ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಡಿ.1ಕ್ಕೆ ‘ಜನ ಶತ್ರು’ ನಾಟಕ ಪ್ರದರ್ಶನ

Published 29 ನವೆಂಬರ್ 2023, 8:01 IST
Last Updated 29 ನವೆಂಬರ್ 2023, 8:01 IST
ಅಕ್ಷರ ಗಾತ್ರ

ಚಾಮರಾಜನಗರ: ಶಾಂತಲಾ ಕಲಾವಿದರು ಹಾಗೂ ರಂಗಶಂಕರ ಸಹಯೋಗದಲ್ಲಿ ಡಿ.1ರಂದು ನಗರದಲ್ಲಿ ರಂಗ ನಿರ್ದೇಶಕ ಎಸ್‌.ಸುರೇಂದ್ರನಾಥ್‌ ರಚಿಸಿ ನಿರ್ದೇಶಿಸಿರುವ ‘ಜನಶತ್ರು’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಂದ್ರನಾಥ್‌, ‘ನಾರ್ವೆಯ ಇಬ್ಸೆನ್‌ ಅವಾರ್ಡ್‌ ಮತ್ತು ರಂಗ ಶಂಕರದ ಸಹಕಾರದಲ್ಲಿ ನಾರ್ವೆಯ ಹೆನ್ರಿಕ್‌ ಇಬ್ಸೆನ್‌ ಅವರ ‘ಎನಿಮಿ ಆಫ್‌ ದ ಪೀಪಲ್‌’ ಎಂಬ ನಾಟಕವನ್ನು ಆಧರಿಸಿ ಜನ ಶತ್ರು ನಾಟಕವನ್ನು ರೂಪಿಸಲಾಗಿದೆ. ಸ್ಥಳೀಯ ಸಮಸ್ಯೆಯನ್ನು ನಾಟಕದ ಮೂಲಕ ತೋರಿಸಲಾಗುತ್ತದೆ. ಈಗಾಗಲೇ ಬೆಂಗಳೂರು, ಮೈಸೂರು, ಹೆಗ್ಗೋಡು, ಹಾವೇರಿ, ಮಂಗಳೂರುಗಳಲ್ಲಿ ಪ್ರದರ್ಶನ ನಡೆದಿದೆ. ಅಲ್ಲಿನ ಸ್ಥಳೀಯ ಸಮಸ್ಯೆಯನ್ನು ಕಥಾವಸ್ತುವಾಗಿ ತೆಗೆದುಕೊಳ್ಳಲಾಗಿದೆ. ಆಯಾ ಪ್ರದೇಶದ ಸ್ಥಳೀಯ ನಾಟಕ ತಂಡದ ಕಲಾವಿದರೇ ಅಭಿನಯಿಸುತ್ತಾರೆ’ ಎಂದರು.

‘40ರಿಂದ 50ರ ಪ್ರೇಕ್ಷಕರ ಮುಂದೆ ನಾಟಕ ಪ್ರದರ್ಶನ ಮಾಡಲಾಗುತ್ತದೆ. ನಾಲ್ಕೈದು ಮಂದಿ ಕಲಾವಿದರು ಪ್ರೇಕ್ಷಕರೊಂದಿಗೆ ನೇರ ಸಂವಾದದಲ್ಲಿ ತೊಡಗುತ್ತಾರೆ. ಈ ನಾಟಕದ ಪ್ರದರ್ಶನವನ್ನು ಅಭಿಯಾನದ ರೀತಿಯಲ್ಲಿ ಮಾಡಲಾಗುತ್ತಿದೆ’ ಎಂದು ಸುರೇಂದ್ರನಾಥ್‌ ಹೇಳಿದರು.

‘ಡಿ.1ರಂದು ಜಿಲ್ಲಾಡಳಿತ ಭವನದ ವರನಟ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ರಾತ್ರಿ 7 ಗಂಟೆಗೆ ನಾಟಕ ಪ್ರದರ್ಶನವಿದ್ದು ₹50 ಪ್ರವೇಶ ದರ ಇರಲಿದ್ದು, ನಾಟಕದ ಅವಧಿ 40 ನಿಮಿಷ’ ಎಂದರು.

ಶಾಂತಲಾ ಕಲಾವಿದರು ತಂಡದ ಚಿತ್ರಾ ಮಾತನಾಡಿ, ‘ಶಾಂತಲಾ ಕಲಾವಿದರು 50ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್ನಿಂದ 2023ರ ಡಿಸೆಂಬರ್ ತನಕ ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನಶತ್ರು ನಾಟಕದ ಮೂಲಕ ಕೊನೆಗೊಳ್ಳಲಿದೆ. ಹೊಸ ವರ್ಷಾರಂಭದಲ್ಲಿ ಮೂರು ದಿನಗಳನಾಟಕೋತ್ಸವ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಶಾಂತಲಾ ಕಲಾವಿದರು ಮ್ಯಾನೇಜಿಂಗ್‌ ಟ್ರಸ್ಟಿ ಕೆ.ವೆಂಕಟರಾಜು, ತಂಡದ ಅಧ್ಯಕ್ಷ ಅಬ್ರಹಾಂ ಡಿ.ಸಿಲ್ವ, ತಂಡದ ಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT