ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರಕ್ಕೆ ಭೂಪೇಂದ್ರಯಾದವ್ ಭೇಟಿ: ಕಾಳ್ಗಿಚ್ಚು, ಮಾನವ-ವನ್ಯಜೀವಿ ಸಂಘರ್ಷ ಚರ್ಚೆ

Published 21 ಫೆಬ್ರುವರಿ 2024, 16:31 IST
Last Updated 21 ಫೆಬ್ರುವರಿ 2024, 16:31 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಕಾಳ್ಗಿಚ್ಚು ಎದುರಿಸಲು ಕೈಗೊಂಡಿರುವ ಸಿದ್ದತೆ ಹಾಗೂ ಕಾಡಂಚಿನಲ್ಲಿ ಮಾನವ– ವನ್ಯಜೀವಿ ಸಂಘರ್ಷ ಕುರಿತು ಅರಣ್ಯಧಿಕಾರಿಗಳ ಸಭೆ ನಡೆಸಿದರು.

ಬಂಡೀಪುರ ಅರಣ್ಯದಲ್ಲಿ ಬಿಟ್ಟ ರೇಡಿಯೊ ಕಾಲರ್‌ ಅಳವಡಿಸಿದ್ದ ಆನೆ ವಯನಾಡಿನಲ್ಲಿ ಇತ್ತೀಚೆಗೆ ದಾಂಧಲೆ ನಡೆಸಿರುವ ಘಟನೆಯ ಬಗ್ಗೆಯೂ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

ಸಭೆಯಲ್ಲಿ ಮಾತನಾಡಿದ ಸಚಿವರು, ‘ಕಾಡು ಪ್ರಾಣಿಗಳಿಗೆ ಕರ್ನಾಟಕ, ಕೇರಳ, ತಮಿಳುನಾಡು ಎಂಬ ಗಡಿ ಇರುವುದಿಲ್ಲ. ಆನೆಗಳನ್ನು ‌ಯಾವ ಪ್ರದೇಶದಲ್ಲಿ ಬಿಟ್ಟಿದ್ಧೇವೆ ಎಂಬುದನ್ನು ಪರಿಗಣಿಸದೆ ವನ್ಯ ಪ್ರಾಣಿಗಳನ್ನು ರಕ್ಷಿಸುವ ಕೆಲಸವನ್ನು ಅರಣ್ಯ ಅಧಿಕಾರಿಗಳು ಮಾಡಬೇಕು. ವನ್ಯಜೀವಿಗಳು ಅರಣ್ಯದಿಂದ ನಾಡಿನತ್ತ ಬರದಂತೆ ರೈಲ್ವೆ ‌ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಬೇಕು’ ಎಂದು ಸೂಚಿಸಿದರು.

‘ಬೇಸಿಗೆ ಇರುವುದರಿಂದ ಕಾಡಿಗೆ ಬೆಂಕಿ ಬೀಳದಂತೆ ಮಾಡಲು ಸ್ಥಳೀಯ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆ ಮತ್ತು ಜಾನುವಾರುಗಳಿಗೆ ತೊಂದರೆಯಾದರೆ, ಶೀಘ್ರವಾಗಿ ಸ್ಪಂದಿಸಿ ಪರಿಹಾರ ನೀಡಬೇಕು’ ಎಂದರು.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾತನಾಡಿ, ‘ಬಂಡೀಪುರ ಅಭಯಾರಣ್ಯವು ಹುಲಿ ಸಂತತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಆನೆ ಗಣತಿಯಲ್ಲಿ ಮೊದಲ ಸ್ಥಾನ ಲಭಿಸಿದೆ. ಜೊತೆಗೆ ಯುವಮಿತ್ರ, ರೈತ ಮಿತ್ರ ಸೇರಿದಂತೆ ಇನ್ನಿತರ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

ಕಾಡಂಚಿನಲ್ಲಿ ವಾಸಿಸುವ ಬುಡಕಟ್ಟು ಜನರೊಂದಿಗೆ ಸಭೆ ನಡೆಸಿ, ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು.

ಪಿಸಿಸಿಎಫ್ ಸುಭಾಷ್ ಮಾಲ್ಕಡೆ, ಮೈಸೂರು ವೃತ್ತದ ಸಿಸಿಎಫ್‌ ಮಾಲತಿಪ್ರಿಯಾ, ಅರಣ್ಯ ಇಲಾಖೆಯ ಎಡಿಜಿಪಿ ಯಾದವ್, ಜಿತೇಂದ್ರ ಸಿಂಗ್, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ವಯನಾಡಿಗೆ ಭೇಟಿ: ಸಭೆಯ ಬಳಿಕ ಸಚಿವ ಭೂಪೇಂದ್ರ ಯಾದವ್‌ ಅವರು ಕೇರಳದ ವಯನಾಡಿಗೆ ಭೇಟಿ ನೀಡಿ ಇತ್ತೀಚೆಗೆ ರೇಡಿಯೊ ಕಾಲರ್ ಅಳವಡಿಸಿದ ಆನೆ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT