ಶುಕ್ರವಾರ, ಡಿಸೆಂಬರ್ 4, 2020
23 °C
ನೀಲಗಿರಿ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ನಡುವೆ ಪ್ರಯಾಣ ಸರಾಗ, ಕೇರಳಕ್ಕೆ ಕಡಿಮೆ ಬಸ್‌ಗಳು

ಗುಂಡ್ಲುಪೇಟೆ: ಅಂತರರಾಜ್ಯ ಬಸ್‌ ಸಂಚಾರ ಆರಂಭ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಗುಂಡ್ಲುಪೇಟೆ: ಕೋವಿಡ್‌ ಲಾಕ್‌ಡೌನ್‌ ನಂತರ ಜಿಲ್ಲೆಯಿಂದ ಸ್ಥಗಿತಗೊಂಡಿದ್ದ ಅಂತರರಾಜ್ಯ ಬಸ್‌ಗಳ ಸಂಚಾರ ಎರಡು ದಿನಗಳ ಹಿಂದೆ ಆರಂಭವಾಗಿದ್ದು, ಜಿಲ್ಲೆಯಿಂದ ತಮಿಳುನಾಡಿಗೆ ಬಸ್‌ಗಳು ಸಂಚರಿಸುತ್ತಿವೆ. ತಮಿಳುನಾಡಿನಿಂದಲೂ ಜಿಲ್ಲೆ ಹಾಗೂ ಮೈಸೂರಿಗೆ ಬಸ್‌ಗಳು ಬರುತ್ತಿವೆ. 

ಅಂತರರಾಜ್ಯ ಬಸ್‌ ಸಂಚಾರ ಆರಂಭವಾಗಿರುವುದರಿಂದ ಗುಂಡ್ಲುಪೇಟೆ ತಾಲ್ಲೂಕಿನ ಜನರಿಗೆ ಅನುಕೂಲವಾಗಿದೆ. ತಮಿಳುನಾಡಿನ ನೀಲಗಿರಿ ಹಾಗೂ ತಾಲ್ಲೂಕಿನ ನಡುವಿನ ಮುಕ್ತ ಬಾಂಧವ್ಯ ಮತ್ತೆ ಬೆಸೆದುಕೊಂಡಂತಾಗಿದೆ. 

ಕೋವಿಡ್ ಕಾರಣದಿಂದ ಮಾರ್ಚ್ ತಿಂಗಳಿನಿಂದ ಸಮೂಹ ಸಾರಿಗೆ ವ್ಯವಸ್ಥೆ ರದ್ದಾಗಿತ್ತು. ಇದರಿಂದಾಗಿ ಎರಡು ರಾಜ್ಯಗಳ ಗಡಿ ಭಾಗದ ಜನರಿಗೆ ತೀವ್ರ ತೊಂದರೆಯಾಗಿತ್ತು. ಸಾವು ನೋವು, ಮದುವೆ, ಗೃಹಪ್ರವೇಶ ಮುಂತಾದ ಕಾರ್ಯಗಳಿಗೆ ಹೋಗಿ ಬರಲು ಆಗುತ್ತಿರಲಿಲ್ಲ. ಕೇವಲ ಪೋನಿನ ಮೂಲಕವೇ ಸಂಪರ್ಕ ಸಾಧಿಸಬೇಕಿತ್ತು.

ಗುಂಡ್ಲುಪೇಟೆ ತಾಲ್ಲೂಕಿನ ಅನೇಕ ಜನರು ನೀಲಗಿರಿ, ಮತ್ತು ಕೇರಳದ ವಯನಾಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಬಂಧಿಕರು ಇದ್ದಾರೆ. ಅಲ್ಲಿಯೂ ಅನೇಕ ಕನ್ನಡಿಗರಿದ್ದು ಕೊಡುಕೊಳ್ಳುವಿಕೆ ಇದೆ. ಕೋವಿಡ್ ದಿಗ್ಬಂಧನದಿಂದಾಗಿ ಸ್ಥಗಿತ ಬಸ್‌ಗಳ ಸಂಚಾರ ಈಗ ಆರಂಭವಾಗಿರುವುದರಿಂದ ಅನೇಕರು ನಿಟ್ಟುಸಿರು ಬಿಟ್ಟಿದ್ದಾರೆ.

‘ಮಗಳನ್ನು ತಮಿಳುನಾಡಿನ ಕೊಯಮತ್ತೂರಿನ ಹುಡುಗನಿಗೆ ಕೊಟ್ಟಿದ್ದೇವೆ. ಬಾಣಂತನಕ್ಕಾಗಿ ಬಂದಾಗ ಕೋವಿಡ್ ಹಾವಳಿ ಆರಂಭವಾಯಿತು. ವರ್ಷ ಕಳೆದರೂ ಕಳಿಸಿರಲಿಲ್ಲ. ಬಸ್‌ಗಳೂ ಇರಲಿಲ್ಲ. ಈಗ ಬಸ್‌ ಸಂಚಾರ ಆರಂಭವಾಗಿದ್ದು ಇನ್ನು ಕಳುಹಿಸಬಹುದು’ ಎಂದು  ತಾಲ್ಲೂಕಿನ ಹಂಗಳ ಗ್ರಾಮದ ರಮೇಶ್‌ ಅವರು ತಿಳಿಸಿದರು.

‘ನೀಲಗಿರಿ ಜಿಲ್ಲೆಗೆ ಪಾಸ್ ಶೀಘ್ರವಾಗಿ ದೊರೆಯದ ಕಾರಣ ಅನೇಕರಿಗೆ ಸಾವು –ನೋವು ಇನ್ನಿತರ ತುರ್ತು ಸಂದರ್ಭದಲ್ಲಿ ಸರಾಗವಾಗಿ ಹೋಗಿ ಬರಲು ಆಗುತ್ತಿರಲಿಲ್ಲ. ಇದೀಗ ಬಸ್ ಸಂಚಾರ ಆರಂಭವಾಗಿರುವುದು ಅನೇಕರಿಗೆ ಉಪಯೋಗ ಆಗುತ್ತದೆ’ ಎಂದು ಮಹದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಗುಂಡ್ಲುಪೇಟೆ ಡಿಪೊದಿಂದ ಮೂರು ಬಸ್‌ಗಳನ್ನು ಬಿಡಲಾಗಿದೆ. ಉಳಿದಂತೆ, ಬೆಂಗಳೂರು, ಮೈಸೂರು, ಮಡಿಕೇರಿ, ಹಾಸನ, ಕೊಳ್ಳೆಗಾಲ, ಮಂಡ್ಯ ಡಿಪೊದಿಂದಲೂ ಬಸ್‌ಗಳು ಸಂಚರಿಸುತ್ತಿವೆ. ಊಟಿ, ಗೂಡಲೂರು ಮತ್ತು ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನಿಂದ ತಮಿಳುನಾಡಿನ ಸಾರಿಗೆ ಬಸ್‌ಗಳು ತಾಲ್ಲೂಕಿಗೆ ಬರುತ್ತಿವೆ.

‘ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೀಲಗಿರಿ ಜಿಲ್ಲೆಯ ತಾಲ್ಲೂಕುಗಳಿಗೆ ತರಕಾರಿ, ಸೊಪ್ಪು, ಹೂವಿನ ವ್ಯಾಪಾರ ಮತ್ತು ಕೂಲಿಗಾಗಿ ಹೋಗುವವರಿದ್ದರು. ಸಾರಿಗೆ ಕಡಿತದಿಂದಾಗಿ ಎಲ್ಲವೂ ನಿಂತಿತ್ತು. ಇದೀಗ ಸಾರಿಗೆ ವ್ಯವಸ್ಥೆ ಆರಂಭವಾಗಿರುವುದರಿಂದ ವ್ಯಾಪಾರಿಗಳು ಮತ್ತು ಕೆಲಸಕ್ಕೆ ಹೋಗುವವರಲ್ಲಿ ಮಂದಹಾಸ ಮೂಡಿದೆ’ ಎನ್ನುತ್ತಾರೆ ಪ್ರತಿನಿತ್ಯ ಗೂಡಲೂರಿಗೆ ಹೋಗಿ ಹೂ ಮಾರುತ್ತಿದ್ದ ಲಕ್ಕಮ್ಮ.

ಬೇಡಿಕೆಗೆ ಅನುಸಾರವಾಗಿ ಬಸ್‌ ಸಂಚಾರ
ಅಂತರರಾಜ್ಯ ಬಸ್‌ ಸಂಚಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರು, ‘ಎರಡು ದಿನಗಳಿಂದ ಬಸ್‌ಗಳು ಸಂಚರಿಸುತ್ತಿವೆ.  ಈ ಮೊದಲು ನಮ್ಮಲ್ಲಿಂದ 20 ಬಸ್‌ಗಳು ತಮಿಳುನಾಡಿನ ಕಡೆಗೆ ಹೋಗುತ್ತಿತ್ತು. ಸದ್ಯ 10 ಬಸ್‌ಗಳನ್ನು ಹಾಕಿದ್ದೇವೆ. ಊಟಿ, ಕೊಯಮತ್ತೂರು, ತಾಳವಾಡಿ ಕಡೆಗೆ ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆಗೆ ಆದರಿಸಿ ಬಸ್‌ಗಳು ಸಂಚರಿಸುತ್ತಿವೆ’ ಎಂದರು. 

‘ತಮಿಳುನಾಡಿನಿಂದಲೂ ಸರ್ಕಾರಿ ಬಸ್‌ಗಳು ಬಸ್‌ ಬರುತ್ತಿವೆ. ನಮ್ಮ ಜಿಲ್ಲೆಯಾಗಿ ಮೈಸೂರಿಗೆ ಸಂಚರಿಸುತ್ತಿವೆ. ಶುಕ್ರವಾರ ಎಂಟು ಬಸ್‌ಗಳು ಬಂದಿವೆ’ ಎಂದು ಅವರು ಮಾಹಿತಿ ನೀಡಿದರು. ‌

‘ಸ್ಥಳೀಯ ಡಿಪೊಗಳಿಂದ ಕೇರಳಕ್ಕೆ ಬಸ್‌ ಸಂಚರಿಸುತ್ತಿಲ್ಲ. ಅಲ್ಲಿ ಇನ್ನೂ ಚಾಲಕರಿಗೆ ಪಾಸ್‌ ಕೇಳುತ್ತಿದ್ದಾರೆ. ಮೈಸೂರು, ಬೆಂಗಳೂರಿನಿಂದ ರಾಜಹಂಸ, ಐರಾವತ ಬಸ್‌ಗಳು ಸಂಚಾರ ನಡೆಸುತ್ತಿವೆ’ ಎಂದು ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು