ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದೊಂದಿಗೆ ಕೌಶಲ ಕಲಿಯಲು ಒತ್ತು ನೀಡಿ: ಎಸ್‌ಪಿ ಸಲಹೆ

ಜೆಎಸ್‌ಎಸ್‌ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
Last Updated 10 ಮಾರ್ಚ್ 2021, 15:29 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಿಳೆಯರು ಶಿಕ್ಷಣದ ಜೊತೆಗೆ ಜೀವನ ಮುನ್ನಡೆಸಲು ಬೇಕಾದಂತಹ ನೈಪುಣ್ಯಗಳನ್ನು ಕಲಿಯುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಬುಧವಾರ ಹೇಳಿದರು.‌

ನಗರದಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಸಮಿತಿ, ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ ಘಟಕ ಮತ್ತು ಹಿರಿಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನೆಗಳಲ್ಲಿ ಅಡುಗೆ ಮಾಡುವುದು ಒಂದು ಕೌಶಲ. ಹಾಗೆಯೇ ವಾಹನ ಚಾಲನೆ ಮಾಡುವುದು ಒಂದು ಕೌಶಲ. ಎಷ್ಟೋ ಮಹಿಳೆಯರಿಗೆ ವಾಹನ ಚಲಾಯಿಸುವುದು, ಅಡುಗೆ ಮಾಡುವುದು ಬರುವುದಿಲ್ಲ. ಇದರಿಂದ ಕೆಲವು ಸಂದರ್ಭಗಳಲ್ಲಿ ತೊಂದರೆಯಾಗುತ್ತದೆ. ಓದು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗಬಾರದು. ಜೀವನದಲ್ಲಿ ಉಪಯೋಗಕ್ಕೆ ಬರಬೇಕು. ಹಾಗಾಗಿಶಿಕ್ಷಣಕ್ಕೆ ಮಹತ್ವ ನೀಡುವಷ್ಟೇ ಇಂತಹ ವಿವಿಧ ಕೌಶಲಗಳ ಕಲಿಕೆಗೂ ಮಹತ್ವ ನೀಡಬೇಕು’ ಎಂದರು. ‌

‘ಮಹಿಳೆಯರ ವಿರುದ್ಧ ನಡೆಯುವ ಘಟನೆಗಳಿಗೆ ಸಮಾಜದಲ್ಲಿ ಪ್ರೋತ್ಸಾಹ ಸಿಗುತ್ತಿರುವುದು ದುರದೃಷ್ಟಕರ. ಇದಕ್ಕೆ ಪ್ರತಿಯೊಬ್ಬರೂ ಉತ್ತರಿಸುವ ಅಗತ್ಯವಿದೆ. ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಮೂವರು ಮಹಿಳಾ ಅಧಿಕಾರಿಗಳಿದ್ದಾರೆ.ಮಹಿಳೆಯರಿಗೆ ಯಾವುದೇ ಕಿರುಕುಳ ತೊಂದರೆ ಆದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಬಂದು ತಿಳಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗಿದೆ. 18 ವರ್ಷದೊಳಗೆ ಮದುವೆ ಮಾಡಿಕೊಳ್ಳಬಾರದು. ಸಮಾಜದಲ್ಲಿ ಹೆಣ್ಣು ಮಕ್ಕಳ ಪಾತ್ರ ಇನ್ನಷ್ಟು ಪ್ರಬಲವಾಗಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ರ‍್ಯಾಗಿಂಗ್, ಆ್ಯಸಿಡ್‌ ಎರಚುವುದು ಸೇರಿದಂತೆ ಇತರೆ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕಿದೆ’ ಎಂದು ತಿಳಿಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಜಿಲ್ಲಾಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಸಿ.ವಿ.ಸ್ವಾತಿ ನಾಯಕ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಛಲ ಇದ್ದರೆ ಏನಾದರೂ ಸಾಧಿಸಬಹುದು. ಜೀವನದಲ್ಲಿ ಶಿಕ್ಷಣ ಮುಖ್ಯವಾಗಿದ್ದು ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೊರಗಿನ ಆಕರ್ಷಣೆಗೆ ಒಳಗಾಗಬಾರದು’ ಎಂದರು. ‌

ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಛಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಅವರು ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಹೆಣ್ಣು ಒಂದು ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರು ಪುರುಷನಷ್ಟೇ ಸಮರ್ಥಳಾಗಿದ್ದಾಳೆ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಮರಿಸ್ವಾಮಿ, ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಮಹಾಲಿಂಗಪ್ಪ, ಉಪನ್ಯಾಸಕಿ ಅರುಣಾಶ್ರೀ, ಶುಭಾ, ನಗರಸಭಾ ಸದಸ್ಯೆ ಚಿನ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT