ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ಆದರ್ಶ, ಚಿಂತನೆ ಇಂದಿಗೂ ಪ್ರಸ್ತುತ: ಎಸ್.ಕಾತ್ಯಾಯಿನಿದೇವಿ

ಜಿಲ್ಲಾಡಳಿತದಿಂದ ಕನಕದಾಸರ ಜಯಂತಿ ಸರಳ ಆಚರಣೆ; ದಾಸ ಶ್ರೇಷ್ಠರ ಕೊಡುಗೆಗಳ ಸ್ಮರಣೆ
Last Updated 22 ನವೆಂಬರ್ 2021, 16:16 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಾರತೀಯ ಸಾಂಸ್ಕೃತಿಕ ಪರಂಪರೆಯ ದಾಸಶ್ರೇಷ್ಠ ಕನಕದಾಸರ ಸಾಮಾಜಿಕ ಆದರ್ಶ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸರಳವಾಗಿ ಆಯೋಜಿಸಲಾಗಿದ್ದ ಭಕ್ತ ಕನಕದಾಸರ 534ನೇ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ‘ಅಸಮಾನತೆ ತುಂಬಿದ್ದ ಸಮಾಜದಲ್ಲಿ, ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂದು ಜನರನ್ನು ಎಚ್ಚರಿಸಿದ ಕನಕದಾಸರು ತಮ್ಮ ಜಾಗೃತ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಭಕ್ತಿ ಮಾರ್ಗದತ್ತ ಜನರನ್ನು ಕೊಂಡೊಯ್ದ ಕನಕದಾಸರ ಮೌಲ್ಯಯುತ ಕೀರ್ತನೆಗಳ ಸಾರವನ್ನು ಎಲ್ಲರೂ ಅರಿಯಬೇಕಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಮಾತನಾಡಿ, ‘ಉತ್ತರ ಭಾರತದಲ್ಲಿ ಕಬೀರ ದಾಸರು, ತುಳಸಿ ದಾಸರಂತೆ ದಕ್ಷಿಣ ಭಾರತದಲ್ಲಿ ಪುರಂದರ ದಾಸರು, ಕನಕ ದಾಸರು ದಾಸ ಶ್ರೇಷ್ಠರಾಗಿದ್ದಾರೆ. ಅನೇಕ ವೈರುಧ್ಯ, ವೈಷಮ್ಯಗಳಿಂದ ಕೂಡಿದ್ದ ಅಂದಿನ ಕಾಲಘಟ್ಟದಲ್ಲಿ ಜನತೆಯನ್ನು ಭ್ರಮಾ ಲೋಕದಿಂದ ವಾಸ್ತವತೆಗೆ ತಂದು ಎಲ್ಲರನ್ನು ಸಮಾಜಮುಖಿಯಾಗಿಸಿದವರು ಕನಕದಾಸರು’ ಎಂದು ಬಣ್ಣಿಸಿದರು.

ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ, ‘ಈ ದೇಶವು ಕಾಲಕಾಲಕ್ಕೆ ತನ್ನದೇ ಸಂಸ್ಕೃತಿ, ಪರಂಪರೆ ಬದಲಾಯಿಸುವ ಮೂಲಕ ಇಡೀ ಜಗತ್ತಿಗೆ ಮಾನವೀಯ ಚಿಂತನೆಯ ಸಾರವನ್ನು ಕಟ್ಟಿಕೊಟ್ಟಿದೆ. ಭಾರತದ ಋಷಿ ಪರಂಪರೆಯಲ್ಲಿ ಅನೇಕ ಸಾಧು ಸಂತರು, ದಾರ್ಶನಿಕರು, ಚಿಂತಕರು ಬಂದು ಹೋಗಿದ್ದಾರೆ. ಅವರಲ್ಲಿ ಭಕ್ತ ಕನಕದಾಸರು ಅಗ್ರಗಣ್ಯ. ದಾಸ ಎಂದರೇ ಭಗವಂತನಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು ಎಂದರ್ಥ. ಸ್ವತಃ ದೇವರನ್ನೇ ಸಾಕ್ಷಾತ್ಕರಿಸಿಕೊಂಡಿದ್ದ ಕನಕದಾಸರ ಸಾಹಿತ್ಯದ ವಿಚಾರಧಾರೆಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ’ ಎಂದರು.

ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎನ್.ಬಾಲರಾಜು ಮಾತನಾಡಿ, ‘ಕನಕದಾಸರು ಸಮಾನತೆಯ ಆಧಾರದಲ್ಲಿ ಸರಳ ಕನ್ನಡದಲ್ಲಿ ಭಕ್ತಿ ಸಾಹಿತ್ಯದ ಕೀರ್ತನೆಗಳನ್ನು ರಚಿಸಿ ಸಾಮಾಜಿಕ ಅಸಮಾನತೆ ತೊಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಮೋಹನ ತರಂಗಿಣಿ, ನಳ ದಮಯಂತಿ ಚರಿತೆ, ಹರಿಭಕ್ತಿಸಾರ ಕೃತಿಗಳನ್ನು ರಚಿಸಿದ ಕನಕದಾಸರು ತಮ್ಮ ಅದ್ಭುತ ವಿಚಾರಧಾರೆಗಳ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘದ ಮಾಜಿ ಉಪಾಧ್ಯಕ್ಷರಾದ ಮಾದಾಪುರ ರವಿಕುಮಾರ್ ದಾಸ ಶ್ರೇಷ್ಠ ಕನಕದಾಸರ ಕುರಿತ ಸ್ವರಚಿತ ಕವನ ವಾಚನ ಮಾಡಿದರು.

ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್‌ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್, ಸಮಾಜದ ಮುಖಂಡರಾದ ಸೋಮಣ್ಣೇಗೌಡ, ಬಸವರಾಜು, ನಾಗರಾಜು, ಮಹೇಶ್, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT