ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಎಲೆಮರೆಕಾಯಿಯಂತಿದ್ದ ಸಮಾಜಸೇವಕ ಹುಚ್ಚೇಗೌಡ: ವೆಂಕಟರಮಣಸ್ವಾಮಿ

ನಿಧನರಾದ ಗಾಂಧಿವಾದಿಯ ಸ್ಮರಣೆ, ಗಾಯಕರಿಂದ ಹಾಡುಗಳ ರಸದೌತಣ, ಸಾಧಕರಿಗೆ ಸನ್ಮಾನ
Published 4 ಫೆಬ್ರುವರಿ 2024, 15:42 IST
Last Updated 4 ಫೆಬ್ರುವರಿ 2024, 15:42 IST
ಅಕ್ಷರ ಗಾತ್ರ

ಚಾಮರಾಜನಗರ: ಗಾಂಧಿವಾದಿ ಸಿ.ಪಿ.ಹುಚ್ಚೇಗೌಡರು ತಮ್ಮ ಕೈಲಾದ ಸಮಾಜ ಸೇವೆಯನ್ನು ಮಾಡಿಕೊಂಡು ಎಲೆಮರೆಕಾಯಿಯಂತೆ ಬದುಕಿದವರು ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಭಾನುವಾರ ಹೇಳಿದರು. 

ಕೊಳ್ಳೇಗಾಲದ ಜೋಗಿ ರಂಗಜೋಳಿಗೆ, ನಗರದ ಈಶ್ವರಿ ಸೋಶಿಯಲ್‌ ಟ್ರಸ್ಟ್‌ ಮತ್ತು ಬೆಂಗಳೂರಿನ ಜನಪದ ಸಿರಿ ಕನ್ನಡ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಇತ್ತೀಚೆಗೆ ನಿಧನರಾದ ಗಾಂಧಿವಾದಿ ಸಿ.ಪಿ.ಹುಚ್ಚೇಗೌಡರ ಸ್ವರಣಾರ್ಥ, ‘ಹೃದಯ ರಾಗ’ ಗಾಯನ–ನುಡಿನಮನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಸರಳರಾಗಿರಿ, ಸುಜನರಾಗಿರಿ ಎಂದು ಹುಚ್ಚೇಗೌಡರು ಯಾವಾಗಲೂ ಹೇಳುತ್ತಿದ್ದರು. ಕೊನೆಯವರೆಗೂ ಅವರು ಅದೇ ರೀತಿ ಬದುಕಿದರು. ಅವರು ನಿರುಪದ್ರವಿ. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಬಿಳಿಗಿರಿರಂಗನಬೆಟ್ಟದಲ್ಲಿ ಡಾ.ಸುದರ್ಶನ್‌ ಅವರ ಸಂಸ್ಥೆಗೆ, ನಗರದಲ್ಲಿ ದೀನಬಂಧು ಸಂಸ್ಥೆಗೆ ಬೆಂಬಲ ನೀಡಿದ್ದರು’ ಎಂದರು. 

‘ಕರಿವರದರಾಜನ ಬೆಟ್ಟಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿದ್ದರು. ಕ್ರೀಡಾ ಚಟುವಟಿಕೆಯಲ್ಲೂ ತೊಡಗಿಕೊಂಡಿದ್ದರು. ಅವರ ಸ್ನೇಹಿತರ ಬಳಗ ದೊಡ್ಡದು’ ಎಂದು ವೆಂಕಟರಮಣಸ್ವಾಮಿ ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ‘ನನ್ನ ಹೈಸ್ಕೂಲ್‌ ದಿನಗಳಿಂದ ಹುಚ್ಚೇಗೌಡರನ್ನು ನೋಡುತ್ತಾ ಬಂದಿದ್ದೇನೆ. ಅವರು ಮೊದಲು ಹೇಗಿದ್ದರೋ, ಅದೇ ರೀತಿ ಕೊನೆಯವರೆಗೂ ಇದ್ದರು. ಸರಳವಾಗಿ ಜೀವನ ನಡೆಸಿದರು’ ಎಂದರು. 

ಹುಚ್ಚೇಗೌಡರ ಸ್ಮರಣೆಯ ನೆಪದಲ್ಲಿ ಎಲ್ಲ ಗಾಯಕರನ್ನು ಒಟ್ಟುಸೇರಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಸಂಗೀತವು ನಮ್ಮ ಮನಸ್ಸನ್ನು, ಮನುಷ್ಯನನ್ನು ಸಮಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ. ನಾವು ಒತ್ತಡ ಅಥವಾ ಬೇಸರದಲ್ಲಿರುವಾಗ ಸಂಗೀತ, ಹಾಡುಗಳನ್ನು ಕೇಳಿದಾಗ ಮನಸ್ಸು ಹಗುರವಾಗುತ್ತದೆ’ ಎಂದರು. 

ಗಾಯಕರಾದ ಮಹೇಂದ್ರ, ರಾಜಣ್ಣ ಸೇರಿದಂತೆ ಹಲವು ಗಾಯಕರು, ಜಾನಪದ ಕಲಾವಿದರು ಗಾಯನ ಪ್ರಸ್ತುತ ಪಡಿಸಿದರು. 

ಮಧ್ಯಾಹ್ನದ ನಂತರ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. 

ಪರಿಸರವಾದಿ ದೊರೆಸ್ವಾಮಿ, ಹೋಟೆಲ್‌ ಉದ್ಯಮಿ ಅಂಕಶೆಟ್ಟಿ, ಜೋಗಿ ರಂಗಜೋಳಿಗೆ ಟ್ರಸ್ಟ್‌ನ ಮುಡಿಗುಂಡ ಮೂರ್ತಿ, ಈಶ್ವರಿ ಚಾರಿಟೆಬಲ್‌ ಟ್ರಸ್ಟ್‌ನ ಸಿ.ಎಂ.ವೆಂಕಟೇಶ್‌, ಸಾಹಿತಿ ಶ್ರೀಧರ್‌ ಇತರರು ಇದ್ದರು. 

Cut-off box - ‘ನಗರ– ಮೆಟ್ಟುಪಾಳ್ಯಂ ರೈಲಿನ ಕನಸು ಕಂಡಿದ್ದರು’ ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ‘ಹುಚ್ಚೇಗೌಡರ ಬದುಕು ಕರಿವರದರಾಜಸ್ವಾಮಿ ಬೆಟ್ಟದಿಂದ ಬಿಳಿಗಿರಿರಂಗನಬೆಟ್ಟದವರೆಗೂ ಹರಡಿತ್ತು. ಎರಡೂ ಸ್ಥಳಗಳ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಸಾಕಷ್ಟಿದೆ. ಅವರೊಬ್ಬ ಸ್ಪರ್ಶ ಮಣಿ ಇದ್ದಂತೆ. ಅವರ ಸಂಪರ್ಕಕ್ಕೆ ಬಂದವರೆಲ್ಲ ‌ಅಭಿವೃದ್ಧಿ ಹೊಂದುತ್ತಿದ್ದರು’ ಎಂದು ಸ್ಮರಿಸಿದರು.  ಡಾ.ಸುದರ್ಶನ್‌ ಪ್ರೊ.ಜಿ.ಎಸ್‌.ಜಯದೇವ ಅವರ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದರು. ಆರಂಭದಿಂದ ಕೊನೆಯವರೆಗೂ ಅವರು ಸರಳವಾಗಿ ಬದುಕಿದರು. ಸೈಕಲ್‌ನಲ್ಲಿ ಸುತ್ತಾಡುತ್ತಿದ್ದರು. ಕಿ.ಮೀ ಗಟ್ಟಲೆ ನಡೆಯುತ್ತಿದ್ದರು’ ಎಂದರು.  ‘ಚಾಮರಾಜನಗರ–ಮೆಟ್ಟುಪಾಳ್ಯಂ ರೈಲು ಮಾರ್ಗ ಆಗಬೇಕು ಎಂಬುದು ಅವರ ಕನಸಾಗಿತ್ತು. ಪ್ರೊ.ಚಿಂತಾಮಣಿಯವರೊಂದಿಗೆ ಮೆಟ್ಟುಪಾಳ್ಯಂವರೆಗೂ ಅರಣ್ಯದಲ್ಲಿ ಸಾಗಿ ಸಮೀಕ್ಷೆ ನಡೆಸಿದ್ದರು. ಈ ರೈಲು ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ ಎಂಬ ಬೇಸರ ಅವರಲ್ಲಿತ್ತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT