ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಎಂ.ಸ್ಯಾಂಡ್‌, ಜಲ್ಲಿ ಅಕ್ರಮ ಸಾಗಾಟ

ರಾಜಧನ ವಂಚನೆ, ಮಿತಿಗಿಂದ ಅಧಿಕ ಭಾರ ಸಾಗಣೆ
Published 27 ಫೆಬ್ರುವರಿ 2024, 14:07 IST
Last Updated 27 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಕ್ರಶರ್‌ಗಳಿಂದ ರಾತ್ರಿ ವೇಳೆ ನಿಯಮಗಳನ್ನು ಉಲ್ಲಂಘಿಸಿ ಕೇರಳದ ಕಡೆಗೆ ಟಿಪ್ಪರ್‌ಗಳಲ್ಲಿ  ಎಂ.ಸ್ಯಾಂಡ್, ಜಲ್ಲಿ ಸಾಗಣೆಯಾಗುತ್ತಿದೆ. ಇದು ಅಧಿಕಾರಿಗಳ ಗಮನಕ್ಕೆ ಬಂದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಂಘಟನೆಗಳು ದೂರಿವೆ. 

ಪಟ್ಟಣದ ಹೊರ ವಲಯದಲ್ಲಿರುವ ಕ್ರಷರ್‌ಗಳಿಂದ ಪ್ರತಿನಿತ್ಯ ಹತ್ತಾರು ಟಿಪ್ಪರ್‌ಗಳಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ಸಾಗಣೆಯಾಗುತ್ತಿದೆ.  

ಗಡಿ ಭಾಗದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಲಾಭವನ್ನು ಅಧಿಕಾರಿಗಳು ಅನುಭವಿಸುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. 

‘ಕೇರಳಕ್ಕೆ ಸಂಜೆ ಮತ್ತು ರಾತ್ರಿ ವೇಳೆ ಎಂ.ಸ್ಯಾಂಡ್ ತುಂಬಿದ ಟಿಪ್ಪರ್‌ಗಳು ಸಂಚರಿಸುತ್ತಿದ್ದು, ಸಿಬ್ಬಂದಿ ದಾಖಲೆಗಳನ್ನು ಕೇಳುತ್ತಿಲ್ಲ. ತಪಾಸಣೆಯನ್ನೂ ಮಾಡುತ್ತಿಲ್ಲ. ಒಂದು ಲಾರಿ ಲೋಡಿಗೆ ರಾಜಧನ ನೀಡಿ (ರಾಯಲ್ಟಿ) ಹತ್ತಾರು ಲಾರಿಗಳು ಸಂಚರಿಸುತ್ತಿವೆ. ಕಡಿಮೆ ತೂಕಕ್ಕೆ ರಾಯಧನಿ ನೀಡಿ, ಅದರ ದುಪ್ಪಟ್ಟು ಭಾರದ ಎಂ.ಸ್ಯಾಂಡ್‌, ಜಲ್ಲಿ ಸಾಗಿಸಲಾಗುತ್ತಿದೆ’ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಮಾಡ್ರಹಳ್ಳಿ ಮಹೇಶ್ ದೂರಿದರು. 

ಅಧಿಕಾರಿಗಳ ಸಹಕಾರ- ಆರೋಪ:

‘ಪ್ರತಿ ನಿತ್ಯ ಕತ್ತಲಾಗುತ್ತಿದ್ದಂತೆ ಕೇರಳ ಉದ್ಯಮಿಗಳು ಗುಂಡ್ಲುಪೇಟೆಯಿಂದ ಟನ್ ಗಟ್ಟಲೆ ಎಂ.ಸ್ಯಾಂಡ್ ಸಾಗಣ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕೆಲ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಎಂ.ಸ್ಯಾಂಡ್ ಮತ್ತು ಬಿಳಿಕಲ್ಲು ಸಾಗಣೆ ಮಾಫಿಯವಾಗಿ ಮಾರ್ಪಾಡಾಗುತ್ತಿದೆ’ ಎಂದು ಅವರು ಆರೋಪಿಸಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪದ್ಮಜಾ, ‘ಪರವಾನಗಿ ಇಲ್ಲದೆ ಕೇರಳಕ್ಕೆ ಎಂ.ಸ್ಯಾಂಡ್ ತುಂಬಿಕೊಂಡು ತೆರಳುವ ಟಿಪ್ಪರ್ ಲಾರಿಗಳನ್ನು ತಪಾಸಣೆ ನಡೆಸಲಾಗುವುದು.  ಅಕ್ರಮ ಕಂಡು ಬಂದರೆ ಲಾರಿಗಳನ್ನು ಜಪ್ತಿ ಮಾಡುವುದರ ಜೊತೆಗೆ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು. 

ಎಗ್ಗಿಲ್ಲದೆ ಬಿಳಿಕಲ್ಲು ಸಾಗಣೆ

ಗುಂಡ್ಲುಪೇಟೆಯಿಂದ ಕೇರಳಕ್ಕೆ ಎಂ.ಸ್ಯಾಂಡ್ ಜೊತೆಗೆ ಬಿಳಿಕಲ್ಲು ಕೂಡ ಹಗಲು-ರಾತ್ರಿ ಎನ್ನದೆ ಎಗ್ಗಿಲ್ಲದೆ ಸಾಗಣೆಯಾಗುತ್ತಿದೆ. ಒಂದಕ್ಕೆ ಪರವಾನಗಿ ತೆಗೆದುಕೊಂಡು ಅಧಿಕ ಲಾರಿ ಸಂಚಾರ ಮಾಡುತ್ತಿವೆ. ಇದರಿಂದ ತಾಲ್ಲೂಕಿನ ಖನಿಜ ಸಂಪತ್ತು ಅನ್ಯರಾಜ್ಯದ ಪಾಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವೂ ಆಗುತ್ತಿದೆ. ಗಣಿಗಾರಿಕೆ ಇಲಾಖೆ ಅಧಿಕಾರಿಗಳು ತಕ್ಷಣಕ್ಕೆ ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮಹೇಶ್‌ ಎಚ್ಚರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT