ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟ: ಗಜಕುಂಡಲದಲ್ಲಿ ಚಿಮ್ಮಿತು ಅಂತರ್ಜಲ

ಐತಿಹಾಸಿಕ ಜಲಮೂಲ ಹುಡುಕಿದ ಜನರು
Last Updated 13 ಜೂನ್ 2020, 19:30 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸ್ಥಳೀಯರು, ರಂಗನಾಥಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿ ಲಾಕ್‌ಡೌನ್‌ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ತ್ಯಾಜ್ಯ, ಹೂಳು ತುಂಬಿಕೊಂಡಿದ್ದ ದೇವಾಲಯದ ಗಜಕುಂಡಲ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ. ಪರಿಣಾಮವಾಗಿ ಕೊಳದಲ್ಲಿ ಶುದ್ಧ ‘ಜಲನಿಧಿ’ ಸಂಗ್ರಹವಾಗಿದೆ.

ದೇವಳದ ಪೂರ್ವ ದಿಕ್ಕಿನಲ್ಲಿರುವ ಈ ಕೊಳದಿಂದ ಪ್ರತಿ ಮುಂಜಾನೆ ತೀರ್ಥವನ್ನು ತಂದು ರಂಗನಾಥನ ಪೂಜೆಗೆ ಬಳಸಲಾಗುತ್ತದೆ.ಇದಕ್ಕೆ ಶತಮಾನದ ಚರಿತ್ರೆಯೂ ಸೇರಿಕೊಂಡಿದೆ. ನೂರಾರು ವರ್ಷಗಳ ಹಿಂದೆ ರಾಜ, ಮಹಾರಾಜರು, ದಿವಾನರು ದಾನ, ದತ್ತಿ ಬಿಟ್ಟು ಅಭಿವೃದ್ಧಿ ಪಡಿಸಿದ ಕುರುಹುಗಳಿವೆ.

ಒಂದು ಎಕರೆಯಷ್ಟು ವಿಸ್ತಾರವಾಗಿರುವ ಕೊಳ ಒಂದು ಕಾಲದಲ್ಲಿ ಜೀವ ಜಲದಿಂದ ನಳನಳಿಸುತ್ತಿತ್ತು. ಆದರೆ, ಹೂಳು ತುಂಬಿಕೊಂಡಿದ್ದರಿಂದ ನೀರು ಸಂಗ್ರಹವಾಗುತ್ತಿರಲಿಲ್ಲ. ಕೆರೆಯಲ್ಲಿ ನೀರು ಇಂಗದೆ ಕೆಳಪಾತ್ರಕ್ಕೆ ಹರಿಯುತ್ತಿತ್ತು.

ವಿನಾಶದ ಅಂಚಿನಲ್ಲಿದ್ದ ಕಲ್ಯಾಣಿಯನ್ನು ಉಳಿಸಿಕೊಳ್ಳಲು ಸ್ಥಳೀಯರು ಮುಂದಾಗಿದ್ದರು. ಇದಕ್ಕಾಗಿ ಹೂಳು ತೆಗೆಯುವುದು ಅನಿವಾರ್ಯವಾಗಿತ್ತು. ಈ ಬಗ್ಗೆ ಎಷ್ಟೇ ಮೊರೆ ಹೋದರೂ ಸರ್ಕಾರದಿಂದನಿರೀಕ್ಷಿತ ಅನುದಾನ ದೊರೆತಿರಲಿಲ್ಲ.

ಲಾಕ್‌ಡೌನ್‌ ಅವಧಿಯಲ್ಲಿ ದೇಗುಲದ ನೌಕರರು ಕಲುಷಿತ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಲು ಮುಂದಾದಾಗ, ಗ್ರಾಮದ ಜನರ ಸಹಭಾಗಿತ್ವ ದೊರೆಯಿತು. ನಂತರ ಗ್ರಾಮ ಪಂಚಾಯಿತಿಯು ನರೇಗಾ ಯೋಜನೆ ಮೂಲಕವೂ ನೆರವಾಯಿತು. ಸ್ಥಳೀಯ ಯುವಕರು ಸೇರಿಕೊಂಡರು.

‘30 ದಿನಗಳ ನಿರಂತರ ಕೆಲಸದ ಬಳಿಕ ಕೊಳ ಸ್ವಚ್ಛವಾಗಿದೆ. ನೀರು ಸಂಗ್ರಹವಾಗುತ್ತಿದೆ. ಈ ವರ್ಷ ಮಳೆ ನೀರು ತುಂಬಲಿದೆ’ ಎಂದು ದೇವಾಲಯದ ನೌಕರರು ಹೇಳಿದರು.

‘40x40 ಅಳತೆಯ ಕೊಳದ ಆಳ 25 ಅಡಿಗಳಿಗಿಂತ ಹೆಚ್ಚಿದೆ. ಕಾಲಾಂತರದಲ್ಲಿ ತ್ಯಾಜ್ಯ ಶೇಖರಣೆಗೊಂಡು 10 ಅಡಿಗೆ ಇಳಿದಿತ್ತು. ಇದರಿಂದ ಜಲಮೂಲ ದಿಕ್ಕು ಬದಲಿಸಿತ್ತು. ಇಂತಹ ಸಮಯದಲ್ಲಿ ಇದರ ಸಂರಕ್ಷಣೆಗೆ ಜನ ಸಮುದಾಯ ಮುಂದಾದಾಗ ನರೇಗಾ ಯೋಜನೆಯಡಿ ನೆರವು ಒದಗಿಸಲು ಅಧಿಕಾರಿಗಳು ಮುಂದಾದರು’ ಎಂದು ಬಿಳಿಗಿರಿರಂಗನಬೆಟ್ಟದ ಪಿಡಿಒ ಬಿ.ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿವೃದ್ಧಿಗೆ ₹3 ಲಕ್ಷ ಮೊತ್ತದ ಕ್ರಿಯಾ ಯೋಜನೆ

ಕಲ್ಯಾಣಿ ಸಂರಕ್ಷಣೆ ಯೋಜನೆಯಡಿ ₹3 ಲಕ್ಷ ವಿನಿಯೋಗಿಸಲು ಪಂಚಾಯಿತಿ ಕ್ರಿಯಾ ಯೋಜನೆ ರೂಪಿಸಿದೆ. ಈ ಕಾಮಗಾರಿಯನ್ನು ನರೇಗಾದಡಿ ಗುರುತಿಸಿ, ಸ್ವಯಂ ಪ್ರೇರಿತರಾಗಿ ದುಡಿದ ಯುವ ಜನರಿಗೆ ಅಲ್ಪಮಟ್ಟಿನ ಆರ್ಥಿಕ ನೆರವು ಒದಗಿಸಲಾಗಿದೆ.

‘ಕೊಳದಲ್ಲಿದ್ದ ನೂರಾರು ಟನ್‌ ಹೂಳು ತೆಗೆಯಲಾಗಿದೆ. ಪಾಚಿಗಟ್ಟಿ ಮಲಿನವಾಗಿದ್ದ ಸ್ಥಳವನ್ನುಸುಣ್ಣ ಬಳಸಿ ಶುದ್ಧಗೊಳಿಸಲಾಗಿದೆ. ದೇವಾಲಯದ ನೌಕರರ ಸ್ವಯಂ ಪ್ರೇರಣೆಯಿಂದ ಆರಂಭಿಸಿದ ಈ ಕೆಲಸದಲ್ಲಿ ಜನರೂ ಪಾಲ್ಗೊಂಡಿದ್ದಾರೆ. ಕಲ್ಯಾಣಿಯಲ್ಲಿ ಈಗ ಶುದ್ಧ ನೀರು ತುಂಬುತ್ತಿದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ವೆಂಕಟೇಶ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಲಮೂಲದ ಅಭಿವೃದ್ಧಿಯ ಪ್ರಯತ್ನವು ಶ್ಲಾಘನೀಯವಾದದ್ದು. ಪಂಚಾಯಿತಿಯಿಂದ ಅಲ್ಪ ಪ್ರಮಾಣದ ನೆರವು ದೊರೆತಿದೆ. ಕಲ್ಯಾಣಿಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಕಾಡಿನ ಪ್ರಾಣಿ, ಪಕ್ಷಿಗಳಿಗೆ ವರ್ಷ ಪೂರ್ತಿ ನೀರು ದೊರೆಯಲಿದೆ. ಕೆಳ ಪಾತ್ರದ ಜನರ ಕೊಳವೆ ಬಾವಿಗಳಿಗೂ ಜಲ ಮರುಪೂರಣ ಸಾಧ್ಯವಾಗಿದೆ’ ಎಂದು ಗ್ರಾಮಸ್ಥ ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT