ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಕಪ್ಪು ಪುಡಿಬೆಲ್ಲ, ಕಾಕಂಬಿ ಘಮಲು: ರೈತರ ನೂತನ ಪ್ರಯೋಗ

ಸಾವಯವ ಬೆಲ್ಲದ ವಹಿವಾಟು
Last Updated 25 ಫೆಬ್ರುವರಿ 2022, 6:10 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಹಲವು ಪ್ರಗತಿಪರ ಕೃಷಿಕರು ಈಗ ಆರೋಗ್ಯ ಪೂರ್ಣ ಆಹಾರ ಮತ್ತು ರಾಸಾಯನಿಕ ಮುಕ್ತ ಕೃಷಿ ಉತ್ಪಾದನೆಗೆಮುಂದಡಿ ಇಟ್ಟಿದ್ದಾರೆ. ಇದರ ಮೊದಲ ಪ್ರಯೋಗವಾಗಿ ಕಪ್ಪುಬೆಲ್ಲ, ಜೋನಿಬೆಲ್ಲ ತಯಾರಿಸಲುಸಿದ್ಧತೆ ನಡೆಸಿದ್ದಾರೆ.

ಬಹುತೇಕ ಅಡುಗೆ ಮನೆಯಿಂದ ಕಾಣೆಯಾಗಿರುವ ಹುಡಿಬೆಲ್ಲ,ಕಾಕಂಬಿಯನ್ನು ಮತ್ತೆ ಗ್ರಾಹಕರಿಗೆ ಮುಟ್ಟಿಸುವ ಉಮೇದಿನಲ್ಲಿ ಘಟಕಗಳು ತಲೆ ಎತ್ತಲಿವೆ.

ಮೂರು ದಶಕಗಳಿಂದ ಕಣ್ಮರೆಯಾಗಿದ್ದ ಕರಿಬೆಲ್ಲದ ಅಚ್ಚು, ಮೌಲ್ಯವರ್ಧಿತ ಉಪ ಉತ್ಪನ್ನಗಳ ಸವಿರುಚಿ ಇನ್ನು ಗ್ರಾಹಕರಿಗೆ ಸಿಗಲಿದೆ. ಬೆಲ್ಲವನ್ನು ಶುಚಿ, ಸಿಹಿ ಮತ್ತು ಸುವಾಸಿತ ಗುಣಗಳಿಂದಸಮೃದ್ಧಗೊಳಿಸುವ ಕಾಯಕದತ್ತ ರೈತರು ಚಿತ್ತ ಹರಿಸಿದ್ದಾರೆ.

ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬುಉತ್ಪಾದಿಸಲಾಗುತ್ತದೆ. ಹೊಸ ತಳಿಯ ಕಬ್ಬಿನ ಶೇ 95 ಭಾಗ ರಾಸಾಯನಿಕ ಗೊಬ್ಬರ, ಕೀಟ ನಾಶಕ, ಕಳೆ ನಾಶಕಗಳನ್ನು ಬೇಡುತ್ತವೆ.

ಹೆಚ್ಚಿನ ಇಳುವರಿಗಾಗಿ ಹೆಚ್ಚಿನ ಒಳಸುರಿ ಅನಿವಾರ್ಯ ಎಂಬಂತಾಗಿದೆ. ಸಕ್ಕರೆ ಕಾರ್ಖಾನೆ ಮತ್ತು ಆಲೆಮನೆಗಳಿಗೆ ಇಂತಹ ತಾಕುಗಳಿಂದಲೇ ಕಬ್ಬು ಪೂರೈಸಲಾಗುತ್ತದೆ. ಆದರೆ, ಮಿಶ್ರ ಪದ್ಧತಿಯಲ್ಲಿ ಕಬ್ಬಿನ ಬೇಸಾಯ ಮಾಡಿ, ಕೊಯ್ಲು ಮಾಡಿ, ಗಾಣದಿಂದ ನುರಿಸಿ, ನುರಿತ ಶ್ರಮಿಕರಿಂದ ಬೆಲ್ಲ ಉತ್ಪಾದಿಸುವುದು ಇಂದಿನ ದಿನಗಳಲ್ಲಿ ಸವಾಲು.

ಇದನ್ನು ಮನಗಂಡಿರುವ ಕೆಲವು ಸಾಗುವಳಿದಾರರು ಜನರ ಆರೋಗ್ಯಕ್ಕೆ ಒತ್ತು ನೀಡಿ, ಸ್ವಾಸ್ಥ್ಯ ಕಾಪಾಡುವ ನೈಸರ್ಗಿಕಸ್ನೇಹಿ ವಿಧಾನದಿಂದ ಬೆಲ್ಲ ತಯಾರಿಸಲು ಮುಂದಾಗಿದ್ದಾರೆ.

‘ಸುಭಾಷ್ ಪಾಳೇಕಾರ್ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿದರೆ ಖರ್ಚು ಉಳಿಸಬಹುದು. ಕಬ್ಬು ನಾಟಿ ಮಾಡುವ ಹಂತದಿಂದಲೇ ಸಾವಯವ ಇಲ್ಲವೇ ನೈಸರ್ಗಿಕ ಕೃಷಿ ಕೈಗೊಳ್ಳಬೇಕು. ಹಟ್ಟಿ ಗೊಬ್ಬರ, ಆಕಳ ಗಂಜಳ, ದ್ರವ ಮತ್ತು ಗೋಮೂತ್ರದಿಂದ ಘನ ಜೀವಾಮೃತವನ್ನು ಕಬ್ಬಿನತಾಕಿಗೆ ಬಳಸಬೇಕು. ಇದರ ಬಳಕೆಯಿಂದ ಮಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಭೂಮಿಯಲ್ಲಿಸೂಕ್ಷ್ಮ ಜೀವಾಣು ಮತ್ತು ಎರೆ ಹುಳಗಳು ಸೃಷ್ಟಿಯಾಗುತ್ತವೆ. ಬೆಳೆ ಆವರಿಸುವ ರೋಗಮತ್ತು ಕೀಟ ಬಾಧೆಯಿಂದ ಫಸಲನ್ನು ರಕ್ಷಿಸಲು ಸಾಧ್ಯ’ ಎಂದು ಹೇಳುತ್ತಾರೆ ಅನ್ನದಾತರು.

ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಗೆ ರಾಸಾಯನಿಕ ಮುಕ್ತ ಕಪ್ಪು ಬೆಲ್ಲರವಾನೆ ಆಗುತ್ತದೆ. ಸ್ಥಳೀಯ ಮಾರುಕಟ್ಟೆಗೂ ಪೂರೈಕೆ ಆಗುತ್ತಿದೆ.

ಮೈಸೂರು ಭಾಗಗಳ ಮಳಿಗೆ ಮತ್ತು ಆಹಾರ ಮೇಳಗಳಲ್ಲಿ ಕುರಿಕಾಲು ಕಪ್ಪು ಅಚ್ಚಿನ ಬೆಲ್ಲ ಪರಿಚಯಿಸಲಾಗುತ್ತದೆ. 1 ಕೆ.ಜಿ. ತೂಗುವ ಪುಡಿ ಬೆಲ್ಲದ ದರ ₹ 65ರಂತೆ ಮಾರಾಟ ಮಾಡಲಾಗುತ್ತದೆ. ಪಟ್ಟಣದಲ್ಲಿ ಕೆ.ಜಿ.ಗೆ ₹ 75 ಧಾರಣೆ ಇದೆ. ಶುಂಠಿ ಮತ್ತು ಏಲಕ್ಕಿ
ಮಿಶ್ರಿತ ಕಾಕಂಬಿ (ಜೋನಿ ಬೆಲ್ಲ) ಕೆ.ಜಿ.ಗೆ ₹ 75 ಬೆಲೆ ಇದ್ದು, ಮಡಕೆ ಇಲ್ಲವೇ ಬಾಟಲಿಗಳಲ್ಲಿ ಪೂರೈಸಲಾಗುತ್ತದೆ.

ಅಂತರ ಬೆಳೆಯಿಂದ ವೆಚ್ಚ ಕಡಿಮೆ
‘1 ಎಕರೆಯಲ್ಲಿನ 40 ಟನ್ ಕಬ್ಬು ನುರಿಸಿ, 50 ಕ್ವಿಂಟಲ್ ಬೆಲ್ಲ ತಯಾರಿಸಬಹುದು.ವಾರ್ಷಿಕ ಬೆಳೆಯ ಖರ್ಚು ₹ 2 ಲಕ್ಷ. ಅಂತರ ಬೆಳೆಯಿಂದ ಇತರ ಬೆಳೆಗಳ ವೆಚ್ಚದ ಬಾಬತ್ತು ತಗ್ಗಿಸಬಹುದು. ಈ ವರ್ಷ ನೇರವಾಗಿ ಗ್ರಾಹಕರಿಗೆ ಬೆಲ್ಲ ಪೂರೈಕೆಆಗುತ್ತಿದ್ದು, ₹ 2 ಲಕ್ಷ ಲಾಭದ ನಿರೀಕ್ಷೆ ಇದೆ’ ಎನ್ನುತ್ತಾರೆ ಯುವ ರೈತಎಚ್.ಮೂಕಹಳ್ಳಿ ಪೃಥ್ವಿ.

‘ಯುವ ಕೃಷಿಕರು ತಮ್ಮ ಪರಿಶ್ರಮಕ್ಕೆ ಸೂಕ್ತ ಬೆಲೆ ಸಿಗಲು ತಾವು ಉತ್ಪಾದಿಸುವ ಕಬ್ಬುಇಲ್ಲವೇ ಇತರೆ ಬೆಳೆಗಳನ್ನು ವಿವಿಧ ಪ್ರಕ್ರಿಯೆಗೆ ಒಳಪಡಿಸಿ ಅದರಿಂದ ಅಧಿಕ ಲಾಭಪಡೆಯುವ ಪ್ರಯತ್ನ ಮಾಡಬೇಕು. ಮುಂದಿನ ದಿನಗಳಲ್ಲಿ ದೊಡ್ಡ ಘಟಕಗಳ ಮೂಲಕ ಬೆಲ್ಲದ ಕವಾ, ಪೇಡ ಪರಿಚಯಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT