ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಿನಾಥಂನ ‘ಮಿಸ್ಟ್ರಿ ಟ್ರೇಲ್ ಕ್ಯಾಂಪ್’ ಜಂಗಲ್ ಲಾಡ್ಜಸ್‌ ತೆಕ್ಕೆಗೆ

ಪ್ರವಾಸಿಗರ ಕೊರತೆಯಿಂದ ಕ್ಯಾಂಪ್‌ ಹೊಣೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದ ಸಂಸ್ಥೆ
Last Updated 30 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಹನೂರು: ಕಾವೇರಿ ವನ್ಯಧಾಮದ ಗೋಪಿನಾಥಂನಲ್ಲಿರುವ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಅನ್ನು ಇನ್ನು ಮುಂದೆ, ಪ್ರವಾಸೋದ್ಯಮ ಇಲಾಖೆಯ ಅಂಗ ಸಂಸ್ಥೆ ಜಂಗಲ್ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ (ಜೆಎಲ್‌‌ಆರ್‌) ನಿರ್ವಹಿಸಲಿದೆ. ಕ್ಯಾಂಪ್‌ ಅನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಈ ವರ್ಷಾರಂಭದಲ್ಲೇ ಪ್ರಕ್ರಿಯೆ ಆರಂಭವಾಗಿತ್ತು. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಹಸ್ತಾಂತರ ವಿಳಂಬವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಅಭಿವೃದ್ಧಿ ಪಡಿಸಿದ್ದೇ ಜೆಎಲ್‌ಆರ್‌: ಗೋಪಿನಾಥಂ ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌ ಅನ್ನು 2010ರಲ್ಲಿ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಸಂಸ್ಥೆಯೇ ಅಭಿವೃದ್ಧಿ ಪಡಿಸಿತ್ತು.

ಗಡಿಭಾಗದಲ್ಲಿರುವ ಹೊಗೆನಕಲ್ ಜಲಪಾತವನ್ನು ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ, ಪ್ರವಾಸಿಗರ ಅನುಕೂಲಕ್ಕಾಗಿ 10 ಟೆಂಟ್, ಒಂದು ಡಾರ್ಮೆಟರಿ, ಊಟದ ಹಾಲ್ ಹಾಗೂ ಅಡುಗೆ ಮನೆಯನ್ನು ನಿರ್ಮಿಸಿತ್ತು. ಪ್ರವಾಸಿಗರ ಕೊರತೆಯಿಂದಾಗಿ ಸಂಸ್ಥೆಯು 2011-12ರಲ್ಲಿ ಕಾವೇರಿ ವನ್ಯಧಾಮದ ಆಡಳಿತಕ್ಕೆ (ಅರಣ್ಯ ಇಲಾಖೆಗ) ಕ್ಯಾಪ್‌ನ ನಿರ್ವಹಣೆ ಹೊಣೆಯನ್ನು ವಹಿಸಿತ್ತು. ಒಂಬತ್ತು ವರ್ಷಗಳ ಬಳಿಕ ಮಿಸ್ಟ್ರಿ ಟ್ರೇಲ್ ಕ್ಯಾಂಪ್‌ನ ನಿರ್ವಹಣೆಯನ್ನು ಜೆಎಲ್‌ಆರ್‌ ವಹಿಸಿಕೊಳ್ಳಲಿದೆ.

ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌, ಗೋಪಿನಾಥಂಗೆ ಹೋಗುವ ಮುಖ್ಯ ರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿದೆ. ಹೊಗೆನಕಲ್‌ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮಾಹಿತಿ ಕೊರತೆಯಿಂದಾಗಿ ಜೆಎಲ್‌ಆರ್‌ಗೆ ನಿರೀಕ್ಷಿತ ಲಾಭ ಆಗಿರಲಿಲ್ಲ.

ಅರಣ್ಯ ಇಲಾಖೆಯು ಒಂಬತ್ತು ವರ್ಷಗಳಿಂದ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಮೂಲಕ ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತಿದೆ. ಸುಂದರ ಪರಿಸರದ ನಡುವೆ, ಗೋಪಿನಾಥಂ ಜಲಾಶಯಕ್ಕೆ ಹೊಂದಿಕೊಂಡಿರುವ ಕ್ಯಾಂಪ್‌ ರಜಾ ದಿನಗಳಲ್ಲಿ ಹಾಗೂ ವಿಶೇಷ ದಿನಗಳಲ್ಲಿ ಪ್ರವಾಸಿಗರಿಂದ ಭರ್ತಿಯಾಗುತ್ತಿತ್ತು. ಅರಣ್ಯ ಇಲಾಖೆಗೆ ಗಮನಾರ್ಹ ಆದಾಯವನ್ನೂ ತರುತ್ತಿತ್ತು.

ಈ ಕ್ಯಾಂಪ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌‌ ಸಂಸ್ಥೆ, ಪ್ರವಾಸಿಗರಿಗೆ ದೋಣಿ ವಿಹಾರ‌ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ ಎಂದು ಗೊತ್ತಾಗಿದೆ.

‘ಇದುವರೆಗೆ ಅರಣ್ಯ ಇಲಾಖೆ ವಶದಲ್ಲಿದ್ದ ಗೋಪಿನಾಥಂ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಅನ್ನು ಇನ್ನು ಮುಂದೆ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ನಿರ್ವಹಿಸಲಿದೆ. ಈ ಸಂಬಂಧದ ಪ್ರಕ್ರಿಯೆಗಳು ಆರಂಭವಾಗಿವೆ’ ಎಂದು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಡಾ.ಎಸ್‌.ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೆಎಲ್‌ಆರ್‌ ಪ್ರತಿನಿಧಿಗಳು ಕ್ಯಾಂಪ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲವೂ ಅಂತಿಮವಾಗಿದೆ. ಯಾವಾಗ ಬೇಕಾದರೂ ಅವರು ಕ್ಯಾಂಪ್‌ ಅನ್ನು ತಮ್ಮ ವಶಕ್ಕೆ ಪಡೆಯಬಹುದು’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT