ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸ್ವಾತಂತ್ರ್ಯ ಸೇನಾನಿಗಳಿಗೆ ನಮನ

Last Updated 15 ಆಗಸ್ಟ್ 2022, 16:55 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ 76ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಶಾಲಾ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸಹಕಾರ ಸಂಘಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಹಲವು ಕಡೆಗಳಲ್ಲಿ ನಡೆದಕಾರ್ಯಕ್ರಮಗಳಲ್ಲಿ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಗಣ್ಯರು, ಧ್ವಜಾರೋಹಣ ನೆರವೇರಿಸಿದರು.

ಸ್ನಾತಕೋತ್ತರ ಕೇಂದ್ರ: ನಗರದ ಹೊರವಲಯದ ಯಡಪುರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಮಾತನಾಡಿ,‌ ‘ನಮ್ಮ ದೇಶಕ್ಕೆ ಭೌಗೋಳಿಕವಾಗಿ ಮತ್ತು ಬ್ರಿಟಿಷರ ರಾಜಕೀಯ ನೀತಿಗಳಿಂದ ಸ್ವಾತಂತ್ರ್ಯ ಸಿಕ್ಕಿದರೂ ವ್ಯಕ್ತಿಗತವಾದ ಸ್ವಾತಂತ್ರ್ಯ, ದೇಶದ ಅಭಿವೃದ್ದಿಯ ಸ್ವಾತಂತ್ರ್ಯ ಸಿಕ್ಕಿಲ್ಲ. ಅಂಬೇಡ್ಕರ್ ಬಯಸಿದ ಸಹೋದರತೆ, ಸಮಾನತೆಯ ಸ್ವಾತಂತ್ರ್ಯ ನಮಗೆ ಬೇಕಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೊಷಣೆ ಘೋಷಣೆಯಾಗಿಯೇ ಉಳಿದುಕೊಂಡಿದೆ’ ಎಂದರು.

ಕೇಂದ್ರದ ನಿರ್ದೇಶಕ ಪ್ರೊ. ಆರ್.ಮಹೇಶ್. ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಪ್ರದೀಪ್ ಕುಮಾರ್ ದೀಕ್ಷಿತ್‌ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ನೆಲೆಗಳನ್ನು ಕುರಿತು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶಶಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿಲಾಯಿತು.

ಈಶ್ವರೀಯ ವಿವಿ: ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಸಂಚಾಲಕಿ ದಾನೇಶ್ವರಿ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ನಾರಾಯಣ ಶೆಟ್ಟಿ, ಪುಟ್ಟಶೇಖರಮೂರ್ತಿ, ಲಕ್ಷ್ಮೀನರಸಿಂಹ, ಪ್ರಸಾದ್, ಮಹೇಶ್, ಗೋವಿಂದ ರಾಜು‌‌‌, ಗುರುಸಿದ್ದಯ್ಯ, ಲಕ್ಷ್ಮಮ್ಮ, ಆಶಾ, ಶಿವಕಮಲ, ಸರಳ, ರತ್ನಮ್ಮ ಇದ್ದರು.

ಹರವೆ: ತಾಲ್ಲೂಕಿನ ಹರವೆ ಗ್ರಾಮದಲ್ಲಿರುವ ಶ್ರೀ ಚೆನ್ನಬಸವೇಶ್ವರ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸರ್ಪಭೂಷಣ ಸ್ವಾಮೀಜಿ ಅವರು ಧ್ವಜಾರೋಹಣ ನಡೆಸಿದರು.

ಸಂಸ್ಕೃತ ವೇದ ಪಾಠಶಾಲೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಅಂಕಪಟ್ಟಿ ವಿತರಣೆ, ವಲಯ ಮಟ್ಟದ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ನಾಗೇಂದ್ರ ಮಲೆಯೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಭೇಂದ್ರಪ್ಪ, ಪಿಡಿಒ ಮಲ್ಲಿಕಾರ್ಜುನ, ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕರಾದ ನಂಜುಂಡಪ್ಪ, ಬಸವಣ್ಣ, ಮಾದಪ್ಪ, ಬಸಮ್ಮಣ್ಣಿ ಹಾಗೂ ಶಾಲಾ ಮುಖ್ಯಶಿಕ್ಷಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು, ಹರವೆ ಗ್ರಾಮ ಮುಖಂಡರು ಉಪಸ್ಥಿತರಿದ್ದರು.

ಹೊಮ್ಮ: ಹರದನಹಳ್ಳಿಯ ಕೃಷಿ ಮಹಾವಿದ್ಯಾಲಯದ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ‘ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಅಂಗವಾಗಿ ತಾಲ್ಲೂಕಿನ ಹೊಮ್ಮ ಶಾಲಾ ಆವರಣದಲ್ಲಿ ಸೋಮವಾರ ಸ್ವಾತಂತ್ರ್ಯೋತ್ಸವ ನಡೆಯಿತು.

ರೈತರಲ್ಲಿ ಸ್ವಾತಂತ್ರ್ಯ ಮತ್ತು ದೇಶದ ಬೆಳವಣಿಗೆಯಲ್ಲಿ ರೈತರ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿದರು.

‘ಕೃಷಿಯನ್ನು ತಾಂತ್ರಿಕವಾಗಿ ಅಭ್ಯಸಿಸುತ್ತಿರುವ ನಾವು ರೈತರಿಂದ ಕಲಿಯಲು ಮತ್ತು ರೈತರ ಸಮಗ್ರ ಅಭಿವೃದ್ದಿಗಾಗಿ ಕಂಕಣಬದ್ಧರಾಗಿದ್ದೇವೆ’ ಎಂದು ಹೇಳಿದರು. ತದನಂತರ ಗೋಣ್ಣೆ ಹುಳುಗಳ ಬಾಧೆಗೆ ಒಳಗಾದ ಕಬ್ಬು ಬೆಳೆಗಾರರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಸಮಗ್ರ ನಿರ್ವಹಣಾ ಮಾಹಿತಿ ಒದಗಿಸಿದರು. ಶಾಲೆಯ ಬೋಧಕರು, ವಿದ್ಯಾರ್ಥಿಗಳು ಊರ ಮುಖಂಡರು ಇದ್ದರು.

ಚಾಮರಾಜನಗರ ಜೆಎಸ್‌ಎಸ್‌ ಮಹಿಳಾ ಕಾಲೇಜು, ಶ್ರೀರಾಮಚಂದ್ರ ವಿದ್ಯಾಸಂಸ್ಥೆ, ಸಂತ ಜೋಸೆಫ್‌ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಕೆರೆಯಂಗಳದಲ್ಲಿ ಹಾರಾಡಿದ ಬಾವುಟ

ಅಮೃತ ಸರೋವರ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾದ ಕೆರೆಗಳ ಅಂಗಳ, ಪರಿಸರದಲ್ಲಿ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳ 15 ಕೆರೆಗಳ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ, ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಬೆಟ್ಟದ ಮಹದೇಶ್ವರ ದೇವಾಲಯದ ಬಳಿಯ ಕೆರೆಯಂಗಳದಲ್ಲಿ ಯೋಧ ಉತ್ತವಳ್ಳಿ ಗ್ರಾಮದ ಸಿದ್ದರಾಮೇಶ್ ಅವರು ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಮಾತನಾಡಿ, ‘ಈಗಾಗಲೇ ಕೆರೆಯಂಗಳದಲ್ಲಿ ಒಳಾಂಗಣ ಕಾಮಗಾರಿ, ಗಿಡನೆಡುವುದು, ಕಾಲುವೆ ಅಭಿವೃದ್ಧಿ, ಧ್ವಜಸ್ತಂಭ ನಾಮಫಲಕ ಅಳವಡಿಸುವ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಪಾದಚಾರಿ ಮಾರ್ಗ, ಮೆಟ್ಟಿಲು, ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಪೈಪ್ ಅಳವಡಿಕೆ ಕಾಮಗಾರಿ ನಡೆಯಲಿದೆ’ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನತಾಯಮ್ಮ, ಉಪಾ಼ಧ್ಯಕ್ಷ ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಪೂರ್ಣಿಮಾ, ಸಹಾಯಕ ನಿರ್ದೇಶಕ ಪ್ರಕಾಶ್‌ ಕುಮಾರ್, ಪಿಡಿಒ ರವಿ, ಕಾರ್ಯದರ್ಶಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT