ಬುಧವಾರ, ಆಗಸ್ಟ್ 17, 2022
25 °C
ಹರಳುಕೋಟೆ ಜನಾರ್ದನ ಸ್ವಾಮಿ ದೇವಾಲಯದ ವಿವರಗಳನ್ನೊಳಗೊಂಡ ಕಿರು ಹೊತ್ತಗೆ ಬಿಡುಗಡೆ

‘ಚಾಮರಾಜನಗರ ದರ್ಶನ’ ಕೃತಿ ಸಂಪಾದನೆ: ಜಿಲ್ಲಾಧಿಕಾರಿ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಪರಂಪರೆ, ಸಂಸ್ಕೃತಿ ಹಾಗೂ ಐತಿಹಾಸಿಕ ಸ್ಥಳಗಳ್ನು ಸಮಗ್ರವಾಗಿ ಪರಿಚಯಿಸುವ ‘ಚಾಮರಾಜನಗರ ದರ್ಶನ’ ಎಂಬ ಕೃತಿಯನ್ನು ಜಿಲ್ಲಾಡಳಿತದಿಂದ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬುಧವಾರ ಹೇಳಿದರು. 

ನಗರಕ್ಕೆ ಸಮೀಪದ ಹರಳುಕೋಟೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆದ, ದೇವಾಲಯವನ್ನು ಪರಿಚಯಿಸುವ ‘ಜಯತು ಜನಾರ್ದನ’ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 

‘ಚಾಮರಾಜನಗರ ಜಿಲ್ಲೆ ಸಂಪದ್ಭರಿತ ಜಿಲ್ಲೆ. ಹೊರ ಸೌಂದರ್ಯ ಮಾತ್ರವಲ್ಲದೇ, ಜಿಲ್ಲೆಯ ಆಂತರ್ಯವೂ ಸೌಂದರ್ಯದಿಂದ ಕೂಡಿದೆ. ಇಲ್ಲಿನ ಪರಂಪರೆ, ಸಂಸ್ಕೃತಿ ಎಲ್ಲವೂ ವಿಶಿಷ್ಟವಾಗಿದೆ. ಇಲ್ಲಿ ಹಲವಾರು ಐತಿಹಾಸಿಕ ತಾಣಗಳಿವೆ. ಶತಮಾನ ದಾಟಿದ 860ರಷ್ಟು ದೇವಾಲಯಗಳು ಇಲ್ಲಿವೆ. ಆದರೆ, ಸ್ಥಳೀಯ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ’ ಎಂದರು. 

‘ಜಿಲ್ಲೆಯ ಶ್ರೀಮಂತ ಪರಂಪರೆ, ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಸಮಗ್ರ ಕೃತಿಯೊಂದರ ಅವಶ್ಯಕತೆ ಇದೆ. ‘ಚಾಮರಾಜನಗರ ದರ್ಶನ’ ಎಂಬ ಪುಸ್ತಕವನ್ನು ಸಿದ್ಧಪಡಿಸಬೇಕು ಎಂಬ ಆಲೋಚನೆ ಇದೆ. ಶೀಘ್ರದಲ್ಲಿ ಸಾಹಿತಿಗಳು, ಇತಿಹಾಸಕಾರರು, ಜಿಲ್ಲೆಯ ಬಗ್ಗೆ ಮಾಹಿತಿ ಉಳ್ಳವರು, ಕಾಳಜಿ ಹೊಂದಿರುವವರನ್ನು ಕರೆದು ಅವರೊಂದಿಗೆ ಸಭೆ ಮಾಡಿ ಸಂಪಾದಕ ಮಂಡಳಿಯನ್ನು ರಚಿಸಲಾಗುವುದು. ಈ ಮಂಡಳಿ ಮೂಲಕ ಕೃತಿ ಸಂಪಾದನೆ ಮಾಡಲಾಗುವುದು. ಆರು ತಿಂಗಳೊಳಗೆ ಪುಸ್ತಕ ಹೊರತರಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು. 

‘ಪುರಾಣ ಹಾಗೂ ಇತಿಹಾಸ ಎರಡೂ ಬೇರೆ ಬೇರೆ. ಇವುಗಳ ನಡುವೆ ಸೂಕ್ಷ್ಮ ಇದೆ. ಇತಿಹಾಸವನ್ನು ತಿರುಚುವ ಕೆಲಸಕ್ಕೆ ಯಾರೂ ಕೈಹಾಕಬಾರದು. ದೇವಸ್ಥಾನಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು. ಹಾಗೆಂದು, ಅಭಿವೃದ್ಧಿಯ ಹೆಸರಿನಲ್ಲಿ ದೇವಾಲಯದ ಸರಳತೆ, ಪಾವಿತ್ರ್ಯ ಹಾಳು ಮಾಡಬಾರದು’ ಎಂದರು. 

ಜಯತು ಜನಾರ್ದನ ಪುಸ್ತಕವನ್ನು ರೂಪಿಸಿದ ದೇವಾಲಯದ ಅರ್ಚಕ ಅನಂತ ಪ್ರಸಾದ್‌ ಅವರನ್ನು ಶ್ಲಾಘಿಸಿದ ಡಾ.ಎಂ.ಆರ್.ರವಿ ಅವರು, ‘ಸರ್ಕಾರದಿಂದ ಅತ್ಯಂತ ಕಡಿಮೆ ಸಂಬಳ ಬರುತ್ತಿದ್ದರೂ (ತಿಂಗಳಿಗೆ ₹2.5) ಅನಂತ ಪ್ರಸಾದ್‌ ಅವರು ಆಸಕ್ತಿಯಿಂದ ಪುಸ್ತಕ ರಚಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ. 

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ಹರಳುಕೋಟೆ ಜನಾರ್ದನಸ್ವಾಮಿ ದೇವಸ್ಥಾನಕ್ಕೆ ಅದರದ್ದೇ ಅದ ಇತಿಹಾಸ ಇದೆ. ಆದರೆ, ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆ. ಅನಂತ ಪ್ರಸಾದ್‌ ಅವರು ಅರ್ಚಕರಾದ ಮೇಲೆ ಸ್ವಲ್ಪ ಅಭಿವೃದ್ಧಿ ಕಂಡಿದೆ’ ಎಂದರು. 

‘ನಗರದ ಹೃದಯ ಭಾಗದಲ್ಲಿರುವ ವೀರಭದ್ರಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಅದರ ಸುತ್ತಲೂ ಕೆಲವರು ಮನೆ ಕಟ್ಟಿದ್ದಾರೆ. ಸರ್ಕಾರಿ ಜಾಗವನ್ನು ಯಾರೂ ಆಕ್ರಮಿಸುವಂತಿಲ್ಲ. ಜಿಲ್ಲಾಧಿಕಾರಿ ಅವರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದರು. 

ಬಿಜೆಪಿ ಮುಖಂಡ ಎಂ.ರಾಮಚಂದ್ರ, ನಗರಸಭಾ ಸದಸ್ಯರಾದ ಶೋಭಾ, ಮನೋಜ್ ಪಟೇಲ್, ಪ್ರಕಾಶ್, ಅರ್ಚಕರಾದ ಅನಂತ ಪ್ರಸಾದ್, ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಜಿಲ್ಲಾ ಕಸಾಪ ಅಧ್ಯಕ್ಷ ವಿನಯ್, ಎಸ್.ಲಕ್ಷ್ಮೀನರಸಿಂಹ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.