ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೇರಿ: ನದಿಯಲ್ಲಿ ಅಕ್ರಮ ಮೀನುಗಾರಿಕೆ

ರಾತ್ರಿ ಹೊತ್ತು ಅರಣ್ಯ ಪ್ರವೇಶಿಸಿ, ಮೀನು ಹಿಡಿಯುವ ಮೀನುಗಾರರು
Published 12 ಜನವರಿ 2024, 5:28 IST
Last Updated 12 ಜನವರಿ 2024, 5:28 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿಯಲ್ಲಿ ರಾತ್ರಿ ಹೊತ್ತು ಅಕ್ರಮವಾಗಿ ಮೀನುಗಾರಿಕೆ ನಡೆಸಲಾಗುತ್ತಿದೆ.

ಈ ಪ್ರದೇಶ ಮಲೆ ಮಹದೇಶ್ವರ ವನ್ಯಧಾಮದ ಬಫರ್‌ ವಲಯಕ್ಕೆ ಬರುತ್ತದೆ. ಮೀನುಗಾರಿಕೆ ನಡೆಯುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿದದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಾರೆ ಸಾರ್ವಜನಿಕರು.

ಸಂರಕ್ಷಿತ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸುವುದು ಅಪರಾಧ. ಜಾನುವಾರುಗಳು ಒಂದು ವೇಳೆ ಅರಣ್ಯದೊಳಗೆ ಪ್ರವೇಶ ಮಾಡಿ ಮೇಯುತಿದ್ದರೂ ಅವುಗಳ ಮಾಲೀಕರನ್ನು ಕರೆದು ಬುದ್ಧಿವಾದ ಹೇಳುವ ಅಧಿಕಾರಿಗಳು ದಂಡ ಹಾಕುತ್ತಾರೆ. ಆದರೆ ಮೀನುಗಾರಿಕೆ ನಡೆಸುತ್ತಿರುವವರಿಗೆ ದಂಡವನ್ನಾಗಲಿ ಅಥವಾ ಶಿಕ್ಷೆಯಾಗಲಿ ನೀಡುತ್ತಿಲ್ಲ’ ಎಂದು ಜಾಗೇರಿ ಗ್ರಾಮದ ಮೇರಿ ಆರೋಪಿಸಿದರು.

ಜಾಗೇರಿ ಅರಣ್ಯ ಪ್ರದೇಶದಲ್ಲಿ ಬೆಟ್ಟ ಗುಡ್ಡಗಳ ನಡುವೆ ಕಾವೇರಿ ನದಿ ಹರಿಯುತ್ತದೆ. ಈ ಭಾಗದ ದೊಡ್ಡ ಮಾಕಳಿ, ಶೆಲ್ವೈಪುರ ಸೇರಿದಂತೆ ಅರಣ್ಯದಂಚಿನ ಭಾಗದಲ್ಲಿರುವ ಮೀನುಗಾರಿಕೆ ನಡೆಸುವವರು ರಾತ್ರಿ ಆಗುವುದನ್ನೇ ಕಾಯುತ್ತಾ ಕುಳಿತಿರುತ್ತಾರೆ. ಕತ್ತಲೆ ಆವರಿಸುತ್ತಿದ್ದಂತೆಯೇ ಹಲವು ತಂಡಗಳನ್ನು ಕಟ್ಟಿಕೊಂಡು ಕಾಡಿನೊಳಗೆ ಪ್ರವೇಶ ಮಾಡಿ ನದಿಯಲ್ಲಿ ಮೀನಿಗೆ ಬಲೆ ಹಾಕುತ್ತಾರೆ. ಅಡುಗೆಯನ್ನು ಅಲ್ಲೇ ತಯಾರಿಸಿ, ನದಿಯ ದಡದಲ್ಲೇ ಮಲಗಿ ಬೆಳಗಿನ ಜಾವ ನದಿಗಿಳಿದು ಬಲೆಯಲ್ಲಿ ಮೀನುಗಳನ್ನು ಹಿಡಿದು ಚೀಲಗಳಿಗೆ ತುಂಬಿಕೊಳ್ಳುತ್ತಾರೆ. ಸೂರ್ಯ ಉದಯಿಸುವುದಕ್ಕೆ ಮುನ್ನ ಗ್ರಾಮಗಳಿಗೆ ವಾಪಸ್‌ ಆಗುತ್ತಾರೆ. 

ಬೆಳಿಗ್ಗೆ ಸತ್ತೇಗಾಲ ಹ್ಯಾಂಡ್ ಪೋಸ್ಟ್‌ಗೆ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಕೆಲವರು ನದಿಯಲ್ಲಿ ಮೀನು ಹಿಡಿಯಲು ತೆಪ್ಪಗಳನ್ನೂ ಬಳಸುತ್ತಿದ್ದಾರೆ. ಬಳಿಕ ತೆಪ್ಪಗಳನ್ನು ಕಾಡಿನಲ್ಲಿ ಬಚ್ಚಿಡುತ್ತಿದ್ದಾರೆ.

‘ದಿನಕ್ಕೆ ಕನಿಷ್ಠ 300 ರಿಂದ 400 ಕೆಜಿಗಳಷ್ಟು ಮೀನನ್ನು ಮಾರಾಟ ಮಾಡುತ್ತಾರೆ. ಕೆರೆಗಳ ಮೀನುಗಳನ್ನು ಹಿಡಿದು ತರುತ್ತಾರೆ. ಇದೆಲ್ಲವೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾರು ಗಮನ ಹರಿಸುತ್ತಿಲ್ಲ. ಇಲಾಖೆ ಅಧಿಕಾರಿಗಳೇ ಶಾಮೀಲಾಗಿರುವ ಅನುಮಾನ ಇದೆ’ ಎಂದು ಹೇಳುತ್ತಾರೆ ಗ್ರಾಮಸ್ಥರು.

ಕಾಡಿನಲ್ಲಿ ಚಾರಣ

ಈ ಭಾಗದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಹೊರಗಿನವರು ಭಾನುವಾರ ಸೇರಿದಂತೆ ರಜಾದಿನಗಳಲ್ಲಿ ಚಾರಣ ನಡೆಸುತ್ತಿದ್ದಾರೆ. ಇದರಿಂದ ಕಾಡು ಪ್ರಾಣಿಗಳಿಗೆ ತೊಂದರೆ ಉಂಟಾಗುತ್ತಿದೆ. ‘ಕಾಡಿನೊಳಗೆ ಪ್ರವೇಶ ಮಾಡುವುದಲ್ಲದೆ ಕೆಲವರು ಮದ್ಯ ಸೇವನೆ ಸೇರಿದಂತೆ ಮೋಜು ಮಸ್ತಿಗಳನ್ನು ಮಾಡುತ್ತಿದ್ದಾರೆ. ಇದರಿಂದ ಪ್ರಾಣಿಗಳು ಗ್ರಾಮಕ್ಕೆ ಬಂದು ಬೆಳೆಗಳನ್ನು ನಾಶ ಮಾಡುತ್ತಿವೆ. ಮೀನುಗಾರಿಕೆ ಜೊತೆಗೆ ಅನೇಕ ಪ್ರಾಣಿಗಳನ್ನೂ ಹತ್ಯೆ ಮಾಡಿ ಅವುಗಳ ಮಾಂಸಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕು’ ಎಂದು ಪರಿಸರ ಪ್ರೇಮಿ ಮನೋಜ್ ಕುಮಾರ್ ಒತ್ತಾಯಿಸಿದರು.

ಮೀನುಗಾರರ ವಿರುದ್ಧ ಕ್ರಮ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ‘ಅಕ್ರಮವಾಗಿ ಕಾಡಿನೊಳಗೆ ಪ್ರವೇಶ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾಡಿನೊಳಗೆ ಪ್ರವೇಶ ಮಾಡಿ ಮೀನುಗಾರಿಕೆ ಮಾಡುವಂತಿಲ್ಲ. ಈಗಾಗಲೇ ಮೀನುಗಾರರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿದ್ದೇವೆ. ಸಿಬ್ಬಂದಿ ಕೊರತೆಯಿಂದಾಗಿ ಇಂತಹ ಘಟನೆಗಳು ನಡೆಯುತ್ತಿರಬಹುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT