ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಮತ್ತೆ ಅಂತರಜಿಲ್ಲೆ ಚೆಕ್‌ಪೋಸ್ಟ್‌

ಜನರ ಸಂಚಾರ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮ, ನೋಡೆಲ್‌ ಅಧಿಕಾರಿಗಳ ನೇಮಕ
Last Updated 30 ಜೂನ್ 2020, 9:36 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಣಕ್ಕಾಗಿ ಅಂತರ ಜಿಲ್ಲೆ ಹಾಗೂ ಅಂತರರಾಜ್ಯ ನಡುವೆ ಜನರ ಸಂಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಮತ್ತೆ ಅಂತರ ಜಿಲ್ಲೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್ ‌ಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಿಗಿಗೊಳಿಸಲು ತೀರ್ಮಾನಿಸಲಾಗಿತ್ತು.

ಈಗ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿರುವ ಹೆಚ್ಚಿನ ಜನರು ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಕ್ಕೆ ಹೋಗಿ ಬಂದವರು. ಈ ಕಾರಣದಿಂದ ಓಡಾಟವನ್ನು ನಿಯಂತ್ರಿಸಬೇಕು. ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿತ್ತು.

ಅದರಂತೆ ಜಿಲ್ಲೆಯಲ್ಲಿ, ಆರು ಅಂತರಜಿಲ್ಲೆ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಎಲ್ಲ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದ್ದಾರೆ. ಅಂತರರಾಜ್ಯ ಚೆಕ್‌ಪೋಸ್ಟ್‌ಗಳು ಈಗಾಗಲೇ ಇದ್ದು, ಅಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಅಲ್ಲದೇ ಎಲ್ಲ ಚೆಕ್‌ಪೋಸ್ಟ್‌ಗಳಿಗೆ ನೋಡೆಲ್‌ ಅಧಿಕಾರಿಗಳನ್ನೂ ನೇಮಿಸಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ವಾಟರ್‌ಪ್ರೂಪ್ ಟೆಂಟ್, ಶಾಮಿಯಾನ ಅಳವಡಿಸಿ ಪೋಲೀಸ್‌, ಹೋಂ ಗಾರ್ಡ್ಸ್‌ಗಳನ್ನು ನಿಯೋಜಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೂಕ್ತ ಸಿಬ್ಬಂದಿ ವ್ಯವಸ್ಥೆಯನ್ನು ಕಲ್ಪಿಸಿ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಚೆಕ್‌ಪೋಸ್ಟ್‌ಗಳ ಸಂಚರಿಸುವವರ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ದಾಖಲೆಗಳನ್ನು ಪರಿಶೀಲಿಸಿ, ಸಂಚಾರದ ಕಾರಣ ಕೇಳಿ ಬಿಡಲಾಗುತ್ತದೆ.

ನೋಡೆಲ್‌ ಅಧಿಕಾರಿಗಳು:ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿ, ಪುಣಜನೂರು ಚೆಕ್‌ಪೋಸ್ಟ್‌ಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸುರೇಂದ್ರ (ಮೊ: 9449821499),ಗುಂಡ್ಲುಪೇಟೆ ತಾಲ್ಲೂಕಿನ ಹೀರೆಕಾಟಿ (ಬೇಗೂರು) ಮದ್ದೂರು (ಮೂಲೆಹೊಳೆ) ಮೇಲುಕಾಮನಹಳ್ಳಿ (ಕೆಕ್ಕನಹಳ್ಳ) ಕುರುಬರಹುಂಡಿ ಚೆಕ್‌ಪೋಸ್ಟ್‌ಗೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಬಾಲಕೃಷ್ಣ (ಮೊ: 9448562330), ಹನೂರು ತಾಲ್ಲೂಕಿನ ಪಾಲಾರ್, (ಮೆಟ್ಟೂರು ರಸ್ತೆ) ನಾಲ್ ರೋಡ್, ಅರ್ಧನಾರಿಪುರ (ಒಡೆಯರಪಾಳ್ಯ) ಚೆಕ್ ಪೋಸ್ಟ್‌ಗೆ ಕೆ.ಆರ್.ಡಿ.ಎಲ್. ಕಾರ್ಯಪಾಲಕ ಎಂಜಿನಿಯರ್‌ ಸುಂದರೇಶ್ ಮೂರ್ತಿ (ಮೊ: 9449863071, 903661960) ಮತ್ತು ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ, ಬಾನಳ್ಳಿ (ಮೂಗೂರು ಗಡಿ) ಟಗರಪುರ ಚೆಕ್ ಪೋಸ್ಟ್‌ಗೆ ಕಾವೇರಿ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್‌ ರಘು (ಮೊ: 9480858124) ಅವರು ನೋಡೆಲ್ ಅಧಿಕಾರಿಯಾಗಿದ್ದಾರೆ.

ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಕಡ್ಡಾಯ

ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲೇ ವಾಸ್ತವ್ಯ ಹೂಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಮೈಸೂರು ಜಿಲ್ಲೆಯಿಂದ ಪ್ರತಿನಿತ್ಯ ಓಡಾಡುತ್ತಿರುವುದು ಕಂಡುಬಂದಿರುತ್ತದೆ. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ತುರ್ತು ಕೆಲಸಗಳನ್ನು ನಿರ್ವಹಿಸಬೇಕಿದೆ.

ಅಧಿಕಾರಿ, ನೌಕರರು ಹೊರಜಿಲ್ಲೆಗಳಿಂದ ಓಡಾಟ ನಡೆಸುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಧಿಕಾರಿಗಳು ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲೇ ವಾಸ್ತವ್ಯ ಹೂಡಬೇಕು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT