ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಣ್ಣ ನನಗೆ ‘ಬಿಗ್ ಬ್ರದರ್’: ಶಾಸಕ ಕೃಷ್ಣಮೂರ್ತಿ

Published : 9 ಸೆಪ್ಟೆಂಬರ್ 2024, 15:33 IST
Last Updated : 9 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಕೊಳ್ಳೇಗಾಲ: ನಾನು ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಇಬ್ಬರೂ ರಾಜಕೀಯಕ್ಕೆ 80ರ ದಶಕದಲ್ಲಿ ಪದಾರ್ಪಣೆ ಮಾಡಿದೆವು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ನಗರದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಸೋಮವಾರ ನೂತನ ಸಂಸದ ಸುನೀಲ್ ಬೋಸ್ ಅವರಿಗೆ ಸನ್ಮಾನ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ಅವರ 74ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಎಸ್.ಜಯಣ್ಣ ಅವರು ವಯಸ್ಸು ಮತ್ತು ರಾಜಕೀಯ ಅನುಭವದಲ್ಲಿ ಅವರು ನನಗಿಂತ ಹಿರಿಯರು. ಹಾಗಾಗಿ, ಇಂದಿಗೂ ನಾನು ಅವರನ್ನು ‘ಬಿಗ್ ಬ್ರದರ್’ ಎಂದೇ ಕರೆಯುತ್ತೇನೆ. ಹಿಂದೆ ನಾವಿಬ್ಬರೂ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರ ಮಾಡಲು ಹೋರಾಟ ಮಾಡಿ ಗೆದ್ದಿದ್ದೇವೆ. ಸಂತೇಮರಹಳ್ಳಿ ಮೀಸಲು ಕ್ಷೇತ್ರದಿಂದ ನಾನು ಶಾಸಕನಾದ ವೇಳೆ ಎಸ್.ಜಯಣ್ಣ ಅವರು ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ 1994ರಲ್ಲಿ ಶಾಸಕರಾಗಿದ್ದರು. ನಂತರದಲ್ಲಿ ಮತ್ತೆ ನಾನು ಸಂತೆಮರಹಳ್ಳಿ ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರಕ್ಕೆ ಮರು ಆಯ್ಕೆಗೊಂಡು 2004ರಲ್ಲಿ ಒಂದು ಮತದ ಅಂತರದಿಂದ ಪರಾಭವಗೊಳ್ಳಬೇಕಾಯಿತು’ ಎಂದು ಸ್ಮರಿಸಿದರು.

‘2008ರಲ್ಲಿ ರಾಜಕೀಯ ಷಡ್ಯಂತ್ರದಿಂದ ನಾನು ಸಂತೆಮರಹಳ್ಳಿ ಕ್ಷೇತ್ರವನ್ನೇ ಕಳೆದುಕೊಂಡು ಸ್ಪರ್ಧೆಗೆ ಅವಕಾಶವಾಗದೆ ರಾಜಕೀಯ ವನವಾಸ ಅನುಭವಿಸಿದೆ. ಹಿಂದೆ ನಮ್ಮ ತಂದೆ ದಿ.ಬಿ.ರಾಚಯ್ಯ ಅವರು ಯಳಂದೂರು ಕ್ಷೇತ್ರವಾಗಿದ್ದಾಗ ಚುನಾಯಿತರಾಗಿದ್ದರು. ಅಂತೆಯೇ, ನನ್ನ ಹಳೇ ಕ್ಷೇತ್ರ ಸಂತೇಮರಹಳ್ಳಿ ಕೂಡ ಕೊಳ್ಳೇಗಾಲ ಕ್ಷೇತ್ರಕ್ಕೆ ಸೇರಿದ್ದರಿಂದ ಇಲ್ಲಿ ಜನ ಸೇವೆ ಮಾಡಲು ಬಯಸಿದೆ. ಸಂಸದ ಸುನಿಲ್ ಬೋಸ್ ಅವರು ಇನ್ನೂ ಯುವಕರು. ತುಂಬು ಉತ್ಸಾಹದಿಂದ ಕ್ಷೇತ್ರದ ಅಭಿವೃದ್ಧಿಗೊಳಿಸುವ ಜತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.

ನಂತರ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ, ‘ಎರಡು ಬಾರಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಶಾಸಕರಾದ ನನಗೆ 2015 ನಂತರದಲ್ಲಿ ಅನಾರೋಗ್ಯ ಕಾಡಿತು. ಇದರಿಂದ ಅಂದು ಕೂಡ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ನನ್ನ ಬದಲಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಪಕ್ಷದಿಂದ 2018ರಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಆ ವೇಳೆಗೆ ಮಾಜಿ ಸಚಿವ ಎನ್.ಮಹೇಶ್ ಅವರ ಮೇಲಿನ ಅಪಾರ ಅನುಕಂಪದಿಂದಾಗಿ ಎ.ಆರ್.ಕೆ ಸೋತರು. ಈ ನಡುವೆ 2024ರಲ್ಲಿ ನನ್ನ ಸಮ್ಮತಿ ಪಡೆದು ಸಿದ್ದರಾಮಯ್ಯ ಅವರು ಎಆರ್‌ಕೆ ಅವರಿಗೆ ಟಿಕೆಟ್ ನೀಡಿದರು. ಚುನಾವಣೆಯಲ್ಲಿ ಎಲ್ಲರೂ ಸಂಘಟಿರಾಗಿ ಎ.ಆರ್.ಕೆ ಅವರಿಗೆ ಅಭೂತಪೂರ್ವ ಗೆಲುವು ನೀಡಿದ್ದೇವೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ನನಗೆ ನಿಗಮ ಮಂಡಳಿ ನೀಡಿದ್ದಾರೆ. ಈ ನಡುವೆ ನಾವಿಬ್ಬರೂ ಒಗ್ಗೂಡಿ ಕ್ಷೇತ್ರ ಮತ್ತು ಪಕ್ಷದ ಸಂಘಟನೆಗೆ ದುಡಿಯುತ್ತೇವೆ ಎಂದು ಹೇಳಿದರು.

‘ಯಾವುದೇ ಪರಿಸ್ಥಿತಿ ಎದುರಾದರೂ ಸಿದ್ದರಾಮಯ್ಯ ಅವರನ್ನು ಬಿಟ್ಟು ರಾಜಕಾರಣ ಮಾಡುವುದಿಲ್ಲ’ ಜನರ ಜತೆಗಿದ್ದುಕೊಂಡು ಬದುಕು ಮುನ್ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಸಂಸದ ಸುನಿಲ್ ಬೋಸ್ ಮಾತನಾಡಿ, ‘ಹಿರಿಯರ ಮಾರ್ಗದರ್ಶನದಲ್ಲಿ ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿ ಮಾಡುವುದೇ ನನ್ನ ಗುರಿ. ಜನರ ಆಶೀರ್ವಾದ ನನ್ನ ಮೇಲಿದೆ’ ಎಂದರು.

ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ. ಶಂಕರ್, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರು, ಬಿ.ತೋಟೇಶ್, ಮುಖಂಡ ಕೊಪ್ಪಳ್ಳಿ ಮಹದೇವ ನಾಯಕ, ಉದಯ ಶಂಕರ್, ಪ್ರಕಾಶ್ ಹಾಗೂ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT