IST
Last Updated 17 ಏಪ್ರಿಲ್ 2024, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದಕ್ಕಾಗಿ ಬಡವರು, ದಲಿತರು, ರೈತ‌ರು, ಮಹಿಳೆಯರು ಸೇರಿದಂತೆ ಎಲ್ಲರೂ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಮಂಗಳವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಜನರು ಆರಂಭದಿಂದಲೂ ಪ್ರಗತಿಪರ ಆಶಯಗಳನ್ನು ಹೊಂದಿರುವ ಪಕ್ಷಕ್ಕೆ ಅಧಿಕಾರ ನೀಡುತ್ತಾ ಬಂದಿದ್ದಾರೆ. ಬಿಜೆಪಿ ಯಾವಾಗಲೂ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿಲ್ಲ. ಬಿಜೆಪಿ ಪಡೆದ ಗರಿಷ್ಠ ಸ್ಥಾನಗಳು 110. ನಂತರ ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಖರೀದಿಸಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಏರಿತ್ತು’ ಎಂದು ದೂರಿದರು.   

‘ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸುವಾಗ, ಬಿಜೆಪಿ ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದೊಂದೇ ಯೋಜನೆಯನ್ನು ಜಾರಿಗೊಳಿಸಿದಾಗ, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿ ಎಂದು ಹೇಳಲು ಆರಂಭಿಸಿತು’ ಎಂದು ಟೀಕಿಸಿದರು. 

ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮ ಪಕ್ಷವು ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ನೆರವು ನೀಡುವುದು ಸೇರಿದಂತೆ ಜನರಿಗೆ ಅಗತ್ಯವಿರುವಂತಹ ಭರವಸೆಗಳನ್ನು ನೀಡಿದರೆ, ಬಿಜೆಪಿ ಭಾರತವನ್ನು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವ ಭರವಸೆ ನೀಡಿದೆ. ಜನರಿಗೆ ಬೇಕಾದಂತಹ ಯೋಜನೆಗಳನ್ನು ರೂಪಿಸಿಲ್ಲ’ ಎಂದರು. 

‘ಕಪ್ಪು ಹಣವನ್ನು ತರುವುದಾಗಿ ಮೋದಿ 10 ವರ್ಷಗಳ ಹಿಂದೆ ಹೇಳಿದ್ದರು. 2014ರಲ್ಲಿ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರ ₹14 ಸಾವಿರ ಕೋಟಿ ಹಣ ಇತ್ತು. ಅದೀಗ ಶೇ 114ರಷ್ಟು ಹೆಚ್ಚಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು ₹6,300 ಕೋಟಿ ಸಂಗ್ರಹಿಸಿದೆ. ಈ ಪೈಕಿ ಇಡಿ, ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ದಾಳಿಗೆ ಒಳಗಾಗಿದ್ದ 15 ಮಂದಿ ₹330 ಕೋಟಿ ನೀಡಿದ್ದಾರೆ. ಪಕ್ಷಕ್ಕೆ ದೇಣಿಗೆ ನೀಡಿದವರನ್ನು ತನಿಖೆಯಿಂದ ರಕ್ಷಿಸಿದೆ’ ಎಂದು ಹನುಮಂತಯ್ಯ ದೂರಿದರು. 

ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷದಿಂದ ಸುನಿಲ್‌ ಬೋಸ್‌ ಅವರು ಸ್ಪರ್ಧಿಸಿದ್ದು ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಕಾಂಗ್ರೆಸ್‌ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸ ನಾಯಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಅಸ್ಗರ್‌ ಮುನ್ನಾ, 

‘ಅಂಬೇಡ್ಕರ್‌ ಸಚಿವ ಸ್ಥಾನ ನೀಡಿದ್ದು ಕಾಂಗ್ರೆಸ್‌’

ಕಾಂಗ್ರೆಸ್‌ ಪಕ್ಷವು ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಮಾತ್ರವಲ್ಲದೆ ಸಾವಿನ ನಂತರವೂ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ಕೊಡದೆ ಅವಮಾನ ಮಾಡಿದೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಹನುಮಂತಯ್ಯ ‘ಅಂಬೇಡ್ಕರ್‌ ಅವರು ಮೊದಲಿನಿಂದಲೂ ಕಾಂಗ್ರೆಸ್‌ ವಿರುದ್ಧ ಸ್ಪರ್ಧಿಸುತ್ತಾ ಬಂದಿದ್ದರು. ಆ ಕಾಲದಲ್ಲಿ ಕಾಂಗ್ರೆಸ್‌ ವಿರುದ್ಧ ಯಾರೇ ನಿಂತಿದ್ದರೂ ಸೋಲುತ್ತಿದ್ದರು. ಅದೇ ರೀತಿ ಅಂಬೇಡ್ಕರ್‌ ಅವರಿಗೆ ಸೋಲಾಗಿದೆ. ಅಂಬೇಡ್ಕರ್‌ ಅವರನ್ನು ರಾಜ್ಯ ಸಭೆಯ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್‌. ಬಿಜೆಪಿಯವರು ಇದನ್ನು ಯಾಕೆ ಹೇಳುವುದಿಲ್ಲ’ ಎಂದು ಪ್ರಶ್ನಿಸಿದರು.  ‘ದೆಹಲಿಯಲ್ಲಿ ಅಂತ್ಯಸಂಸ್ಕಾರ ನಡೆಯದೇ ಇದ್ದುದರಲ್ಲಿ ಕಾಂಗ್ರೆಸ್‌ ಪಾತ್ರ ಇಲ್ಲ. ಮುಂಬೈನಲ್ಲೇ ಅಂತ್ಯಕ್ರಿಯೆ ನಡೆಯಬೇಕು ಎಂಬುದು ಅಂಬೇಡ್ಕರ್‌ ಅವರ ಕುಟುಂಬದ ನಿರ್ಧಾರವಾಗಿತ್ತು’ ಎಂದು ಅವರು ಹೇಳಿದರು. 

‘ಬಣ ರಾಜಕೀಯದಿಂದ ಟಿಕೆಟ್‌ ಸಿಗಲಿಲ್ಲ’

ಕೋಲಾರದಲ್ಲಿ ಟಿಕೆಟ್‌ ಕೈತಪ್ಪಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹನುಮಂತಯ್ಯ ‘ನಾನು ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು ನಿಜ. ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಮುಖಂಡರಿಗೆ ನನಗೆ ಟಿಕೆಟ್‌ ನೀಡಲು ಮನಸ್ಸಿತ್ತು. ಆದರೆ ಕ್ಷೇತ್ರದಲ್ಲಿ ಪಕ್ಷದಲ್ಲಿದ್ದ ಬಣ ರಾಜಕೀಯದಿಂದಾಗಿ ಟಿಕೆಟ್‌ ಕೈತಪ್ಪಿತು’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT