ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆ ಹುಲಿಗಳ ನಾಡಷ್ಟೇ ಅಲ್ಲ, ಗಜಗಳ ಬೀಡೂ ಹೌದು!

ಚಾಮರಾಜನಗರ ಜಿಲ್ಲೆಯ ನಾಲ್ಕು ರಕ್ಷಿತಾರಣ್ಯದಲ್ಲಿ ಹೆಚ್ಚು ಆನೆಗಳು, ಬಂಡೀಪುರ ನಂ. 1
Published 11 ಆಗಸ್ಟ್ 2023, 7:45 IST
Last Updated 11 ಆಗಸ್ಟ್ 2023, 7:45 IST
ಅಕ್ಷರ ಗಾತ್ರ

ಚಾಮರಾಜನಗರ: ನಾಲ್ಕು ಸಂರಕ್ಷಿತ ಅರಣ್ಯಗಳನ್ನು ಹೊಂದಿರುವ ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಮಾತ್ರವಲ್ಲ, ಗಜಗಳ ನಾಡೂ ಹೌದು.

ರಾಜ್ಯ ಅರಣ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಆನೆಗಳ ಗಣತಿ ವರದಿ ಪ್ರಕಾರ, ಜಿಲ್ಲೆಯಲ್ಲೇ ಅತಿ ಹೆಚ್ಚು ಆನೆಗಳಿವೆ.

ರಾಜ್ಗದ 32 ವನ್ಯಜೀವಿ ವಿಭಾಗಗಳ ಪೈಕಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆನೆಗಳ ಸಂಖ್ಯೆಯಲ್ಲೂ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹುಲಿ ಗಣತಿ ವರದಿಯಲ್ಲೂ ರಾಜ್ಯದಲ್ಲಿ ಅತಿ ಹೆಚ್ಚು ವ್ಯಾಘ್ರಗಳನ್ನು (150) ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಬಿಡುಗಡೆ ಮಾಡಿರುವ ಆನೆ ಗಣತಿ ಪ್ರಕಾರ, ರಾಜ್ಯದಲ್ಲಿ 6,395 ಆನೆಗಳಿವೆ. ಈ ಪೈಕಿ, ಜಿಲ್ಲೆಯಲ್ಲಿರುವ ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಒಟ್ಟು 2,677 ಆನೆಗಳು ಇವೆ.

ಬಂಡೀಪುರ ಸರಾಸರಿ 1116 ಆನೆಗಳೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ. ಮಲೆ ಮಹದೇಶ್ವರ ವನ್ಯಧಾಮದಲ್ಲಿ 706 ಗಜಗಳಿದ್ದು, ಜಿಲ್ಲೆಯಲ್ಲಿ ಎರಡನೇ ಸ್ಥಾನಗಳಿಸಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸರಾಸರಿ 619 ಆನೆಗಳನ್ನು ಗುರುತಿಸಲಾಗಿದೆ. ಕಾವೇರಿ ವನ್ಯಧಾಮದಲ್ಲಿ 236 ಗಜಗಳು ಲೆಕ್ಕಕ್ಕೆ ಸಿಕ್ಕಿವೆ.

ಮೇನಲ್ಲಿ ನಡೆದಿದ್ದ ಗಣತಿ: ಈ ವರ್ಷದ ಮೇ 17ರಿಂದ 19ರವರೆಗೆ ಆನೆಗಣತಿ ನಡೆಸಲಾಗಿತ್ತು. ಕರ್ನಾಟಕ ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲೂ ಇದೇ ಅವಧಿಯಲ್ಲಿ ಆನೆಗಳ ಸಮೀಕ್ಷೆ ನಡೆದಿತ್ತು. 

ಮೂರು ವಿಧಾನಗಳಲ್ಲಿ ಗಣತಿ ಮಾಡಲಾಗಿತ್ತು. ಮೊದಲ ದಿನ ನೇರ ಎಣಿಕೆ, ಬ್ಲಾಕ್‌ ಎಣಿಕೆ ಮಾಡಲಾಗಿತ್ತು. ಎರಡನೇ ದಿನ ಟ್ರಾಂಜೆಕ್ಸ್‌ ಅಥವಾ ಲದ್ದಿ ಎಣಿಕೆ ವಿಧಾನ ಅನುಸರಿಸಿ ಸಮೀಕ್ಷೆ ನಡೆಸಲಾಗಿತ್ತು. ಮೂರನೇ ದಿನ ಜಲಮೂಲಗಳ ಬಳಿ ಇರುವ ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆ ತಾಂತ್ರಿಕ ನೆರವಿನೊಂದಿಗೆ ಆನೆ ಗಣತಿ ನಡೆಸಲಾಗಿದೆ. 

‘ನಮ್ಮ ಬಂಡೀಪುರದಲ್ಲಿ ಹೆಚ್ಚು ಆನೆಗಳು ಕಂಡು ಬಂದಿವೆ. 2017ರಲ್ಲಿ ಸರಾಸರಿ 1,100 ಆನೆಗಳಿದ್ದವು. ಸಮೀಕ್ಷೆ ಲೆಕ್ಕಾಚಾರದಲ್ಲಿ ಕನಿಷ್ಠ 943 ಆನೆಗಳಿಂದ ಗರಿಷ್ಠ 1,1289 ಆನೆಗಳಿರಬಹುದು ಎಂದು ಲೆಕ್ಕಹಾಕಲಾಗಿದ್ದು, ಸರಾಸರಿ ಮಾಡುವಾಗ 1,116 ಆನೆಗಳು ಬರುತ್ತವೆ’ ಎಂದು ಬಂಡೀಪುರ ಹುಲಿ ಯೋಜನಾ ನಿರ್ದೇಶಕ ಪಿ.ರಮೇಶ್‌ಕುಮಾರ್‌ ಹೇಳಿದರು. 

‘ಇದು ರಾಜ್ಯ ಮಟ್ಟದಲ್ಲಿ ನಡೆಸಿದ ಸಮೀಕ್ಷೆ, ರಾಷ್ಟ್ರೀಯ ಮಟ್ಟದಲ್ಲಿ ಎನ್‌ಟಿಸಿಎ ಹುಲಿ ಗಣತಿ ಮಾಡುವಾಗ ಆನೆಗಳ ಸಂಖ್ಯೆಯನ್ನೂ ಲೆಕ್ಕಹಾಕಿದೆ. ಅದರ ವಿವರಗಳನ್ನು ವಿಶ್ವ ಆನೆ ದಿನ (ಆ.12) ಪ್ರಕಟವಾಗಲಿದೆಯೇ ಎಂಬುದು ತಿಳಿದಿಲ್ಲ’ ಎಂದು ರಮೇಶ್‌ ಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪಿ.ರಮೇಶ್‌ಕುಮಾರ್‌
ಪಿ.ರಮೇಶ್‌ಕುಮಾರ್‌

ಗಣತಿ ವರದಿ ಸಂತಸ ತಂದಿದೆ. ಆನೆಗಳ ಸಂಖ್ಯೆ ಹೆಚ್ಚಳವಾಗಿರುವುದು ಆನೆಗಳ ಬೆಳವಣಿಗೆಗೆಗ ಪೂರಕ ವಾತಾವರಣ ಇದೆ ಎಂಬುದನ್ನು ತೋರಿಸುತ್ತದೆ ‍

ಪಿ.ರಮೇಶ್‌ ಕುಮಾರ್‌ ಹುಲಿ ಯೋಜನೆ ನಿರ್ದೇಶಕ

12 ಆನೆಗಳ ಸಾವು

ಜಿಲ್ಲೆಯಲ್ಲಿ ಆನೆಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಅವುಗಳ ಸಾವಿನ ಪ್ರಮಾಣವೂ ಹೆಚ್ಚು. ಜನವರಿಯಿಂದ ಇಲ್ಲಿಯವರೆಗೆ 12 ಆನೆಗಳು ಮೃತಪಟ್ಟಿವೆ.  ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಜೂನ್‌ 6ರವರೆಗೆ ಮಾಹಿತಿ ಇದ್ದು ಏಳು ಆನೆಗಳು ಮೃತಪಟ್ಟಿರುವುದನ್ನು ದಾಖಲಿಸಲಾಗಿದೆ. ಬಂಡೀಪುರದಲ್ಲಿ ಮೃತಪಟ್ಟ ಆನೆಗಳ ವಿವರ ಅಲ್ಲಿಲ್ಲ. ಜನವರಿಯಿಂದ ಈವರೆಗೆ ಬಂಡೀಪುರದಲ್ಲಿ ಐದು ಆನೆಗಳು ಮೃತಪಟ್ಟಿವೆ.  ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳಲ್ಲಿ ತಲಾ ಮೂರು ಬಿಆರ್‌ಟಿಯಲ್ಲಿ ಒಂದು ಆನೆ ಮೃತಪಟ್ಟಿದೆ. ಬಿಆರ್‌ಟಿಯಲ್ಲಿ ವ್ಯಾಪ್ತಿಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಆನೆ ಮೃತಪಟ್ಟಿದ್ದರೆ ಉಳಿದವೆಲ್ಲವೂ ಸಹಜ ಸಾವು ಎಂದು ಉಲ್ಲೇಖಿಸಲಾಗಿದೆ. ‘ಆನೆಗಳ ಸಾವಿನ ಪ್ರಕರಣ ವರದಿಯಾಗಿರುವುದು ನಿಜ. ಜನನ ಪ್ರಮಾಣವೂ ಹೆಚ್ಚಿದೆ. ಬಂಡೀಪುರದಲ್ಲಿ  ಸಾಮಾನ್ಯವಾಗಿ ಪ್ರತಿ ಆನೆ ಹಿಂಡಿನಲ್ಲೂ ಎರಡು ಮೂರು ಮರಿಗಳು ಇರುವುದು ಕಾಣಿಸುತ್ತವೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT